13 ರಿಂದ ಟ್ರ್ಯಾಕ್ಟರ್ ರ್‍ಯಾಲಿ-ಎಸ್.ಆರ್.ಪಾಟೀಲ
ಹುಬ್ಬಳ್ಳಿ: ಕೃಷ್ಣಾ-ಮಹದಾಯಿ-ನವಲಿ ಯೋಜನೆಗಳನ್ನು ಪೂರ್ಣಗೊಳಿಸಲು ಒತ್ತಾಯಿಸಿ ಏ. 13 ರಿಂದ ಏ.17ರವರೆಗೆ ನರಗುಂದದಿಂದ ಬೃಹತ್ ಟ್ರ್ಯಾಕ್ಟರ್ ರ್‍ಯಾಲಿ ಏರ್ಪಡಿಸಲಾಗಿದೆ ಎಂದು ಮಾಜಿ ಸಚಿವ, ಉತ್ತರ ಕರ್ನಾಟಕ ಸ್ವಾಭಿಮಾನ ವೇದಿಕೆ ಅಧ್ಯಕ್ಷ ಎಸ್.ಆರ್.ಪಾಟೀಲ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ನೀರಾವರಿ ಸೇರಿದಂತೆ ಇತರ ವಿಚಾರಗಳಲ್ಲಲ್ಲಿ ಉಂಟಾಗಿರುವ ಪ್ರಾದೇಶಿಕ ಅಸಮಾನತೆ ಬಗ್ಗೆ ಸಾರ್ವಜನಿಕರಲ್ಲಿ ಜನಜಾಗೃತಿ ಮೂಡಿಸಲಾಗುವುದು ಎಂದರು.
ಒಟ್ಟು ರಾಜ್ಯದ ಶೇ.68 ಜಲಸಂಪನ್ಮೂಲವನ್ನು ಉತ್ತರ ಕರ್ನಾಟಕದ ಜಿಲ್ಲೆಗಳು ವಿವಿಧ ನದಿಗಳ ಮೂಲ ಹೊಂದಿದರೂ ಸಮರ್ಪಕವಾಗಿ ಬಳಸಿಕೊಳ್ಳದಿರುವುದರಿಂದ ಅಭಿವೃದ್ಧಿಯಿಂದ ವಂಚಿತವಾಗಿದೆ. ಕೈಗಾರಿಕೆಗಳ ರಹಿತ ಪ್ರದೇಶವಾಗಿ ಗುಳೇ ಹೋಗುವವರ ಸಂಖ್ಯೆಯೂ ಹೆಚ್ಚಾಗಿದೆ. ನಮ್ಮ ಹೋರಾಟ ಯಾವುದೇ ಪಕ್ಷ, ವ್ಯಕ್ತಿಯ ವಿರುದ್ಧವಲ್ಲ. ಪ್ರತಿಯೊಬ್ಬರನ್ನು ಜಾಗೃತಿಗೊಳಿಸುವ ಉದ್ದೇಶ ವನ್ನು ಹೊಂದಿದೆ. ಮುಂದೆ ಈ ಹೋರಾಟ ಬಹುದೊಡ್ಡ ಕ್ರಾಂತಿಯನ್ನು ಮಾಡುವ ವಿಶ್ವಾಸವಿದೆ ಎಂದು ಹೇಳಿದರು.
- ಯಾರ ವಿರುದ್ಧವೂ ಅಲ್ಲ ಜನಜಾಗೃತಿಗಾಗಿ ಆಯೋಜನೆ
- ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಆಗ್ರಹ
- ಹೋರಾಟ ತೀವ್ರಗೊಳಿಸುವ ಎಚ್ಚರಿಕೆ
- ಉತ್ತರ ಕರ್ನಾಟಕ ಸ್ವಾಭಿಮಾನ ವೇದಿಕೆ ನೇತೃತ್ವ
- ಪಕ್ಷಾತೀತ ಹೋರಾಟ ಎಂದ ಮುಖಂಡರು
ಪ್ರಾದೇಶಿಕ ಅಸಮಾನತೆಯನ್ನು ಹೋಗಲಾಡಿಸಲು ಯುಕೆಪಿ, ಮಹದಾಯಿ ಹಾಗೂ ನವಲಿ ಯೋಜನೆಗಳನ್ನು ಸರ್ಕಾರ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.
