ಹುಬ್ಬಳ್ಳಿ-ಧಾರವಾಡ ಸುದ್ದಿ
ಸತತ ಮಳೆ: ಜನಜೀವನ ಅಸ್ತವ್ಯಸ್ತ

ಸತತ ಮಳೆ: ಜನಜೀವನ ಅಸ್ತವ್ಯಸ್ತ

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಾದ್ಯಂತ ಮಂಗಳವಾರ ರಾತ್ರಿ ಆರಂಭವಾದ ಮಳೆ ನಿರಂತರವಾಗಿ ಸುರಿಯುತ್ತಿದ್ದು ವಿವಿಧೆಡೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ರಾತ್ರಿಯಿಡೀ ಸುರಿದ ಧಾರಾಕಾರ ಮಳೆಯಿಂದಾಗಿ ನಗರದ ವಿವಿಧೆಡೆ ಮನೆಗಳಿಗೆ ನೀರು ನುಗ್ಗಿದೆ. ಕೆಲವೆಡೆ ವಾಣಿಜ್ಯ ಸಂಕೀರ್ಣಗಳ ತಳಮಹಡಿ ನೀರಿನಿಂದ ಆವೃತ್ತವಾಗಿದೆ.
ಹಳೇ ಹುಬ್ಬಳ್ಳಿಯ ಕೆಲ ಪ್ರದೇಶದಲ್ಲಿ, ಕೇಶ್ವಾಪುರದ ನವೀನ ಪಾರ್ಕ ಮತ್ತು ಚಾಲುಕ್ಯನಗರದಲ್ಲಿ ಒಳ ಚರಂಡಿ ಹಾಗೂ ಮಳೆ ನೀರು ಮನೆಗೆ ನುಗ್ಗಿದ್ದರಿಂದ ಕುಟುಂಬದವರು ಪರದಾಡಿದರು.


ದೇಶಪಾಂಡೆ ನಗರದ ಬಳಿಯ ಕೆಲ ವಾಣಿಜ್ಯ ಸಂಕೀರ್ಣಗಳ ತಳಮಹಡಿ ನೀರಿನಿಂದ ಆವೃತ್ತವಾಗಿದ್ದು, ಯಂತ್ರದ ಸಹಾಯದಿಂದ ನೀರನ್ನು ಹೊರ ಹಾಕುತ್ತಿದ್ದ ದೃಶ್ಯ ಕಂಡುಬಂತು.
ಮಂಗಳವಾರ ರಾತ್ರಿಯಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯ ಬಹುತೇಕ ಹಳ್ಳಗಳು ತುಂಬಿ ಹರಿಯುತ್ತಿದ್ದು, ಕೆಲವೆಡೆ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಕೃಷಿ ಜಮೀನಿನಲ್ಲಿ ನೀರು ನಿಂತು ಕೊಳೆಯಲಾರಂಭಿಸಿವೆ.
ಜಿಲ್ಲೆಯಲ್ಲಿ ನೂರಾರು ಮನೆಗಳಿಗೆ ಭಾಗಶಃ ಧಕ್ಕೆಯಾಗಿದ್ದು,ಅಲ್ಲಲ್ಲಿ ಮನೆಗಳ ಗೋಡೆಗಳು ಕುಸಿದಿವೆ. ಬೆಣ್ಣೆಹಳ್ಳ, ತುಪರಿ ಹಳ್ಳಗಳು ತುಂಬಿದ್ದು, ಯರಗುಪ್ಪಿ, ಹಿರೇನರ್ತಿ, ಚಿಕ್ಕನರ್ತಿಯಿಂದ ಹುಬ್ಬಳ್ಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಧಾರಾಕಾರ ಮಳೆಗೆ ಕುಂದಗೋಳ ತಾಲೂಕಿನ ಯರೇ ಬೂದಿಹಾಳ ಗ್ರಾಮದ ಮನೆಗಳಿಗೆ ನೀರು ನುಗುತ್ತಿದ್ದು, ರಸ್ತೆಗಳೆಲ್ಲಾ ಜಲಾವೃತವಾಗಿ ಜನ ಸಂಚಾರ ದುಸ್ತರವಾಗಿ ಗ್ರಾಪಂ ಕಚೇರಿಗೆ ಜನ ಮುತ್ತಿಗೆ ಹಾಕಿದ್ದಾರೆ.
ಹೌದು, ನೀರು ಹರಿದು ಹೋಗಬೇಕಿದ್ದ ಜಮೀನು ವಿವಾದಕ್ಕೆ ಸಿಲುಕಿದ ಕಾರಣ ನೀರು ಜನ ವಸತಿ ಪ್ರದೇಶಗಳಿಗೆ ವೇಗವಾಗಿ ನುಗ್ಗುತ್ತಿದ್ದು,ಮನೆಗಳಲ್ಲಿ ನೀರು ಭರ್ತಿಯಾಗಿ ಮೋಟಾರು ಮೂಲಕ ಬಕೆಟ್ ತುಂಬಿ ನೀರು ಹೊರ ಹಾಕುತ್ತಿದ್ದಾರೆ. ಅಣ್ಣಿಗೇರಿ ತಾಲೂಕಿನ ಬಲ್ಲರವಾಡ, ಮಣಕವಾಡದಲ್ಲಿ ಸತತ ಮಳೆಗೆ ಮೂರ್‍ನಾಲ್ಕು ಮನೆಗಳು ಕುಸಿದಿವೆ.

