ಸಿದ್ದು, ಡಿಕೆಶಿ ಸ್ಪರ್ಧೆ ಮಾಡುವುದು ಬೇಡ
ಸಂತೋಷ ಲಾಡ ಮನದಿಂಗಿತ
ಹುಬ್ಬಳ್ಳಿ: ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರು ಯಾವುದೇ ಒಂದು ಕ್ಷೇತ್ರದಿಂದ ಸ್ಪರ್ಧೆ ಮಾಡುವುದು ಬೇಡ. ಅವರು ರಾಜ್ಯಾದ್ಯಂತ ಪಕ್ಷ ಬಲಪಡಿಸುವ ಕಾರ್ಯಮಾಡಲಿ ಎಂದು ಮಾಜಿ ಸಚಿವ ಸಂತೋಷ ಲಾಡ್ ಅಭಿಪ್ರಾಯಪಟ್ಟರು.
ಕ್ಷೇತ್ರಕ್ಕೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಭಯ ನಾಯಕರು ಪಕ್ಷ ಬಲಪಡಿಸುವ ಕೆಲಸ ಮಾಡಲಿ. ಒಂದು ಕ್ಷೇತ್ರದಲ್ಲಿ ಸ್ಪರ್ಧಿಸಿ ಅಲ್ಲಿಗೆ ಸೀಮಿತವಾಗುವುದು ಬೇಡ. ಇಡೀ ರಾಜ್ಯ ಸುತ್ತಬೇಕಾಗಿರುವುದರಿಂದ ಅವರು ಸ್ಪರ್ಧಿಸದಿರುವುದು ಒಳ್ಳೆಯದು. ರಾಜ್ಯ ಸುತ್ತಾಟ ಮಾಡಿ ಪ್ರಚಾರದಲ್ಲಿ ಇಬ್ಬರು ನಾಯಕರು ತೊಡಗಿಕೊಂಡರೆ ಪಕ್ಷಕ್ಕೆ ಅನುಕೂಲ.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಸ್ಪರ್ಧಿಸದೆ ಅಧಿಕಾರ ನಡೆಸಬಹುದು. ಇದು ತಮ್ಮ ವೈಯಕ್ತಿಕ ಅಭಿಪ್ರಾಯವೆಂದರು.
ತಮಗೆ ಸಿದ್ದರಾಮಯ್ಯ ಅವರು ಬಳ್ಳಾರಿ ಹೋಗಿ ಅಂತ ಹೇಳಿಲ್ಲ. ನಾಗರಾಜ ಛಬ್ಬಿಯವರೂ ನನ್ನ ಸ್ನೇಹಿತರು. ಅವರೇ ಸಿದ್ದರಾಮಯ್ಯ ಬಳಿ ಹೋಗಿ ಸಂತೋಷ ಲಾಡ ಅವರನ್ನು ಬಳ್ಳಾರಿಗೆ ಕಳುಹಿಸಿ ಅಂತ ಕೇಳಿಕೊಂಡಿದ್ದಾರೆ. ಅವರು ಮಾತನಾಡಿದ ವಿಚಾರವನ್ನು ಸಿದ್ದರಾಮಯ್ಯ ಸಹ ನನಗೆ ಹೇಳಿದ್ದಾರೆ. ಆದರೆ ನಾನು ಕಲಘಟಗಿ ಕ್ಷೇತ್ರ ಬಿಟ್ಟು ಎಲ್ಲಿಗೂ ಹೋಗುವುದಿಲ್ಲ ಎಂದರು.
ಛಬ್ಬಿಯವರು ಪ್ರತಿ ಚುನಾವಣೆಯಲ್ಲಿ ಒಂದೊಂದು ಕ್ಷೇತ್ರ ಹುಡುಕಾಟ ಮಾಡುತ್ತಾರೆ. ಈಗ ಕಲಘಟಗಿಯಲ್ಲಿ ಬಂದು ಕುಕ್ಕರ್ ಹಂಚಿಕೆ ಮಾಡುತ್ತಿದ್ದಾರೆ.2008 ರಿಂದ ಕಲಘಟಗಿಯಲ್ಲಿ ಕಾಂಗ್ರೆಸ್ ಗೆಲ್ಲಿಸಿದ್ದು ನಾನು. ಟಿಕೆಟ್ ವಿಚಾರದಲ್ಲಿ ಗೊಂದಲ ಸೃಷ್ಟಿಯಾಗುತ್ತಿರುವುದನ್ನು ತಡೆಯಲು ಪಕ್ಷದ ನಾಯಕರು ಈ ವಿಚಾರವನ್ನು ಈಗಲೇ ಪರಿಹರಿಸಿದರೆ ಒಳ್ಳೆಯದು ಎಂಬ ಅಭಿಪ್ರಾಯಪಟ್ಟರು.