1964ರಲ್ಲಿ ಅಂದಿನ ಪ್ರಧಾನಿ ದಿ.ಲಾಲ್ ಬಹದ್ದೂರ ಶಾಸ್ತ್ರಿ ಅವರು ಶಂಕು ಸ್ಥಾಪನೆ ಮಾಡಿದ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-೩ಕ್ಕೆ ಹಂಚಿಕೆಯಾದ 130 ಟಿಎಂಸಿ ನೀರನ್ನು ಬಳಸಿಕೊಂಡು ಉತ್ತರ ಕರ್ನಾಟಕದ 7ಜಿಲ್ಲೆಗಳ 15 ಲಕ್ಷ ಎಕರೆ ಜಮೀನನ್ನು ನೀರಾವರಿಗೆ ಒಳಪಡಿಸಬೇಕು. ಈ ಯೋಜನೆ ಯಿಂದ ಬಾಧಿತರಾಗುವ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಏ.೧೩ರಂದು ನರಗುಂದದಲ್ಲಿ ಟ್ರ್ಯಾಕ್ಟರ್ ರ್‍ಯಾಲಿಗೆ ಶಿರಹಟ್ಟಿಯ ಶ್ರೀಫಕೀರ ದಿಂಗಾಲೇಶ್ವರ ಸ್ವಾಮೀಜಿ ಅವರು ಚಾಲನೆ ನೀಡಲಿದ್ದು, ಕೊಣ್ಣುರು, ಹೊಳೆ ಆಲೂರು, ಬಾದಾಮಿ ಮೂಲಕ ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ರ್‍ಯಾಲಿ ಸಂಚರಿಸಿ ಏ.17ರ ಮಧ್ಯಾಹ್ನ 3.30ಕ್ಕೆ ಬೀಳಗಿ ತಾಲೂಕಿನ ಬಾಡಗಂಡಿಯ ಬಾಪೂಜಿ ಅಂತಾರಾಷ್ಟ್ರೀಯ ಶಾಲಾ ಮೈದಾನದಲ್ಲಿ ಬೃಹತ್ ಸಮಾವೇಶ್ವಾಗಿ ಮಾರ್ಪಾಡಾಗಲಿದೆ ಎಂದರು.
ಗೋಷ್ಠಿಯಲ್ಲಿ ಮಾಜಿ ಶಾಸಕ ಬಿ.ಆರ್.ಯಾವಗಲ್, ಎಂ.ಎನ್.ಪಾಟೀಲ, ರಾಜುಗೌಡ ಪಾಟೀಲ, ಪ್ರಕಾಶ ಅಂತರಗೊಂಡ, ರವಿ ಬಡ್ನಿ, ಮೇಟಿ ಇನ್ನಿತರರಿದ್ದರು.
ವಿವಿಧ ಸಂಘಟನೆ ಬೆಂಬಲ
ಮಹದಾಯಿ ಹೋರಾಟ ಸಮಿತಿ, ರಾಜ್ಯ ರೈತ ಸಂಘಟ, ಬಾಗಲಕೋಟೆ ನಡುಗಡ್ಡೆ ಹೋರಾಟ ಸಮಿತಿ, ಉತ್ತರ ಕರ್ನಾಟಕ ನಿರ್ಮಾಣ ವೇದಿಕೆ, ಕೃಷ್ಣಾ ಮೇಲ್ದಂಡೆ ಯೋಜನೆ ಹಿತರಕ್ಷಣಾ ಸಮಿತಿ, ಕರ್ನಾಟಕ ರಕ್ಷಣಾ ವೇದಿಕೆ, ಗುತ್ತಿ ಬಸವಣ್ಣ ಹೋರಾಟ ಸಮಿತಿ, ಕೃಷ್ಣಾ ತೀರ ಮುಳುಗಡೆ ಕ್ಷೇಮಾಭಿವೃದ್ಧೀ ಸಂಸ್ಥೆಗಳು ಹೋರಾಟ ಬೆಂಬಲಿಸಿದ್ದು, ರೈತರಿಂದ ಹೋರಾಟಕ್ಕೆ ಭಾರೀ ಬೆಂಬಲ ವ್ಯಕ್ತವಾಗಲಿದೆ. ರ್‍ಯಾಲಿಯಲ್ಲಿ 100 ಟ್ರ್ಯಾಕ್ಟರ್‌ಗಳು ಭಾಗವಹಿಸಲಿವೆ.
ಬಾಡಗಂಡಿಯಲ್ಲಿ ಸಮಾರೋಪ
13ರಂದು ನರಗುಂದಿಂದ ಆರಂಭಗೊಂಡು ಬಾದಾಮಿ ಸುತ್ತಮುತ್ತಲಿನ ಹಳ್ಳಿಳಲ್ಲಿ ಸಂಚರಿಸಿ ಅಂದು ರಾತ್ರಿ ಶಿವಯೋಗಮಂದಿರದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ೧೪ರಂದು ಬಾಗಲಕೋಟೆ ಸುತ್ತಮುತ್ತಲು ಸಂಚರಿಸಿ ಕೂಡಲಸಂಗಮದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ೧೫ರಂದು ಬಸವನ ಬಾಗೇವಾಡಿ ಹಾಗೂ ವಿಜಯಪುರ ಜಿಲ್ಲೆಯ ವಿವಿಧೆಡೆ ರ್‍ಯಾಲಿ ಸಂಚರಿಸಲಿದ್ದು, ಅಂದು ನಂದಿ ಸಕ್ಕರೆ ಕಾರ್ಖಾನೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ೧೬ರಂದು ಮುಧೋಳ ಭಾಗದಲ್ಲಿ ಸಂಚರಿಸಿ ಬೀಳಗಿಗೆ ಆಗಮಿಸಲಿದ್ದು, ೧೭ರಂದು ಅಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ನಾನೂ ಜೀವನಪೂರ್ತಿ ಕಾಂಗ್ರೆಸ್ಸಿಗನೇ. ಹುಟ್ಟಿಸಿದ ಭಗವಂತನೇ ಬಂದು ಈ ಹೋರಾಟ ನಿಲ್ಲಿಸು ಎಂದರೂ ನಿಲ್ಲಿಸುವುದಿಲ್ಲ.
ಎಸ್.ಆರ್. ಪಾಟೀಲ