62 ಹುದ್ದೆಗಳಿಗೆ ಸಾವಿರ ಅರ್ಜಿ: ಆಕಾಂಕ್ಷಿಗಳ ಆಕ್ರೋಶ
ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆಯ ಅಧೀನದಲ್ಲಿನ ಆಸ್ಪತ್ರೆಗಳಲ್ಲಿ ಖಾಲಿ ಇರುವ ಖಾಲಿ ಇರುವ 62 ಹುದ್ದೆಗಳ ಭರ್ತಿ ಮಾಡಲು ಬುಧವಾರ ಕರೆಯಲಾಗಿದ್ದ ಸಂದರ್ಶನವನ್ನು ದಿಢೀರ್ ಆಗಿ ಮುಂದೂಡಲಾಗಿದ್ದು ಮುಂದೂಡುವ ದೂರದ ಊರುಗಳಿಂದ ಬಂದ ಆಕಾಂಕ್ಷಿಗಳು ಬಂದ ದಾರಿಗೆ ಸುಂಕವಿಲ್ಲದಂತೆ ಹಿಡಿಶಾಪ ಹಾಕುತ್ತಾ ವಾಪಸಾಗಿದ್ದಾರೆ.
ಮಹಾನಗರ ಆಸ್ಪತ್ರೆಯ ವೈದ್ಯರು, ನರ್ಸ, ದಾಖಲೆ ಅಧಿಕಾರಿ, ಪ್ಯಾರಾ ಮೆಡಿಕಲ್ ಮತ್ತು ಡ್ರೈವರ್ ಹುದ್ದೆಗಳಿಗೆ ವಾಕ್-ಇನ್ ಸಂದರ್ಶನಗಳನ್ನು ಬುಧವಾರ ಮತ್ತು ಗುರುವಾರ ನಿಗದಿಪಡಿಸಲಾಗಿದ್ದು, ಆದರೆ ಅಭ್ಯರ್ಥಿಗಳಿಗೆ ಮಾಹಿತಿ ನೀಡದೆ ದಿ.27 ಮತ್ತು 28 ಕ್ಕೆ ಸಂದರ್ಶನವನ್ನು ಮುಂದೂಡಲಾಗಿದ್ದು ಇದಕ್ಕೆ ಮೇಯರ್ ಸಿಂಡಿಕೇಟ್ ಒತ್ತಡವೇ ಕಾರಣ ಎನ್ನಲಾಗಿದೆ.
ತಜ್ಞರ ಸಮಿತಿ ಸಹಿತ ಸಂದರ್ಶನಕ್ಕೆ ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿತ್ತಾದರೂ ಮೇಯರ್ ವಿಪಕ್ಷ ನಾಯಕಿ ಮಾತು ಕೇಳಿ ಮುಂದೂಡಲು ಸೂಚಿಸಿದ್ದಾರೆಂಬ ಮಾತು ಪಾಲಿಕೆಯ ಅಂಗಳದಿಂದಲೇ ಕೇಳಿ ಬರಲಾರಂಭಿಸಿದೆ.
ನಿನ್ನೆ ಸಂದರ್ಶನಕ್ಕೆ ಹಾಜರಾಗಲು ರಾಯಚೂರು, ಕಲಬುರಗಿ, ಯಾದಗಿರಿ, ಕೊಪ್ಪಳ, ಹಾವೇರಿ, ಕಾರವಾರ, ಬೆಂಗಳೂರು, ಪುಣೆ, ಮುಂತಾದೆಡೆಯಿಂದ ಚಿಟಗುಪ್ಪಿ ಆಸ್ಪತ್ರೆ ಆವರಣಕ್ಕೆ ಬಂದಿದ್ದ ಅರ್ಜಿದಾರರನ್ನು ಯಾವುದೇ ಮುನ್ಸೂಚನೆ ಇಲ್ಲದೇ ಮುಂದೂಡಿದ್ದು ಕೆರಳಿಸಿತಲ್ಲದೇ ಕೆಲವರು ವಾಗ್ವಾದಕ್ಕೂ ಇಳಿದರು.
