ಹುಬ್ಬಳ್ಳಿ: ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಿ ಸರಕಾರಕ್ಕೆ ವಂಚನೆ ಮಾಡಿ 20 ಗುಂಟೆ ಸಾರ್ವಜನಿಕ ಜಾಗೆಯನ್ನು ಮಾರಾಟ ಮಾಡಿದ ಶಿಕ್ಷಕ ದಂಪತಿಗಳ ಮೇಲೆ ಲ್ಯಾಂಡ್ ಗ್ರ್ಯಾಬಿಂಗ್ ಕಾಯ್ದೆಯಡಿ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ಸಂಗ್ರಾಮ ಸೇನೆ ರಾಜ್ಯಾಧ್ಯಕ್ಷ ಸಂಜೀವ ಧುಮಕನಾಳ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು ಉಣಕಲ್ ಗ್ರಾಮದ ಟಿಂಬರ್ ಯಾರ್ಡ್ ಪಕ್ಕದಲ್ಲಿ ಬರುವ ಸರ್ವೇ ನಂ. 58/3ಎ ಆಸ್ತಿಯಲ್ಲಿ ಇದ್ದಂತಹ ಸಾರ್ವಜನಿಕ ಬಳಕೆಗೆ ಮೀಸಲಿಟ್ಟ 27ಗುಂಟೆ ಜಾಗೆಯಲ್ಲಿ ಸುಳ್ಳು ದಾಖಲೆ ಸೃಷ್ಟಿ ಮಾಡಿ, 20 ಗುಂಟೆ ಜಾಗೆಯನ್ನು ಬೇರೆಯವರಿಗೆ ಮಾರಾಟ ಮಾಡಿದ ಶಿಕ್ಷಕ ದಂಪತಿಗಳಾದ ಶ್ರೀಶೈಲ ಹಾಗೂ ಸುರೇಖಾ ಗಡದಿನ್ನಿ ಅವರ ಮೇಲೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದಿ. 01-05-2019 ರಂದು ದೂರು ದಾಖಲಿಸಿದ್ದು, ನ್ಯಾಯಾಲಯದಲ್ಲಿ ಸಿ.ಸಿ. ನಂ.52/2019 ಪ್ರಕರಣ ದಾಖಲಾಗಿದ್ದರೂ ಇದುವರೆಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕ್ರಮ ಜರುಗಿಸಿಲ್ಲವಾಗಿದೆ ಎಂದರು.
ಪಿಎಲ್‌ಎಎಚ್‌ಡಿ/242/29/01/1974 ರಂದು ಡಾ. ಬಿ.ಎಸ್. ಕರಬಿಯವರ ಬಿನ್‌ಶೇತ್ಕಿ ಹಾಗೂ ವಿನ್ಯಾಸವು ಅಪ್ರೂವಲ್ ಆಗಿದ್ದು, ತದನಂತರ ಇವರ ಮಕ್ಕಳ ಹೆಸರಿನಲ್ಲಿ ರಿ.ಸ.ನಂ. 3121/ಎ, ಪಿ.ಆರ್. ಕಾರ್ಡಿನಲ್ಲಿ ಹೆಸರುಗಳನ್ನು ದಾಖಲು ಮಾಡಿಸಿದ್ದು, ಈ ಆಸ್ತಿಗೆ ಯಾವುದೇ ಸಂಬಂಧ ಇಲ್ಲದ ಶ್ರೀಮತಿ ಸುರೇಖಾ 20 ಗುಂಟೆ ಜಾಗೆಯನ್ನು ಸುಳ್ಳು ದಾಖಲೆ ಸೃಷ್ಟಿ ಮಾಡಿ ಮಾರಾಟ ಮಾಡಿದ್ದಾರೆಂದು ದಾಖಲೆಗಳನ್ನು ಬಿಡುಗಡೆ ಮಾಡಿದರು.
ಗೋಷ್ಠಿಯಲ್ಲಿ ಜಿ.ಪಿ. ಹೋಲ್ಡರ್ ಸುನೀಕಲ್ ಎಂ. ಕರಬಿ, ಪರಶುರಾಮ ಗೋವಲ್, ಚಂದ್ರಶೇಖರ ಯಾತಗೇರಿ, ನಿಂಗಪ್ಪ ಕುರುಬರ, ಸಂ:ಗೀತಾ ಸಂಗಮಿ, ಉಷಾ ಅಂಗಡಿ, ಇನ್ನಿತರರಿದ್ದರು.