ಏರ್‌ಲಿಪ್ಟ್ ಮೂಲಕ ಮೃತ ದೇಹ ತರಲು ವ್ಯವಸ್ಥೆ
ಹುಬ್ಬಳ್ಳಿ: ಓಡಿಸ್ಸಾದಲ್ಲಿ ಇತ್ತೀಚಿಗೆ ನಡೆದ ರೈಲು ದುರಂತದ ವೇಳೆ ಕನ್ನಡಿಗರ ರಕ್ಷಣೆಗೆ ಕಾರ್ಮಿಕ ಸಚಿವ ಸಂತೋಷ ಲಾಡ್ ಅವರು ಟೊಂಕ ಕಟ್ಟಿ ನಿಂತು ಹಗಲಿರುಳೆನ್ನದೇ ಕಾರ್ಯಪ್ರವೃತ್ತರಾಗಿದ್ದರಲ್ಲದೇ ಗಾಯಾಳುಗಳ ಆಕ್ರಂದನಕ್ಕೆ ಮರುಗಿ ನೆರವಿನ ಹಸ್ತ ನೀಡಿದ್ದರು.
ಈ ಭೀಕರ ರೈಲು ದುರಂತದಲ್ಲಿ ಕೂದಲೆಳೆ ಅಂತರದಲ್ಲಿ ಬದುಕುಳಿದಿದ್ದ ಚಿಕ್ಕಮಗಳೂರು ಜಿಲ್ಲೆ ಮೂಲದ 110 ಜನ ಜೈನ ಯಾತ್ರಾರ್ಥಿಗಳು ಶ್ರೀಕ್ಷೇತ್ರ ಸಮ್ಮೇದ ಶಿಖರ್ಜಿ ಯಾತ್ರೆ ಮುಗಿಸಿಕೊಂಡು ಪಾಟ್ನಾದಿಂದ ರಾಜ್ಯಕ್ಕೆ ರೈಲು ಮೂಲಕ ಹಿಂದಿರುಗುವಾಗ ಯಾತ್ರಾರ್ಥಿಗಳ ಪೈಕಿ 72 ವರ್ಷದ ಧರ್ಮ ಪಾಲಯ್ಯ ಎಂಬುವವರು ತೀವ್ರ ಹೃದಯಾಘಾತದಿಂದ ರೈಲಿನಲ್ಲೇ ನಿಧನಹೊಂದಿದ್ದರು.
ಮೃತ ದೇಹವು ಮಿರ್ಜಾಪುರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಇದ್ದು ಮೃತ ದೇಹವನ್ನು ಊರಿಗೆ ತರುವ ವ್ಯವಸ್ಥೆ ಮಾಡಲು ಸಹಾಯ ಮಾಡಿ ಎಂದು ಹರ್ಷೇಂದ್ರ ಜೈನ್ ಎನ್ನುವವರು ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಅವರಲ್ಲಿ ಮನವಿ ಮಾಡಿದದ್ದರು.
ಲಾಡ್ ಅವರು ಮನವಿಗೆ ತಕ್ಷಣವೇ ಸ್ಪಂದಿಸಿದ್ದು, ತಮ್ಮ ಸ್ವಂತ ಖರ್ಚಿನ ಮೂಲಕ ಮೃತ ದೇಹವನ್ನು ಏರ್ ಲಿಫ್ಟ್ ಮಾಡಿಸುವ ಹಾಗೂ ಅವರ ಕುಟುಂಬದ 5 ಜನರನ್ನು ವಿಮಾನದ ಮೂಲಕ ರಾಜ್ಯಕ್ಕೆ ಕರೆತರಲು ವ್ಯವಸ್ಥೆ ಮಾಡಿದ್ದಾರೆ. ಇಂದು ಮಧ್ಯಾಹ್ನ 4.30 ಗಂಟೆಗೆ ಶವ ವಾರಣಾಸಿಯಿಂದ ಬೆಂಗಳೂರು ತಲುಪಲಿದೆ.