ಹೆಚ್ಚಿನ ಅವಘಡ ಸಂಭವಿಸಿಲ್ಲ

ಧಾರವಾಡ: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, ಯಾವುದೇ ಹೆಚ್ಚಿನ ಅವಘಡ ಗಳು ಸಂಭವಿಸಿಲ್ಲ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.


’ಸಂಜೆ ದರ್ಪಣ’ದೊಂದಿಗೆ ಮಾತನಾಡಿದ ಅವರು, ನಿನ್ನೆ ರಾತ್ರಿ ಕುಂದಗೋಳ ತಾಲೂಕಿನ ಸಂಶಿ ಗ್ರಾಮದ ಬಳಿ ಹಳ್ಳದಲ್ಲಿ ಸಿಲುಕಿದ್ದ ನಾಲ್ವರನ್ನು ಪೊಲೀಸ್, ಅರಣ್ಯ ಸಿಬ್ಬಂದಿ ಸೇರಿ ರಕ್ಷಿಸಿದ್ದಾರೆ. ಹೆಚ್ಚು ಮಳೆಯಿಂದ ಜಮೀನು ಮತ್ತು ತಗ್ಗು ಪ್ರದೇಶ ಗಳಿಗೆ ನೀರು ನುಗ್ಗಿದೆ. ಇದರಿಂದ ಜನ ಜೀವನಕ್ಕೆ ಸ್ವಲ್ಪ ಮಟ್ಟಿನ ತೊಂದರೆಯಾಗಿದೆ. ಕೆಲವು ಕಡೆ ಮಣ್ಣಿನ ಮನೆಗಳು ಜಖಂಗೊಂಡಿವೆ. ಆದರೆ, ಯಾವುದೇ ಹೆಚ್ಚಿನ ಅವಘಡಗಳು ಸಂಭವಿಸಿಲ್ಲ.
ಮಳೆ ನಿಂತ ನಂತರವೂ ಮನೆಗಳು ಕುಸಿಯುವ ಸಾಧ್ಯತೆ ಇರುವುದರಿಂದ ಅಧಿಕಾರಿ ಗಳಿಗೆ ತಕ್ಷಣ ಭೇಟಿ ನೀಡುವಂತೆ ಸೂಚಿಸಲಾಗಿದೆ. ಇದೇ ರೀತಿ ಶಾಲೆಯ ಗೋಡೆ ಗಳು ಶಿಥಿಲವಾಗಿ ಸಮಸ್ಯೆ ಉದ್ಭವಿಸುವುದರಿಂದ ಮುಂದಿನ ಒಂದು ವಾರ ನಿಗಾ ವಹಿಸುವಂತೆ ಶಿಕ್ಷಣ ಇಲಾಖೆಯ ಬಿಆರ್‌ಪಿ ಮತ್ತು ಸಿಆರ್‌ಪಿಗಳಿಗೆ ಸೂಚಿಸಿರುವುದಾಗಿ ಹೆಗಡೆ ತಿಳಿಸಿದರು.

