ಧಾರವಾಡ : ಶಿಕ್ಷಕರ ಮರು ಹೊಂದಾಣಿಕೆ, ಹೆಚ್ಚುವರಿ ಶಿಕ್ಷಕರ ಪ್ರಕ್ರಿಯೆ ಸ್ಥಗಿತಗೊಳಿಸುವಂತೆ ಅಖಿಲ ಭಾರತ ಶಿಕ್ಷಕರ ಫೆಡರೇಶನ್ ಕಾರ್ಯಾಧ್ಯಕ್ಷ ಬಸವರಾಜ ಗುರಿಕಾರ ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದಾರೆ,
ಈ ಕುರಿತು ಪತ್ರ ಬರೆದಿರುವ ಅವರು, ಶಿಕ್ಷಣ ಇಲಾಖೆ ಸರಕಾರಿ ಶಾಲಾ ಶಿಕ್ಷಕರ ಮರು ಹೊಂದಾಣಿಕೆ ಮತ್ತು ಹೆಚ್ಚುವರಿ ಪ್ರಕ್ರಿಯೆಯನ್ನು ಆರಂಭಿಸಲು ಈಗಾಗಲೇ ಕಾರ್ಯಪ್ರವೃತ್ತವಾಗಿದೆ ಆದರೆ ಈ ಮರು ಹೊಂದಾಣಿಕೆಯಲ್ಲಿ ಬಹಳಷ್ಟು ಲೋಪ ದೋಷಗಳು ಇದ್ದು ಸರ್ಕಾರಿ ಶಾಲೆಗಳಿಗೆ ಇದು ಮಾರಕವಾಗಿ ಪರಿಣಮಿಸಲಿದೆ. ಶೈಕ್ಷಣಿಕ ವರ್ಷದ ನವೆಂಬರ, ಡಿಸೆಂಬರ್, ಜನವರಿ, ಫೆಬ್ರುವರಿ ತಿಂಗಳುಗಳು ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ತುಂಬಾ ಉಪಯುಕ್ತವಾದ ಮತ್ತು ಮಹತ್ವದ ದಿನಗಳು. ಈ ಸಮಯದಲ್ಲಿ ಶಿಕ್ಷಕರ ಹೆಚ್ಚುವರಿ ಮರು ಹೊಂದಾಣಿಕೆ ಪ್ರಕ್ರಿಯೆ ಆರಂಭಿಸಿದ್ದರಿಂದ ಶಿಕ್ಷಕರು ಮಾನಸಿಕವಾಗಿ ಜರ್ಜರಿತರಾಗುತ್ತಾರೆ.ಇದು ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಹಿತ ದೃಷ್ಟಿಯಿಂದ ಒಳ್ಳೆಯದಲ್ಲ ಎಂದಿದ್ದಾರೆ.
ಶಿಕ್ಷಣ ಇಲಾಖೆ, ಪ್ರಗತಿಪರ ಶಿಕ್ಷಣ ತಜ್ಞರು, ಶಿಕ್ಷಕರು, ಶಿಕ್ಷಕ ಸಂಘ, ಎಸ್ ಡಿ ಎಂ ಸಿ, ಪಾಲಕ ಪೋಷಕರ ಹಾಗೂ ಜನಪ್ರತಿನಿಧಿಗಳ ಅಭಿಪ್ರಾಯ ಕ್ರೋಢೀಕರಿಸಿ ಹೊಸ ನಿಯಮ ರೂಪಿಸಬೇಕು. ಶಿಕ್ಷಕರ ಮರು ಹೊಂದಾಣಿಕೆ, ಹೆಚ್ಚುವರಿ ಶಿಕ್ಷಕರ ಪ್ರಕ್ರಿಯೆ ಅವೈಜ್ಞಾನಿಕವಾಗಿದ್ದು, ವೈದ್ಯನಾಥ್ ವರದಿಗೆ ಮಾಡಿದ ಅವಮಾನ ವಾಗಿದೆ. ಈಗ ಶಾಲೆಯಿಂದ ದೈಹಿಕ ಶಿಕ್ಷಕರು ಬೇರೆ ಶಾಲೆಗೆ ಹೋದರೆ ಇಲ್ಲಿಯವರೆಗೆ ಅವರಿಂದ ಕ್ರೀಡಾಬ್ಯಾಸ ಮಾಡಿದ ವಿದ್ಯಾರ್ಥಿಗಳು ದೈಹಿಕ ಶಿಕ್ಷಣದಿಂದ ವಂಚಿತರಾಗುವುದಿಲ್ಲವೇ ಈ ವಿದ್ಯಾರ್ಥಿಗಳು ಮಾಡಿದ ತಪ್ಪೇನು. ಸರಕಾರಕ್ಕೆ ಇಚ್ಛಾಶಕ್ತಿ ಇದ್ದರೆ ಎಲ್ಲ ಶಾಲೆಗಳಿಗೆ ದೈಹಿಕ ಶಿಕ್ಷಕ ಹುದ್ದೆಗಳನ್ನು ಮಂಜೂರು ಮಾಡಲಿ ಅಲ್ಲಿಯವರೆಗೆ ಈಗಿರುವ ದೈಹಿಕ ಶಿಕ್ಷಕರ ಮರು ಹೊಂದಾಣಿಕೆ ಹೆಚ್ಚುವರಿ ಮಾಡುವುದು ಸೂಕ್ತವಲ್ಲವೆಂದು ಗುರಿಕಾರ ಹೇಳಿದ್ದಾರೆ.
