ಹುಬ್ಬಳ್ಳಿ : ಮೇ 29ರಂದು ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ನಡೆದ ’ಇಂಡಿಯಾ ಟಾಪ್ ಮಾಡೆಲ್ಸ್ -೨೦೨೨’ ಸ್ಪರ್ಧೆಯಲ್ಲಿ ಹುಬ್ಬಳ್ಳಿಯ ಹುಡುಗಿಯೊಬ್ಬಳು ವಿಜೇತೆಯಾಗಿ ವಾಣಿಜ್ಯ ರಾಜಧಾನಿಗೆ ಕೀರ್ತಿ ತಂದಿದ್ದಾಳೆ.
ಹೌದು. ಹುಬ್ಬಳ್ಳಿ ಮೂಲದ ಮಾಡೆಲಿಂಗ್ ಕ್ಷೇತ್ರದಲ್ಲಿನ ಹೊಸ ಭರವಸೆ ಎಂದೇ ಕರೆಯಲ್ಪಡುವ ಪ್ರಿಯಾಂಕಾ ಕೊಲವೇಕರ ಅವರೇ ವಿಜೇತರಾಗಿ ಕಿರೀಟ ತಮ್ಮ ಮುಡಿಗೇರಿಸಿಕೊಂಡವರಾಗಿದ್ದಾರೆ.
ಸಂದೀಪ ಗೋಸ್ವಾಮಿ,ಸೋನಿಯಾ ಖಟಾನಾ ಆಯೋಜಿಸಿದ್ದ ಈ ಪ್ರತಿಷ್ಠಿತ ರೂಪದರ್ಶಿಗಳ ಸ್ಪರ್ಧೆಯಲ್ಲಿ ಪ್ರಿಯಾಂಕಾ ಕರ್ನಾಟಕವನ್ನು ಪ್ರತಿನಿಧಿಸಿದ್ದರಲ್ಲದೇ ಪ್ಲೈ ಡೈನ್ ಗೋವಾದ ವಿನಯಕುಮಾರ ಪ್ರಾಯೋಜಕತ್ವ ವಹಿಸಿದ್ದರು.
ನಿರ್ಣಾಯಕರಾಗಿ ಪ್ರಿನ್ಸ್ ನರುಲಾ ಸೇರಿದಂತೆ ದೇಶದ ಪ್ರತಿಷ್ಠಿತ ಸೆಲಿಬ್ರಿಟಿಗಳು ಪಾಲ್ಗೊಂಡಿದ್ದರು.
ಪ್ರಾಣಿ ಪ್ರಿಯೆ, ಮಕ್ಕಳ ಆಪ್ತ ಸಮಾಲೋಚಕಿ, ಹವ್ಯಾಸಿ ನೃತ್ಯಗಾತಿ, ಅತ್ಯುತ್ತಮ ನಿರೂಪಕಿ ಹೀಗೆ ಬಹುಮುಖ ಪ್ರತಿಭೆಯ ಹುಬ್ಬಳ್ಳಿಯ ಮುರಾರ್ಜಿ ನಗರದ ನಿವಾಸಿಯಾದ ಎಂ.ಇ ಮತ್ತು ಎಂ.ಬಿ.ಎ ಪದವೀಧರೆಯಾಗಿರುವ ಪ್ರಿಯಾಂಕ ಸದ್ಯ ಗೋವಾದ ಪಂಚತಾರಾ ಹೊಟೆಲ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರಿಯಾಂಕ ಮೂಲ ಕಾರವಾರವಾದರೂ ಹುಟ್ಟಿದ್ದು ಬೆಳೆದಿದ್ದು,ಕಲಿತಿದ್ದು ಎಲ್ಲ ಹುಬ್ಬಳ್ಳಿಯಲ್ಲೆ. ತಂದೆ ಗಣಪತಿ ಅಕ್ಕಸಾಲಿಗ ಮತ್ತು ತಾಯಿ ಮಂಗಲಾ ನಿವೃತ್ತ ಶಿಕ್ಷಕಿ. ಯಾರ ಸಹಾಯವಿಲ್ಲದೆ, ಫಿಟ್ನೆಸ್, ಕಾಸ್ಟ್ಯೂಮ್, ವಾಕಿಂಗ್ ಸ್ಟೈಲ್ ಎಲ್ಲವನ್ನು ಇಂಟರ್‌ನೆಟ್ ನಲ್ಲಿ ನೋಡಿ ಕಲಿತು ಮಾಡೆಲಿಂಗ್ ಕ್ಷೇತ್ರದಲ್ಲಿ ಒಂದು ದಶಕದಿಂದ ತೊಡಗಿಕೊಂಡಿರುವ ಇವರು ದೇಶದಾದ್ಯಂತ ನಡೆದ ಅನೇಕ ಫ್ಯಾಷನ್ ಷೋಗಳಲ್ಲಿ ಸ್ಪರ್ಧಿಸಿ, ಹಲವು ಅವಾರ್ಡಗಳನ್ನು ತಮ್ಮ ಮಡಿಲಿಗೆ ಹಾಕಿಕೊಂಡಿದ್ದಾರೆ.