ಪಾಲಿಕೆಯು ಸ್ತ್ರೀರೋಗ ತಜ್ಞರು, ಅರಿವಳಿಕೆ ತಜ್ಞರು, ಸಾಮಾನ್ಯ ಕರ್ತವ್ಯ ವೈದ್ಯರು, ನರ್ಸ್‌ಗಳು, ವಾರ್ಡ್ ಬಾಯ್‌ಗಳು, ಆಂಬುಲೆನ್ಸ್ ಚಾಲಕರು ಮತ್ತು ಇತರ 62 ಹುದ್ದೆಗಳನ್ನು 11 ತಿಂಗಳ ಗೌರವಧನ ಬೇಸಿಸ್‌ನಲ್ಲಿ ತುಂಬಲು ಅರ್ಜಿಗಳನ್ನು ಆಹ್ವಾನಿಸಿತ್ತು. ಸುಮಾರು ಸಾವಿರ ಅರ್ಜಿಗಳು ಬಂದಿವೆಯೆನ್ನಲಾಗಿದೆ. ರಾಯಚೂರು, ಕಲಬುರಗಿ, ಯಾದಗಿರಿ, ಕೊಪ್ಪಳ, ಹಾವೇರಿ, ಕಾರವಾರ, ಬೆಂಗಳೂರು, ಪುಣೆ, ಮತ್ತಿತರ ಕಡೆಗಳಿಂದ ಅರ್ಜಿದಾರರು ಬುಧವಾರ ಬಂದಿದ್ದರು. ಸಂದರ್ಶನಗಳನ್ನು ಮುಂದೂಡಿದ ನಿರ್ಧಾರಕ್ಕೆ ಹಲವರು ಆಕ್ಷೇಪಿಸಿದರೂ ಮುಖ್ಯ ವೈದ್ಯಾಧಿಕಾರಿ ಶ್ರೀಧರ ದಂಡೆಪ್ಪನವರ್ ವಾಸ್ತವ ವಿವರಿಸಿ ಮುಂದಿನ ದಿನಾಂಕದಂದು ಸಂದರ್ಶನ ನಡೆಸುವುದಾಗಿ ಹೇಳಿದರು.
ಸಾಮಾನ್ಯವಾಗಿ ಇಂತಹ ಸಂದರ್ಶನಗಳನ್ನು ಕಿಮ್ಸ್ ಅಧೀಕ್ಷಕರು, ಜಿಲ್ಲಾ ಆರೋಗ್ಯಾಧಿಕಾರಿ, ತಾಲೂಕಾ ವೈದ್ಯಾದಿಕಾರಿಗಳನ್ನೊಳಗೊಂಡ ತಾಂತ್ರಿಕ ಸಮಿತಿ ಸಂದರ್ಶನ ನಡೆಸಿ ಗುತ್ತಿಗೆ ಆಧಾರದ ಮೇಲೆ ಹುದ್ದೆಗಳನ್ನು ಭರ್ತಿ ಮಾಡುವುದು ಪದ್ಧತಿಯಾಗಿದೆ. ಹೆಚ್ಚಿನ ಸಂಖ್ಯೆಯ ಅರ್ಜಿಗಳು ಬಂದಿರುವುದರಿಂದ ಸಂದರ್ಶನಗಳನ್ನು ಮುಂದೂಡಲಾಗಿದೆ. ಪರಿಶೀಲನೆಯ ನಂತರ ಒಂದು ಹುದ್ದೆಗೆ ಮೂವರಂತೆ ಸಂದರ್ಶನಕ್ಕೆ ಕರೆಯಲಾಗುವುದು” ಮುಖ್ಯ ವೈದ್ಯಾಧಿಕಾರಿ ಡಾ.ದಂಡಪ್ಪನವರ ಹೇಳುತ್ತಾರೆ.