ಶಿಕ್ಷಕರ ಸ್ಥಳಾಂತರ ಮಾಡಬೇಡಿ:
ಶಂಕರಗೌಡ ಬಾಳನಗೌಡ್ರ ಮನವಿ
ಧಾರವಾಡ: ’ಮಕ್ಕಳೆಮಗೆ ಬದುಕು‘ ಎಂಬ ಆಶಯದೊಂದಿಗೆ 2006ರಲ್ಲಿ ಪ್ರಾರಂಭವಾದ ನಮ್ಮಶಾಲೆ (ಶ್ರೀ ಎನ್.ಜಿ.ಬಾಳನಗೌಡ್ರ ಸರ್ಕಾರಿ ಪ್ರೌಢಶಾಲೆ, ಶಿರೂರ, ತಾಲ್ಲೂಕು: ನವಲಗುಂದ ಜಿ: ಧಾರವಾಡ)ಗೆ 3 ಎಕರೆ ಜಾಗೆ ಕೊಟ್ಟು ನಾವೆಲ್ಲ ಅತ್ಯಂತ ಉತ್ಸಾಹದಿಂದ ಪ್ರಾರಂಭಿಸಿದ್ದೆವೆ. 2022ರ ವೇಳೆಗೆ ಖಾಸಗಿ ಶಾಲೆಯನ್ನು ಮೀರಿಸುವ ಮಟ್ಟಿಗೆ ನಮ್ಮ ಶಾಲೆ ಅಭಿವೃದ್ಧಿ ಹೊಂದಿದ್ದು, ಇದೀಗ ಹೊಸ ಸಮಸ್ಯೆ ಉದ್ಭವವಾಗಿದೆ.
ಹೆಚ್ಚುವರಿ ಶಿಕ್ಷಕರ ಮರು ಹೊಂದಾಣಿಕೆ ನಡೆಯುತ್ತಿದ್ದು, ನಮ್ಮ ಶಾಲೆ ಒಬ್ಬ ಗಣಿತ ಶಿಕ್ಷಕರು ಹಾಗೂ ಒಬ್ಬರು ಚಿತ್ರಕಲಾ ಶಿಕ್ಷಕರನ್ನು ಹೆಚ್ಚುವರಿ ಎಂದು ಪರಿಗಣಿಸಿದ್ದಾರೆ.
ಹೆಚ್ಚುವರಿ ಶಿಕ್ಷಕರ ಮರು ಹೊಂದಾಣಿಕೆ ಪ್ರಕ್ರಿಯೆಯಲ್ಲಿ 2021ರ ಡಿಸೆಂಬರ್ 31 ರವರೆಗೆ ಮಾತ್ರ ವಿದ್ಯಾರ್ಥಿಗಳ ಪ್ರವೇಶಾತಿ ಪರಿಗಣಿಸಲಾಗಿದೆ. ಕೋವಿಡ್-19 ಕಾರಣ ನಮ್ಮ ಶಾಲಾ ಶಿಕ್ಷಕರು 2022 ರ ಜನವರಿ, ಫೆಬ್ರುವರಿವರೆಗೂ ವಿದ್ಯಾರ್ಥಿಗಳ ಪ್ರವೇಶಾತಿ ಮಾಡಿದ್ದಾರೆ.
ಇದೀಗ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದು, ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಾಲೆಯಲ್ಲಿ ಯಾವುದೇ ಹೆಚ್ಚುವರಿ ಶಿಕ್ಷಕರು ಇರುವುದಿಲ್ಲ. ಸದ್ಯ 262 ವಿದ್ಯಾರ್ಥಿಗಳನ್ನು ಕಲಿಯುತ್ತಿದ್ದು, 6 ವಿಭಾಗಗಳಿವೆ. ಇದೀಗ 1 ಗಣಿತ ಮತ್ತು 1 ಚಿತ್ರಕಲಾ ಶಿಕ್ಷಕರನ್ನು ಹೆಚ್ಚುವರಿ ಎಂದು ಪರಿಗಣಿಸಿ, ಸ್ಥಳಾಂತರಿಸಿದಲ್ಲಿ ನಮ್ಮ ಶಾಲೆಯಲ್ಲಿ ಶಿಕ್ಷಕರ ಕೊರತೆ ಉಂಟಾಗುತ್ತದೆ.
ಇದರಿಂದ ಅಭಿವೃದ್ಧಿ ಹೊಂದುತ್ತಿರುವ ಸರ್ಕಾರಿ ಶಾಲೆಯ ಶೈಕ್ಷಣಿಕ ಪ್ರಗತಿಗೆ ಹಿನ್ನಡೆ ಆಗುತ್ತದೆ. ಈಗಿನ ವಿದ್ಯಾರ್ಥಿಗಳ ಸಂಖ್ಯೆಯನ್ನು ಪರಿಗಣಿಸಿ, ಆ ಹುದ್ದೆಗಳನ್ನು ನಮ್ಮ ಶಾಲೆಯಲ್ಲೇ ಮುಂದುವರಿಸಬೇಕು. ಸರ್ಕಾರಿ ಶಾಲೆಯ ಸಬಲೀಕರಣಕ್ಕೆ ಶಿಕ್ಷಣ ಇಲಾಖೆ ಮುಂದಾಗಬೇಕು.