ಬೆಳ್ಳಿ ಸಂಭ್ರಮದ ಹೊಸ್ತಿಲಿನ ಪತ್ರಿಕೆಗೆ ಮಾಧ್ಯಮ ಅಕಾಡೆಮಿ ಗೌರವ
ಹುಬ್ಬಳ್ಳಿ: 2019ರಿಂದ 2022ನೇ ಸಾಲಿನವರೆಗಿನ ಕರ್ನಾಟಕ ಮಾಧ್ಯಮ ಅಕಾಡೆಮಿಯ ಪ್ರಶಸ್ತಿ ನಿನ್ನೆ ಪ್ರಕಟಗೊಂಡಿದ್ದು ಮೈಸೂರಿನ ಆಂದೋಲನ ಸಂಸ್ಥೆಯವರು ಸ್ಥಾಪನೆ ಮಾಡಿರುವ ಅತ್ಯುತ್ತಮ ಜಿಲ್ಲಾ ಪತ್ರಿಕೆಗೆ ನೀಡುವ 2021ನೇ ಸಾಲಿನ “ಆಂದೋಲನ ಪ್ರಶಸ್ತಿ”, ವಾಣಿಜ್ಯ ರಾಜಧಾನಿ ಹುಬ್ಬಳ್ಳಿಯನ್ನು ಕೇಂದ್ರ ಸ್ಥಾನವಾಗಿಸಿಕೊಂಡು 1999ರಲ್ಲಿ ಆರಂಭಗೊಂಡ ’ಸಂಜೆ ದರ್ಪಣ’ ದಿನಪತ್ರಿಕೆಗೆ ಬಂದಿದೆ.
ಗ್ರಾಮೀಣ ಪತ್ರಿಕೋದ್ಯಮಕ್ಕೆ ಒತ್ತು ನೀಡಿರುವ ಸಂಜೆ ದರ್ಪಣ ತನ್ನ ವಸ್ತುನಿಷ್ಠ ವರದಿ, ಅಪರಾಧ ಮತ್ತು ರೋಚಕ ಸುದ್ದಿಗಳಿಂದ ಧಾರವಾಡ ಜಿಲ್ಲೆಯಲ್ಲಿ ತನ್ನದೇ ಛಾಪು ಮೂಡಿಸಿದೆಯಲ್ಲದೇ ಶೋಷಿತರ, ಹಿಂದುಳಿದವರ, ಅಲ್ಪಸಂಖ್ಯಾತರ ಪಾಲಿನ ಕೈಗನ್ನಡಿಯಾಗಿ ಕಾರ್ಯನಿರ್ವಹಿಸುತ್ತಿದೆ.
ಈ ಪತ್ರಿಕೆಯ ಗರಡಿಯಲ್ಲಿ ತಯಾರಾದ ಐವತ್ತಕ್ಕೂ ಹೆಚ್ಚು ಪತ್ರಕರ್ತರು ಇಂದು ರಾಜ್ಯದ ಪ್ರತಿಷ್ಠಿತ ಪತ್ರಿಕೆಗಳಲ್ಲಿ, ವಿವಿಧ ವಾಹಿನಿಗಳಲ್ಲಿ ಕಾರ್ಯ ಮಾಡುತ್ತಿದ್ದಾರೆ. ಧಾರವಾಡ ಜಿಲ್ಲೆಯಲ್ಲದೇ ನೆರೆಯ ಗದಗ, ಹಾವೇರಿ, ಉತ್ತರ ಕನ್ನಡ ಜಿಲ್ಲೆಯಲ್ಲೂ ಪತ್ರಿಕೆ ಪ್ರಸರಣ ಹೊಂದಿದೆ.
24 ವರ್ಷಗಳ ಹಿಂದೆ ಪತ್ರಕರ್ತ ಗಣಪತಿ ಗಂಗೊಳ್ಳಿ ಬಿತ್ತಿದ ಬೀಜ ಹೆಮ್ಮರಗಳ ಮಧ್ಯೆ ಬೆಳೆದು ಅವಿಭಾಜ್ಯ ಧಾರವಾಡ ಜಿಲ್ಲೆಯ ಜನ ಮನದ ಧ್ವನಿಯಾಗಿ ಹೊರಹೊಮ್ಮಿದ್ದು ಬೆಳ್ಳಿ ಸಂಭ್ರಮದ ಹೊಸ್ತಿಲಲ್ಲಿ ನಿಂತಿದೆ. 2015ರ ನಂತರ ಎನ್‌ಆರ್ ಪಿ ಪಬ್ಲಿಕೇಶನ್ಸ್ ಮೂಲಕ ಹೊರ ಬರುತ್ತಿದ್ದ ಪತ್ರಿಕೆ 2018ರಿಂದ ಈಚೆಗೆ ಜನಾಂದೋಲನ ಟ್ರಸ್ಟ್ ಅಡಿಯಲ್ಲಿ ಪ್ರಕಾಶನಗೊಳ್ಳುತ್ತಿದೆ.