20ಕ್ಕೆ ರಾಹುಲ ಗಾಂಧಿ ಕುಂದಾನಗರಕ್ಕೆ
ಹುಬ್ಬಳ್ಳಿ: ಮಾ.20ರಂದು ಬೆಳಗಾವಿಗೆ ಬರಲಿರುವ ಎಐಸಿಸಿ ಮುಖಂಡ ರಾಹುಲ್ ಗಾಂಧಿ ಅವರು ಅಂದು ಬೆಳಿಗ್ಗೆ 11 ಗಂಟೆಗೆ ನಡೆಯುವ ಬೃಹತ್ ಯುವ ಕ್ರಾಂತಿ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ರಾಹುಲ್ ಗಾಂಧಿ ಅವರು ರಾಜ್ಯದ ಯುವ ಜನತೆಗೆ ಸಂದೇಶ ಕೊಡಲು ಬರಲಿದ್ದಾರೆ. ಸಮಾವೇಶದಲ್ಲಿ ಮುಖಂಡರಾದ ಸುರ್ಜೇವಾಲಾ, ವೇಣುಗೋಪಾಲ, ಸಿದ್ದರಾಮಯ್ಯ, ಡಿಕೆಶಿವಕುಮಾರ್, ಪರಮೇಶ್ವರ, ಮುನಿಯಪ್ಪ, ಎಂ.ಬಿ.ಪಾಟೀಲ್ ಭಾಗಿಯಾಗಲಿದ್ದು, ಸುಮಾರು ೨ ಲಕ್ಷ ಜನ ಕಾರ್ಯಕ್ರಮದಲ್ಲಿ ಸೇರಲಿದ್ದಾರೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸು ವಂತೆ ಮನವಿ ಮಾಡಿದರು.
ರಾಜ್ಯದ 224 ಕ್ಷೇತ್ರಗಳಲ್ಲಿ ಸರ್ವೆ ಆಗಿದೆ. ಮೂರು ಸುತ್ತಿನ ಸ್ಕ್ರೀನಿಂಗ್ ಕಮಿಟಿ ಸಭೆ ಆಗಿದೆ. ಆಂತರಿಕ ಸರ್ವೆ ಪ್ರಕಾರ 140 ಸೀಟ್‌ಗಿಂತಲೂ ಅಧಿಕ ಮುಂದಿದೆ. ನಮ್ಮ ನಾಯಕರು 150 ಸೀಟ್ ಗೆಲ್ಲಲು ಸೂಚನೆ ನೀಡಿದ್ದಾರೆ. ಜನ ಬದಲಾವಣೆ ಬಯಸುತ್ತಿದ್ದಾರೆ. ಧಾರವಾಡ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಗೆಲ್ಲುತೇವೆ ಎಂದು ಹೇಳಿದರು.
ಬಿಜೆಪಿಯವರು ವಿಜಯ ಸಂಕಲ್ಪ ಯಾತ್ರೆ ಮಾಡುವ ಬದಲು ಬೆಲೆ ಏರಿಕೆ, ಭ್ರ್ರಷ್ಟಾಚಾರ ಮಾಡಿದ್ದೇವೆ ಎಂದು ಕ್ಷಮೆ ಯಾತ್ರೆ ಮಾಡಬೇಕಿತ್ತು. ಆದ್ರೆ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಮಾಡ್ತಿರೋದು ದುರ್ದೈವದ ಸಂಗತಿಯಾಗಿದೆ ಎಂದರು.
ರಾಜ್ಯದಲ್ಲಿ ರೌಡಿಗಳ ಸರ್ಕಾರ ಇದೆ. ಇವರಿಗೆ ಮತ ಕೇಳೋಕೆ ನೈತಿಕ ಹಕ್ಕಿಲ್ಲ. ಇದು ರೌಡಿಗಳು, ದಲ್ಲಾಳಿಗಳ ಸರ್ಕಾರವಾಗಿದೆ. 23 ಸಾವಿರ ರೌಡಿಗಳಿಗೆ ಬಿಜೆಪಿ ಕ್ಲೀನ್ ಚಿಟ್ ಕೊಟ್ಟಿದೆ. 4 ವರ್ಷದಲ್ಲಿ 23 ಸಾವಿರ ರೌಡಿ ಶೀಟರ್‌ಗೆ ಕ್ಲೀನ್ ಚೀಟ್ ಕೊಟ್ಟಿದ್ದಾರೆ. ರೌಡಿಗಳನ್ನು ಇಟ್ಕೊಂಡು ಚುನಾವಣೆ ಮಾಡೋಕೆ ಹೊರಟಿದ್ದಾರೆ ಎಂದು ಲೇವಡಿ ಮಾಡಿದರು. ಸರ್ಕಾರದ ಆಯುಷ್ಯ ಮುಗದಿದೆ. ಇದು ಲಂಚಾವತರಾದ ಸರ್ಕಾರ ಎಂದ ಸಲೀಂ ಅಹಮ್ಮದ್, ಇನ್ನು 40 ದಿನ ಈ ಸರ್ಕಾರದ ಆಯುಷ್ಯವಿದೆ. ಇವತ್ತಿನ ಮಾಹಿತಿ ಪ್ರಕಾರ ಬಿಜೆಪಿ 40 ರಿಂದ 45 ಸೀಟ್ ಗೆಲ್ಲಲಿದೆ ಎಂದರು.
ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ಮಾಡದಂತೆ ರಾಹುಲ್ ಸಲಹೆ ನೀಡಿರುವ ವಿಚಾರ ಕುರಿತಂತೆ ಮಾತನಾಡಿದ ಸಲೀಂ ಅಹಮ್ಮದ್ ಅವರು, ರಾಹುಲ್ ಗಾಂಧಿ ಸಲಹೆ ನೀಡಿರುವುದು ನನಗೆ ಗೊತ್ತಿಲ್ಲ. ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ಮಾಡುತ್ತಿದ್ದೇ ಎಂದಿದ್ದಾರೆ ಎಂದು ತಿಳಿಸಿದರು. ಶಾಸಕ ಪ್ರಸಾದ ಅಬ್ಬಯ್ಯ, ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ, ಉಭಯ ಘಟಕಗಳ ಅಧ್ಯಕ್ಷರಾದ ಅನಿಲಕುಮಾರ ಪಾಟೀಲ, ಅಲ್ತಾಪ್ ಹಳ್ಳೂರ, ಕೆಪಿಸಿಸಿ ಮುಖಂಡ ಸದಾನಂದ ಡಂಗನವರ ಗೋಷ್ಠಿಯಲ್ಲಿದ್ದರು.