ಧಾರವಾಡ: ನಗರದ ವಿವಿಧ ಭಾಗಗಳಲ್ಲಿ ರಸ್ತೆ ಬದಿಯಲ್ಲಿನ ಅನಧೀಕೃತ ಡಬ್ಬಾ ಅಂಗಡಿಗಳನ್ನು ಮಹಾನಗರ ಪಾಲಿಕೆಯ ಅಧಿಕಾರಿಗಳು ತೆರವುಗೊಳಿಸಿದ್ದು ಸ್ವಾಗತಾರ್ಹ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದ್ದಾರೆ.
ಸೋಮವಾರ ನಗರದ ನೆಹರು ಮಾರ್ಕೆಟ್‌ನಲ್ಲಿನ ರಸ್ತೆ ಬದಿಯಲ್ಲಿನ ಅನಧೀಕೃತ ಹಣ್ಣಿನ ಅಂಗಡಿಗಳನ್ನು ಮಹಾನಗರ ಪಾಲಿಕೆ ವಲಯ ಅಧಿಕಾರಿ ಮಲ್ಲಿಕಾರ್ಜುನ ಸಬರದ ಅವರ ನೇತೃತ್ವದಲ್ಲಿ ತೆರವುಗೊಳಿಸಿದ್ದು ಉತ್ತಮ ಕಾರ್ಯವಾಗಿದೆ.
ಕಳೆದ ನಾಲ್ಕೈದು ದಶಕಗಳಿಂದ ರಸ್ತೆಯ ಇಕ್ಕೆಲಗಳಲ್ಲಿ ಅನಧೀಕೃತವಾಗಿ ಕೆಲವರು ಹಣ್ಣಿನ ಅಂಗಡಿಗಳನ್ನು ಹಾಕಿಕೊಂಡು ವ್ಯವಹಾರ ನಡೆಸುತ್ತಿದ್ದರು. ಇದರಿಂದ ಅಗಲವಾಗಿದ್ದ ರಸ್ತೆ ಕಿರಿದಾದ ಪ್ರಯುಕ್ತ ವಾಹನಗಳು ಮತ್ತು ಸಾರ್ವಜನಿಕರ ಸುಗಮ ಸಂಚಾರಕ್ಕೆ ತೀವ್ರ ಅಡಚಣಿ ಆಗುತ್ತಿತ್ತು. ಈ ವಿಷಯಲ್ಲಿ ನಾಗರಿಕರು ಪಾಲಿಕೆಯ ನಿರ್ಲಕ್ಷ್ಯದ ಕುರಿತು ಅನೇಕ ಬಾರಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು.ಇದರಿಂದ ಎಚ್ಚೆತ್ತ ಪಾಲಿಕೆ ಅಧಿಕಾರಿಗಳು ಅಂಗಡಿಗಳನ್ನು ಸ್ವಯಂ ಪ್ರೇರಿತವಾಗಿ ತೆರವುಗೊಳಿಸುವಂತೆ ಸಂಬಂಧಿಸಿದ ವ್ಯಾಪಾರಸ್ಥರಿಗೆ ನೋಟೀಸು ನೀಡಿದ್ದರು. ಆದಾಗ್ಯೂ ವ್ಯಾಪಾರಸ್ಥರು ಅಂಗಡಿಗಳನ್ನು ತೆರವುಗೊಳಿಸಿರಲಿಲ್ಲ. ಆದರೆ. ಇದೀಗ ಮಹಾನಗರ ಪಾಲಿಕೆ ಅಧಿಕಾರಿಗಳು ರಸ್ತೆ ಬದಿಯಲ್ಲಿನ ಅನಧೀಕೃತ ಡಬ್ಬಾ ಅಂಗಡಿಗಳನ್ನು ತೆರವುಗೊಳಿಸುವ ಮೂಲಕ ತಮ್ಮ ಕರ್ತವ್ಯ ನಿಭಾಯಿಸಿದ್ದಾರೆ. ಇದು ಸ್ವಾಗತಾರ್ಹ ಬೆಳವಣಿಗೆ. ಸುಂದರ ಮತ್ತು ಸುವ್ಯಸ್ಥಿತ ನಗರ ನಿರ್ಮಾಣಕ್ಕೆ ಮುಂದಾಗಿರುವ ಪಾಲಿಕೆ ಅಧಿಕಾರಿಗಳಿಗೆ ಪ್ರತಿಯೊಬ್ಬ ನಾಗರಿಕರು ಸಹಕಾರ ನೀಡಬೇಕು ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.