ಶಾಲೆ, ಕಾಲೇಜಿಗೆ ಇಂದು ರಜೆ 

ಜಿಲ್ಲೆಯಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಯ ಕಾರಣದಿಂದ ಎಲ್ಲಾ ಶಾಲೆ, ಕಾಲೇಜುಗಳಿಗೆ ಇಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ರಜೆ ಘೋಷಿಸಿದ್ದಾರೆ.
ಹವಾಮಾನ ಇಲಾಖೆಯು ಮಳೆ ಮುಂದುವರೆಯುವ ಸಾಧ್ಯತೆಯ ಮುನ್ಸೂಚನೆ ನೀಡಿದೆ.ಇಂದು ಜಿಲ್ಲೆಯ ಎಲ್ಲಾ ಶಾಲೆ,ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ನಿನ್ನೆ ಮೇ.೧೯ ಇಡೀ ದಿನ ಮತ್ತು ರಾತ್ರಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಮಳೆಯಾಗಿದೆ.ತಾಲೂಕಿನ ನೋಡಲ್ ಅಧಿಕಾರಿಗಳು ವರದಿಗಳನ್ನು ಕಳಿಸುತ್ತಿದ್ದಾರೆ. ಜನ ಹಾಗೂ ಜಾನುವಾರುಗಳ ಸುರಕ್ಷತೆಗೆ ಸಾರ್ವಜನಿಕರು ಹೆಚ್ಚು ಮುತುವರ್ಜಿ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.

ವಾಡಿಕೆಗಿಂತ ಐದು ಪಟ್ಟು ಹೆಚ್ಚು

ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಾದ್ಯಂತ ಸರಾಸರಿ ೧೧೫ ಮಿ.ಮಿ.ಗಿಂತ ಹೆಚ್ಚು ಮಳೆಯಾಗಿದ್ದು ವಾಡಿಕೆಗಿಂತ ಸುಮಾರು ೫ ಪಟ್ಟು ಹೆಚ್ಚು ಮಳೆಯಾಗಿದೆ ಎಂದು ಕೃಷಿ ವಿ.ವಿ. ಹವಾಮಾನ ವಿಭಾಗದ ಆರ್.ಎಚ್.ಪಾಟೀಲ ತಿಳಿಸಿದ್ದಾರೆ. ಕಲಘಟಗಿ ಮತ್ತು ಅಳ್ನಾವರಗಳಲ್ಲಿ ಸುಮಾರು ೧೫೦ ರಿಂದ ೧೭೦ಮಿ.ಮಿ ಮಳೆಯಾಗಿದೆ. ಇಂದು ಸಂಜೆಯವರೆಗೆ ತೀವ್ರವಾಗಿ ಮಳೆ ಸುರಿಯುವ ಸಾಧ್ಯತೆಗಳಿದ್ದು ನಂತರ ಸ್ವಲ್ಪ ಕಡಿಮೆಯಾಗಬಹುದೆಂದು ಹೇಳಿದ್ದಾರೆ.

ಹಳ್ಳದಲ್ಲಿ ಸಿಲುಕಿದ ನಾಲ್ವರ ರಕ್ಷಣೆ!