ಗೋವಾದಲ್ಲಿ ನಡೆದ 2019ರ ರಾಯಲ್ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಮೊದಲ ರನ್ನರ್ ಆಗಿ ಹೊರಹೊಮ್ಮಿದ್ದರಲ್ಲದೇ ಈಗ ರಾಷ್ಟ್ರಮಟ್ಟದಲ್ಲಿ ಮತ್ತೆ ಮಿಂಚಿದ್ದಾರೆ.
2016ರಲ್ಲಿ ‘ಮಿಸ್ ಇಂಡಿಯಾ ಸೌಥ್ ಬ್ಯೂಟಿಫೂಲ್ ಸ್ಮೈಲ್’, ‘ಮಿಸ್ ಭಾರತ ಅರ್ಥ್ 2018’, ‘ಇಂಡಿ ರಾಯಲ್ ಪ್ರೈಡ್ ಆಫ್ ನೇಷನ್’, ‘ಎಲೈಟ್ ಮಿಸ್ ಇಂಡಿಯಾ ಅಡ್ವೆಂಚರ್ 2015’ ಅವಾರ್ಡಗಳನ್ನೂ ಪಡೆದಿದ್ದಾರೆ.
ಹುಬ್ಬಳ್ಳಿಯಲ್ಲಿದ್ದಾಗ ದಿನಂಪ್ರತಿ ಬೆಳಿಗ್ಗೆ 7ರಿಂದ 10ಗಂಟೆವೆರೆಗೆ ವಿದ್ಯಾನಗರ ದಿಂದ ಗೋಕುಲ ರಸ್ತೆಯಲ್ಲಿರುವ ಸುಮಾರು 50ರಿಂದ 70 ಬೀದಿ ನಾಯಿಗಳಿಗೆ ಆಹಾರ ಹಾಕುವುದು ಮತ್ತು ಗೋವುಗಳಿಗೆ ಮೇವಿನ ಕೊರತೆಯಿ ದ್ದಾಗ ಮೇವು ತರಿಸಿಕೊಡುವುದು ಪ್ರಿಯಾಂಕ ಅವರ ದಿನಚರಿಯಾಗಿತ್ತು. ಅದೇ ರೀತಿ ಆಕಳ, ನಾಯಿ, ಹಂದಿ, ಪಕ್ಷಿ, ಬೆಕ್ಕು ಯಾವುದೇ ಪ್ರಾಣಿಗಳಿಗೆ ತೊಂದರೆ ಆದರೂ, ಜನರು ಪ್ರಿಯಾಂಕ ಅವರಿಗೆ ಕರೆ ಮಾಡಿ ತಿಳಿಸುತ್ತಾರೆ.ಇವರ ಕಾರ್ಯ ಮೆಚ್ಚಿ 2018ರಲ್ಲಿ ಅನಿಶ್ ಚಿಂಚೊರೆ ಮೆಮೊರಿಯಲ್ ಫೌಂಡೆಷನ್ ವತಿಯಿಂದ ‘ಆನಿಮಲ್ ಆಕ್ಟಿವಿಸ್ಟ್’ ಎಂಬ ಅವಾರ್ಡ್ ಸಹ ಬಂದಿದೆ.