ತಜ್ಞರ ತಂಡದಿಂದ ಅಭಿಪ್ರಾಯ ಸಂಗ್ರಹ
ಹುಬ್ಬಳ್ಳಿ : ಹುಬ್ಬಳ್ಳಿ ಅಂಕೋಲಾ ರೈಲು ಮಾರ್ಗದ ಸಮೀಕ್ಷಾ ಕೆಲಸ ಆರಂಭವಾಗಿದ್ದು ರಾಷ್ಟ್ರೀಯ ವನ್ಯಜೀವಿ ಮಂಡಳಿಯ ತಜ್ಞರ ತಂಡ ಇಂದು ಇಂದು ನಗರದ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರ ಅಹವಾಲು ಆಲಿಸಿತು. ವನ್ಯಜೀವಿ ಮಂಡಳಿ ತಜ್ಞರ ತಂಡದ ಎದುರು ವಿವಿಧ ಸಂಘಟನೆಗಳು, ಪ್ರಮುಖರು ರೇಲ್ವೆ ಯೋಜನೆ ಪರ ಅಭಿಪ್ರಾಯ ಮಂಡಿಸಿದರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು ಪಾಲ್ಗೊಂಡು ತಜ್ಞರ ತಂಡದೆದುರು ತಮ್ಮ ಅಭಿಪ್ರಾಯ ಮಂಡಿಸಿ ಪಶ್ಚಿಮ ಘಟ್ಟದ ಪರಿಸರ ಸೂಕ್ಷ್ಮ ಪ್ರದೇಶವು ರೈಲು ಮಾರ್ಗದ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ವಿವರವಾಗಿ ತಿಳಿಸಿದರಲ್ಲದೇ ಅತ್ಯಂತ ಅವಶ್ಯಕ ಎಂದು ಮನದಟ್ಟು ಮಾಡಿದರು.
ಹುಬ್ಬಳ್ಳಿ ಧಾರವಾಡ ವಕೀಲರ ಸಂಘ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ, ಹಿರಿಯ ಉದ್ಯಮಿ ಡಾ.ಚಿಗರುಪಾಟಿ ವಿ.ಎಸ್.ವಿ.ಪ್ರಸಾದ, ಬಂಟರ ಸಂಘದ ಅಧ್ಯಕ್ಷ ಸುಧಾಕರ ಶೆಟ್ಟಿ, ಹೊಟೆಲ್ ಅಸೋಸಿಯೇಶನ್ ಮುಂತಾದವು ಸೇರಿದಂತೆ ವಿವಿಧ ಸಂಘಟನೆಗಳು ರೈಲು ಮಾರ್ಗ ಅವಶ್ಯಕ. ಈ ಮಾರ್ಗದಿಂದ ವಾಣಿಜ್ಯೋದ್ಯಮಕ್ಕೆ ಇನ್ನಿಲ್ಲದ ಉತ್ತೇಜನ ದೊರೆಯಲಿದೆ. ಈ ಮಾರ್ಗ ಆಗಲೇಬೇಕೆಂದು ತಮ್ಮ ಅಹವಾಲುಗಳನ್ನು ಸಲ್ಲಿಸಿದರು.
ನೈರುತ್ಯ ರೇಲ್ವೆ ಪ್ರಧಾನ ವ್ಯವಸ್ಥಾಪಕ ಸಂಜೀವಕಿಶೋರ, ರಾಜ್ಯದ ಹಿರಿಯ ಐಎಎಸ್ ಅಧಿಕಾರಿ ಗೌರವ ಗುಪ್ತಾ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯು ಸಹ ಹುಬ್ಬಳ್ಳಿ -ಅಂಕೋಲಾ ರೈಲು ಮಾರ್ಗದಿಂದ ಆರ್ಥಿಕ ಚಿತ್ರಣವೇ ಬದಲಾಗಿದೆ ಎಂದು ಒಮ್ಮತದ ನಿರ್ಧಾರ ಕೈಗೊಂಡಿದ್ದು ಇಂದು ಅಹವಾಲು ಸಲ್ಲಿಸಿತು.