ಧಾರವಾಡ: ಪಕ್ಷದ ಸಂಘಟನೆಗೆ ಧಕ್ಕೆ ತರುವ ರೀತಿಯ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯ ಅಧ್ಯಕ್ಷರ ಸಹಿತ ವರಿಷ್ಠರ ಗಮನಕ್ಕೆ ತಂದು ಎಐಸಿಸಿ ಸದಸ್ಯ ದೀಪಕ ಚಿಂಚೋರೆ ಅವರಿಗೆ ನೋಟಿಸು ನೀಡುವುದಾಗಿ ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ ತಿಳಿಸಿದ್ದಾರೆ.
ಮೂರು ದಿನಗಳ ಹಿಂದೆ ಧಾರವಾಡದಲ್ಲಿ ನಡೆದ ಮುಸ್ಲಿಂ ಮುಖಂಡರ ಸಭೆಯಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಚಿಂಚೋರೆ ಅವರು, ’ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡುವ ಪಕ್ಷದಿಂದ ಸ್ಪರ್ಧಿಸುವುದಾಗಿ’ ಹೇಳಿದ್ದ ವಿಡಿಯೋ ವೈರಲ್ ಆಗಿತ್ತು. ಈ ಹಿನ್ನಲೆಯಲ್ಲಿ ಅವರಿಗೆ ಕಾರಣ ಕೇಳಿ ನೋಟಿಸು ತಲುಪಿಸಲು ಸೂಚಿಸಿರುವುದಾಗಿ ಹೇಳಿದರು.
ವಿಧಾನಸಭಾ ಚುನಾವಣೆಯಲ್ಲಿ ಹು-ಧಾ ಪಶ್ಚಿಮ ಕ್ಷೇತ್ರದಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ ಪ್ರಬಲ ಆಕಾಂಕ್ಷಿಯೂ ಆಗಿರುವ ಚಿಂಚೋರೆ ಅವರ ಈ ಹೇಳಿಕೆ ಇದೀಗ ಪಕ್ಷದಲ್ಲಿ ತೀವ್ರ ಚರ್ಚೆಗೊಳಗಾಗುತ್ತಿದೆ. ಇನ್ನೊಂದೆಡೆ ಚಿಂಚೋರೆ ಅವರು ಮಾತ ನಾಡುತ್ತಿರುವ ಸಂದರ್ಭದಲ್ಲಿ ಇನ್ನೋರ್ವ ಮುಖಂಡ ಇಸ್ಮಾಯಿಲ್ ತಮಟಗಾರ ಕೂಡ ಪಕ್ಕದಲ್ಲಿಯೇ ಇದ್ದರು. ಆ ಸಂದರ್ಭದಲ್ಲಿ ಮಾತನಾಡಿದ ಚಿಂಚೋರೆ ಅವರು, ಇಬ್ಬರೂ ಹು-ಧಾ ಪಶ್ಚಿಮ ಕ್ಷೇತ್ರದಿಂದ ಕಣಕ್ಕಿಳಿಯಲು ಬಯಸಿದ್ದೇವೆ ಎನ್ನುತ್ತ ಟಿಕೆಟ್ ನೀಡಿದ ಪಕ್ಷದಿಂದ ಸ್ಪರ್ಧಿಸುವುದಾಗಿ ಹೇಳಿರುವುದು ತೀವ್ರ ಚರ್ಚೆಯಾಗುತ್ತಿದೆ.
ಹೇಳಿಕೆ ತಿರುಚಲಾಗಿದೆ: ಕಳೆದ ೪೦ ವರ್ಷಗಳಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿಯುತ್ತಿದ್ದೇನೆ.ಪಕ್ಷದ ಸಂಘಟನೆ ಮತ್ತು ಘನತೆಗೆ ಚ್ಯುತಿ ತರುವ ಕೆಲಸ ಇದುವರೆಗೂ ಮಾಡಿಲ್ಲ. ಈಗ ಹು-ಧಾ ಪಶ್ಚಿಮ ಕ್ಷೇತ್ರದಲ್ಲಿ ಪಕ್ಷದ ಸಂಘಟನೆಗಾಗಿ ತಾವೂ ಶ್ರಮಿಸುತ್ತಿದ್ದು, ಹಲವು ಹೋರಾಟಗಳ ಮೂಲಕ ಎಲ್ಲ ಸಮುದಾಯದ ಜನರ ವಿಶ್ವಾಸ ಗಳಿಸಿದ್ದೇನೆ. ಅಲ್ಲದೇ ಪಕ್ಷದ ಎಲ್ಲ ಪದಾಧಿಕಾರಿಗಳು, ಕಾರ್ಯಕರ್ತರ ಜೊತೆ ಕೂಡಿ ಪಕ್ಷದ ವರ್ಚಸ್ಸು ಹೆಚ್ಚಿಸಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ. ಮುಂಬರುವ ಚುನಾವಣೆಯಲ್ಲಿ ತಮಗೆ ಟಿಕೆಟ್ ಸಿಗುವುದು ನಿಶ್ಚಿತ. ಇದಕ್ಕೆ ಪೂರಕ ಎನ್ನುವಂತೆ ಪಕ್ಷದ ಪ್ರಮುಖ ಪದಾಧಿಕಾರಿಗಳು ಮತ್ತು ಕಾರ್ಯ ಕರ್ತರು ನನ್ನ ಬೆಂಬಲಕ್ಕಿದ್ದಾರೆ. ಇನ್ನೊಂದೆಡೆ ಈ ಬಾರಿ ತಮಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಧಾರವಾಡದ ಅಂಜುಮನ್ ಕೂಡ ತಿಳಿಸಿದೆ. ಈ ಕಾರಣದಿಂದ ನನ್ನ ಹೇಳಿಕೆಯನ್ನು ತಿರುಚಿ ತೇಜೋವಧೆ ಮಾಡಲಾಗುತ್ತಿದೆ. ಈ ಬಗ್ಗೆ ನನಗೆ ಇದುವರೆಗೂ ಯಾವುದೇ ನೋಟಿಸು ಬಂದಿಲ್ಲ ಎಂದಿದ್ದಾರೆ,