ಫೆ.1ಕ್ಕೆ ಅಭಿಮಾನಿಗಳ ಸಭೆಯಲ್ಲಿ ಮುಂದಿನ ನಿರ್ಧಾರ ಸಾಧ್ಯತೆ
ಹುಬ್ಬಳ್ಳಿ : ಮಾಜಿ ಸಚಿವ ಮತ್ತು ನವಲಗುಂದ ಕ್ಷೇತ್ರದ ಮಾಜಿ ಶಾಸಕ ಶಂಕರ ಪಾಟೀಲ ಬಿಜೆಪಿಯಲ್ಲಿಯೇ ಮುಂದುವರಿಯುವರೋ ಅಥವಾ ಕಾಂಗ್ರೆಸ್ ಕೈ ಹಿಡಿಯುವರೋ ಎಂಬ ಗೊಂದಲ ಕ್ಷೇತ್ರ ಹಾಗೂ ಅನುಯಾಯಿಗಳಲ್ಲಿ ಮುಂದುವರಿದಿದ್ದು ಫೆ.1ರಂದು ತಮ್ಮ ಬೆಂಬಲಿಗರ ಸಭೆ ಕರೆದು ಮುಂದಿನ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಗಳಿವೆ.
ಮಾಜಿ ಸಿಎಂ ಜಗದೀಶ ಶೆಟ್ಟರ್ ಆಪ್ತವಲಯದಲ್ಲಿರುವ ಹಿನ್ನೆಲೆಯಲ್ಲಿ ಅವರು ಕೈ ಹಿಡಿಯಬಹುದೆಂಬ ವದಂತಿ ಕಳೆದ ನಾಲ್ಕೈದು ತಿಂಗಳುಗಳಿಂದ ಹರಿದಾಡುತ್ತಲೆ ಇದೆ. ಚುನಾವಣೆ ನಂತರ ರಾಜಕೀಯದಿಂದ ದೂರವೇ ಉಳಿದಿರುವ ಅವರು ತಾವು ಬಿಜೆಪಿಯಲ್ಲಿ ಇದ್ದು, ಕೌಟುಂಬಿಕ ಕಾರಣದಿಂದ ಕೆಲ ತಿಂಗಳ ನಂತರ ತಮ್ಮ ನಿರ್ಧಾರ ಪ್ರಕಟಿಸುವುದಾಗಿ ಮುನೇನಕೊಪ್ಪ ಸ್ಪಷ್ಟಪಡಿಸಿದ್ದರು.
ಕಾಂಗ್ರೆಸ್‌ಗೆ ಬಂದು ಪಧಾರವಾಡ ಲೋಕಸಭಾ ಕ್ಷೇತ್ರದ ಹುರಿಯಾಳಾಗುವರೆಂಬ ಗುಸು ಗುಸು ಇನ್ನೂ ದಟ್ಟವಾಗಿದೆಯಲ್ಲದೇ ಅನೇಕ ಹಿರಿಯ ಮುಖಂಡರು ಒತ್ತಡ ತಂದಿದ್ದಾರೆನ್ನಲಾಗಿದೆ. ಜೋಶಿಯವರಿಗೆ ಟಕ್ಕರ್ ನೀಡಲು ಪ್ರಬಲ ಸಮುದಾಯದ ಮುಖಂಡ ಹುರಿಯಾಳಾದರೆ ಅನುಕೂಲ ಎಂಬ ಮಾತು ಕೈ ವಲಯದಲ್ಲೂ ಕೇಳಿ ಬರುತ್ತಿವೆ.
ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರ ಜತೆ ಉತ್ತಮ ಸಂಬಂಧ ಹೊಂದಿದ್ದರೂ ಇತ್ತೀಚೆಗೆ ಮುಖಾಮುಖಿಯಾಗಿಲ್ಲ. ಬಿಜೆಪಿ ಪಡೆ ಜಿಲ್ಲೆಯಲ್ಲಿ ವಿಕಸಿತ ಭಾರತದಂತಹ ಮಹತ್ವದ ಕಾರ್ಯಕ್ರಮಗಳಿಗೆ ಸಹ ಇವರನ್ನು ನಿರ್ಲಕ್ಷಿಸಿದ್ದಲ್ಲದೇ ಮಹತ್ವದ ಸಮಾರಂಭಗಳಿಗೆ ಸಹ ಆಹ್ವಾನವನ್ನೂ ನೀಡಿಲ್ಲ ಎನ್ನಲಾಗಿದೆ.
ಸಂಜೆ ದರ್ಪಣದೊಂದಿಗೆ ಮಾತನಾಡಿದ ಅವರು ಫೆ.೧ರಂದು ಎಲ್ಲಾ ಅಭಿಮಾನಿಗಳು, ಹಿತೈಷಿಗಳ ಸಭೆ ಕರೆದು ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಹೇಳಿದ್ದು ಅವರ ಈ ಹೇಳಿಕೆ ಉಭಯ ಪಕ್ಷಗಳಲ್ಲೂ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಬಿಜೆಪಿ ಮತ್ತೊಬ್ಬ ಪಂಚಮಸಾಲಿ ಸಮುದಾಯದ ಪ್ರಭಾವಿ ಮುಖಂಡ ಲೋಕಸಭಾ ಹೊಸ್ತಿಲಲ್ಲಿ ಕೈ ಪಾಳೆಯ ಸೇರುವರೋ ಅಥವಾ ಮನವೊಲಿಸಿ ಪಕ್ಷದಲ್ಲೆ ಉಳಿಸಿಕೊಳ್ಳುವಲ್ಲಿ ಕಮಲ ಪಡೆ ಯಶಸ್ವಿಯಾಗುವುದೋ ಎಂಬುದು ಚರ್ಚೆಗೆ ಗ್ರಾಸವಾಗಿದೆ.