ಈಗಾಗಲೇ ಪಾಲಿಕೆಯಲ್ಲಿ ಕೇಸರಿ ಪಡೆಯ ಆಡಳಿತವಿದ್ದರೂ ಆಡಳಿತ ಪಕ್ಷದವರೇ ಮುಜುಗರ ಪಟ್ಟುಕೊಳ್ಳುವಂತಾಗಿದ್ದು ಈ ಹಿಂದೆ ಪಕ್ಷದ ಕೋರ ಕಮೀಟಿ ಸಭೆಯಲ್ಲೂ ಆಡಳಿತದಲ್ಲಿ ಮೇಯರ್ ಪತಿಯ ಹಸ್ತಕ್ಷೇಪ ದೊಡ್ಡ ಮಟ್ಟದ ಸುದ್ದಿ ಮಾಡಿತ್ತು. ಕೋರ್ ಕಮೀಟಿ ನಡೆದು ಸ್ವಲ್ಪ ದಿನದ ನಂತರ ಮತ್ತೆ ಪಾಲಿಕೆಯ ಆಡಳಿತದಲ್ಲಿ ಮೇಯರ್ ಪತಿಯ ಹಸ್ತಕ್ಷೇಪ ಅತಿಯಾಗಿದ್ದು ಅಲ್ಲದೇ ಮೇಯರ್‌ಗೆ ವಿಪಕ್ಷ ನಾಯಕರೇ ಸಲಹೆಗಾರರಾಗಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ.
ಪಾಲಿಕೆಯ ಅಧೀನದ ವಿವಿಧ ಆಸ್ಪತ್ರೆಗಳ ಸಂದರ್ಶನ ಮುಂದೂಡಲೂ ಮೇಯರ್ ,ಉಪಮೇಯರ್ ಮತ್ತು ವಿಪಕ್ಷ ನಾಯಕರ ಸಿಂಡಿಕೇಟ್ ಕಾರಣವೆನ್ನಲಾಗುತ್ತಿದೆ. ಈಗಾಗಲೇ ರಾಜ್ಯಮಟ್ಟದಲ್ಲಿ ಪರ್ಸಂಟೇಜ್ ,ಕಲೆಕ್ಷನ್ ವಿಷಯದಲ್ಲಿ ದೊಡ್ಡ ಮಟ್ಟ ಚರ್ಚೆಯಾಗುತ್ತಿದ್ದು ಇಲ್ಲಿಯೂ ಅಂತಹ ಯತ್ನ ನಡೆದಿದೆಯೇ ಎಂಬ ಗುಸು ಗುಸು ಕೇಳಿ ಬರುತ್ತಿದೆ.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕರಾದ ಮಹೇಶ ಟೆಂಗಿನಕಾಯಿ ಮತ್ತು ಅರವಿಂದ ಬೆಲ್ಲದ ಸದ್ಯ ಪಾಲಿಕೆಯ ಪರಿಸ್ಥಿತಿ ಬಗ್ಗೆ ಗಮನ ಹರಿಸದಿದ್ದರೆ ಕೇಸರಿ ಪಡೆಯ ಘನತೆ ಮೂರಾಬಟ್ಟೆ ಖಚಿತ ಎಂಬ ಮಾತುಗಳು ಬಿಜೆಪಿ ವಲಯದಲ್ಲೇ ಕೇಳಿ ಬರುತ್ತಿದೆ.
ಆಸ್ಪತ್ರೆ ಹುದ್ದೆಗಳ ಸಂದರ್ಶನ ಮುಂದೂಡಿಕೆ ಬಗ್ಗೆ ಅಭಿಪ್ರಾಯ ಕೇಳಲು ಸಂಜೆ ದರ್ಪಣ ಮೇಯರ್ ಸಂಪರ್ಕಿಸಿತಾದರೂ ಅವರು ಮೊಬೈಲ್ ಕರೆ ಸ್ವೀಕರಿಸಿಲಿಲ್ಲ.