ಗಡುವಿನೊಳಗೆ ಮೀಸಲಾತಿ ಘೋಷಿಸಿ- ಇಲ್ಲವೇ ತಕ್ಕ ಶಾಸ್ತಿ: ಸ್ವಾಮೀಜಿ ಎಚ್ಚರಿಕೆ
ಹುಬ್ಬಳ್ಳಿ: ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಸರ್ಕಾರ 2 ಎ ಮೀಸಲಾತಿ ನೀಡದೇ ಹೋದರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅದರ ಪರಿಣಾಮ ಎದುರಿಸಲಿದೆ ಎಂದು ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದರು.
ಸರ್ಕಾರವು ಕೊಟ್ಟಿರುವ ಮಾತನ್ನು ನೆನಪಿಸಲು ಹಾಗೂ ಗಮನ ಸೆಳೆಯಲು ಹಮ್ಮಿಕೊಳ್ಳಲಾದ ಬೃಹತ್ ರ್‍ಯಾಲಿ ಹಾಗೂ ಧರಣಿ ಸತ್ಯಾಗ್ರಹಕ್ಕೂ ಮೊದಲು ನೆಹರೂ ಮೈದಾನದಲ್ಲಿ ನೆರೆದಿದ್ದ ಸಹಸ್ರ ಸಹಸ್ರ ಸಮಾಜ ಬಾಂಧವರನ್ನು ಉದ್ದೇಶಿಸಿ ಅವರು ಮಾತನಾಡಿ, ಈಗಾಗಲೇ ಸರ್ಕಾರ ಮೂರು ಬಾರಿ ಸಮಾಜಕ್ಕೆ ಮೀಸಲಾತಿ ಕೊಡುವ ಭರವಸೆ ನೀಡಿ ಮಾತು ತಪ್ಪಿದೆ. ಅನಿವಾರ್ಯವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮನೆಯ ಮುಂದೆ ಹೋರಾಟ ಆರಂಭಿಸುವ ಎಚ್ಚರಿಕೆ ನೀಡಿದಾಗ ಮುಖ್ಯಮಂತ್ರಿಗಳು ಸಮಾಜದ ಸಚಿವರ ಮೂಲಕ ಮತ್ತೊಮ್ಮೆ ಒಂದು ತಿಂಗಳ ಕಾಲಾವಕಾಶ ಕೇಳಿ ನಾಲ್ಕನೇ ಬಾರಿ ಮೀಸಲಾತಿ ಕೊಡುವ ಭರವಸೆ ನೀಡಿದೆ. ಇದನ್ನು ಸರ್ಕಾರಕ್ಕೆ ನೆನಪಿಸುವ ಹಿನ್ನೆಲೆ ಇಂದು ರ್‍ಯಾಲಿ ನಡೆಸಿ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ಹಕ್ಕೊತ್ತಾಯ ಪತ್ರ ನೀಡಲಾಗುವುದು ಎಂದರು.
ಸರ್ಕಾರ ಅಗಸ್ಟ್ 22 ರೊಳಗೆ ಸಮಾಜಕ್ಕೆ ಮೀಸಲಾತಿ ಕೊಡುವ ವಿಶ್ವಾಸವಿದೆ. ಒಂದು ವೇಳೆ ಮೀಸಲಾತಿ ಸಿಗದೇ ಹೋದಲ್ಲಿ ಮಾಡು ಇಲ್ಲವೇ ಮಡಿ ಎಂಬಂತೆ ಬೆಂಗಳೂರಿನಲ್ಲಿ ಲಕ್ಷಾಂತರ ಸಮಾಜದ ಜನರನ್ನು ಸೇರಿಸಿ ಬೃಹತ್ ಹೋರಾಟ ಮಾಡಲಾಗುವುದು ಎಂದು ಗುಡುಗಿದರು.
ಇದಕ್ಕೂ ಮೊದಲು ಮಾಧ್ಯಮದವರೊಂದಿಗೆ ಮಾತನಾಡಿದ ಶ್ರೀಗಳು ಸರ್ಕಾರ ಗಡುವನ್ನು ಮೀರಿದರೇ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸರ್ಕಾರಕ್ಕೆ ಅದರ ಬಿಸಿ ತಟ್ಟಲಿದೆ. ಬೆಳಗಾವಿ, ಹಾನಗಲ್, ಸ್ಥಳೀಯ ಮಟ್ಟದ ಚುನಾವಣೆಗಳೇ ಸಾಕ್ಷಿ ಎಂದು ಉದಾಹರಣೆ ಸಹಿತ ವಿವರಿಸಿದರಲ್ಲದೇ ಹಿಂದೂಗಳ ರಕ್ಷಣೆಗಾಗಿ ಪರ್ಯಾಯ ರಾಜಕೀಯ ಶಕ್ತಿ ಅವಶ್ಯಕತೆ ಇದೆ ಎನ್ನುವುದಕ್ಕೆ ಸಹಮತ ಇದೆ ಎಂದರು. ಮೀಸಲಾತಿಗೆ ಆಗ್ರಹಿಸಿ ಅನೇಕ ವರ್ಷಗಳಿಂದ ಹೋರಾಟ ನಡೆಸುತ್ತ ಬಂದಿದೆಯೆ ಹೊರತು ಬೇಡಿಕೆ ಈಡೇರಿಸುವ ಯತ್ನ ಮಾಡುತ್ತಿಲ್ಲ. ಕೇವಲ ಮೂಗಿಗೆ ತುಪ್ಪ ಸವರುವ ಕೆಲಸ ನಡೆದಿದೆ ಎಂದರು.
ಶಾಸಕರಾದ ಬಸವರಾಜ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ , ಪ್ರಮುಖ ನೇತಾರ ವಿಜಯಾನಂದ ಕಾಶಪ್ಪನವರ, ಮಾಜಿ ಸಚಿವ ಪಿ.ಸಿ.ಸಿದ್ದನಗೌಡರ,ಮಾಜಿ ಶಾಸಕರಾದ ಎಸ್ ಐ ಚಿಕ್ಕನಗೌಡರ, ಶಿವಾನಂದ ಅಂಬಟಗಟ್ಟಿ, ಸಮಾಜದ ಮುಖಂಡರುಗಳಾದ ಶಿವಲೀಲಾ ವಿನಯ ಕುಲಕರ್ಣಿ, ಬಾಪುಗೌಡ ಪಾಟೀಲ, ವಿಜಯ ಕುಲಕರ್ಣಿ,ಅರವಿಂದ ಕಟಗಿ, ನಿಂಗಣ್ಣ ಕರೀಕಟ್ಟಿ, ವೀರೇಶ ಉಂಡಿ, ನಾಗರಾಜ ಗೌರಿ, ಜಿಜಿ ದ್ಯಾವನಗೌಡ್ರ ರಾಜಶೇಖರ್ ಮೆಣಸಿನಕಾಯಿ, ಸದಾನಂದ ಡಂಗನವರ,ಶಿವಶಂಕರ ಮೂಗಬಸ್ತ, ಅಜ್ಜಪ್ಪ ಹೊರಕೇರಿ, ದೀಪಾ ಗೌರಿ ಸೇರಿದಂತೆ ಅನೇಕರಿದ್ದರು. ಜೈ ಪಂಚಮಸಾಲಿ, ಹರ್ ಹರ್ ಮಹಾದೇವ, ಬೇಕೆ ಬೇಕು ಮೀಸಲಾತಿ ಬೇಕು ಘೋಷಣೆಗಳು ಮುಗಿಲು ಮುಟ್ಟಿದವು.