ಕುಂದಗೋಳ : ಗೂಡ್ಸ್ ವಾಹನದ ಮೂಲಕ ಲಕ್ಷೇಶ್ವರ ಪಟ್ಟಣಕ್ಕೆ ತೆರಳಿ ಪುನಃ ಮರಳುವ ವೇಳೆ ಚಾಕಲಬ್ಬಿ ಗ್ರಾಮದ ಗೂಗಿ ಹಳ್ಳದ ಪ್ರವಾಹದಲ್ಲಿ ಸಿಲುಕಿದ ನಾಲ್ವರನ್ನು ತಾಲೂಕ ಆಡಳಿತ ರಕ್ಷಣೆ ಮಾಡಿದೆ.
ಗುರುವಾರ ರಾತ್ರಿ ೯ ಗಂಟೆಯ ಸಮಯ ಲಕ್ಷ್ಮೇಶ್ವರಕ್ಕೆ ೪೦೭ ವಾಹನ ಮೂಲಕ ಸ್ವಸ್ತಿಕ್ ರವಾ ವಿತರಣೆ ಮಾಡಿ, ಮರಳಿ ಸಂಶಿ, ಚಾಕಲಬ್ಬಿ ಮಾರ್ಗವಾಗಿ ಬರುವಾಗ ಗೂಗಿ ಹಳ್ಳದ ಪ್ರವಾಹಕ್ಕೆ ಸಿಲುಕಿದ್ದ ಬಗ್ಗೆ ತಕ್ಷಣ ಪೊಲೀಸ್ ಹಾಗೂ ತಹಶೀಲ್ದಾರರಿಗೆ ಮಾಹಿತಿ ನೀಡಿದ್ದಾರೆ.
ಈ ವೇಳೆ ಅಗ್ನಿಶಾಮಕ ದಳ ಹಾಗೂ ಕಂದಾಯ ನಿರೀಕ್ಷಕರು ಗ್ರಾಮ ಲೆಕ್ಕಾಧಿಕಾರಿಗಳ ನೇತೃತ್ವದಲ್ಲಿ ಗ್ರಾಮಸ್ಯರ ಸಹಕಾರ ಪಡೆದು ವಾಹನಗಳಿಗೆ ಹಗ್ಗ ಕಟ್ಟಿ, ಅಭಿಷೇಕ ಮೊರಬದ, ಸಿದ್ದಪ್ಪ ಮೊರಬದ, ಮಂಜುನಾಥ ಭಗವತಿ, ಶರಣಪ್ಪ ಲಕ್ಕುಂಡಿ ಎಂಬ ನಾಲ್ವರನ್ನು ರಕ್ಷಣೆ ಮಾಡಲಾಗಿದೆ.
ಪ್ರವಾಹದಲ್ಲಿ ಸಿಲುಕಿದ ನಾಲ್ವರು ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿ ಗ್ರಾಮದವರಾಗಿದ್ದಾರೆ.

ಕೋಡಿ ಹರಿದ ಉಣಕಲ್ ಕೆರೆ

ಹುಬ್ಬಳ್ಳಿ: ನಗರದ ಪ್ರಮುಖ ಉಣಕಲ್ ಕೆರೆ ಕೋಡಿ ಹರಿದ ಕಾರಣ ನಾಲಾ ಸುತ್ತಮುತ್ತ ಇರುವ ಮನೆಗಳಿಗೆ ನೀರು ಸೇರುವ ಆತಂಕ ಶುರುವಾಗಿದೆ. ನಗರದ ರಸ್ತೆಗಳು ಜಲಾವೃತವಾಗಿ ಒಳಚರಂಡಿ ತುಂಬಿ ಹತಿಯುತ್ತಿವೆ. ಹಳೆ ಹುಬ್ಬಳ್ಳಿ ಗಣೇಶನಗರದ, ಆರ್.ಜಿಎಸ್, ಉಣಕಲ್, ದೇವಿನಗರ, ಗೋಪನಕೊಪ್ಪ, ಬೆಂಗೇರಿ ಸೇರಿದಂತೆ ತಗ್ಗು ಪ್ರದೇಶದ ಮನೆಗಳಿಗೆ ನೀರು ಸೇರಿ ಜನಸಾಮಾನ್ಯರಿಗೆ ಸಮಸ್ಯೆ ಎದುರಾಗಿದೆ. ನೀರು ಸೇರಿದ ಮನೆ ಕುಟುಂಬಸ್ಥರು ನೀರು ತೆಗೆಯಲು ಹರಸಾಹಸ ಪಡುತ್ತಿದ್ದಾರೆ. ಇನ್ನೂ ಸಮಸ್ಯೆ ಕುರಿತು ಪಾಲಿಕೆ ಅಧಿಕಾರಿಗಳಿಗೆ ತಿಳಿಸಿದರು ಸಹ ಇತ್ತ ಯಾರೋಬ್ಬರು ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

administrator

Related Articles

Leave a Reply

Your email address will not be published. Required fields are marked *