ಖಾಸಗಿ ಸೆಕ್ಯುರಿಟಿ ಸೇವೆ ಹಿಂದಕ್ಕೆ
ಹುಬ್ಬಳ್ಳಿ : ಉತ್ತರಕರ್ನಾಟಕದ ಬಡರೋಗಿಗಳ ಪಾಲಿಗೆ ಕಾಮಧೇನುವಾಗಿರುವ ಕಿಮ್ಸ್ ಆಸ್ಪತ್ರೆ,ವೈದ್ಯಕೀಯ ಸಂಸ್ಥೆಗಳಲ್ಲಿ ಭದ್ರತಾ ವಿಷಯ ಸದಾ ಚರ್ಚೆಗೆ ಗ್ರಾಸವಾಗುತ್ತಲೇ ಇದ್ದು ಇದುವರೆಗಿನ ಖಾಸಗಿ ಭದ್ರತಾ ಸಿಬ್ಬಂದಿ ಮತ್ತು ಸುಪರ್‌ವೈಸರ್ ಸೇವೆಯನ್ನು ಹಿಂಪಡೆಯಾಗಲಾಗಿದ್ದು ಇಂದಿನಿಂದ ಸರ್ಕಾರದ ಅಧೀನದ ಗೃಹರಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ.
ಜಿಲ್ಲಾಧಿಕಾರಿಗಳು ಪತ್ರ ಬರೆದು ಭದ್ರತಾ ಸೇವೆಗಳನ್ನು ನಿರ್ವಹಿಸಲು ಗೃಹರಕ್ಷಕರನ್ನು ನಿಯೋಜಿಸಲು ಕೋರಿದ ಪ್ರಸ್ತಾವನೆಯಂತೆ ಗೃಹರಕ್ಷಕದಳದ ಆರಕ್ಷಕ ಮಹಾ ನಿರ್ದೇಶಕರು ಸಂಸ್ಥೆಗೆ 150ಗೃಹರಕ್ಷಕರನ್ನು ನಿಯೋಜಿಸಲು ಮಂಜೂರಾತಿ ಆದೇಶ ನೀಡಿದ ಹಿನ್ನೆಲೆಯಲ್ಲಿ ಇಂದಿನಿಂದ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಕಳೆದ 13ವರ್ಷಗಳಿಂದ ಕಿಮ್ಸ್ ಭದ್ರತಾ ಸೇವೆ ಗುತ್ತಿಗೆ ನಿರ್ವಹಿಸುತ್ತಿದ್ದ ದೇಶಪಾಂಡೆನಗರದ ಭಾರತ ಎಕ್ಸಸರ್ವಿಸ್‌ಮೆನ್ ಸಂಸ್ಥೆಯ 139 ಸೆಕ್ಯುರಿಟಿ ಗಾರ್ಡ ಮತ್ತು ಸೂಪರ್ ವೈಸರ್‌ಗಳ ಸೇವೆಯನ್ನು ನಿರ್ದೇಶಕ ನಿನ್ನೆ ದಿ. 9-11-2022 ರಿಂದ ಜಾರಿಗೆ ಬರುವಂತೆ ಸೇವೆಗಳನ್ನು ಹಿಂಪಡೆಯಲಾಗಿದ್ದು, ಈ ಹಿನ್ನೆಯಲ್ಲಿ ಇಂದಿನಿಂದ ಗೃಹರಕ್ಷಕರ ಕರ್ತವ್ಯಕ್ಕೆ ಹಾಜರಾಗಿದ್ದು ಪ್ರತಿ ಪಾಳಿಗೆ 50ರಂತೆ ಮೂರು ಪಾಳಿಗಳಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.
ಕೋವಿಡ್ ಕಾಲಾವಧಿಯಲ್ಲಿ ಕಿಮ್ಸ್ ಆಸ್ಪತ್ರೆಯಲ್ಲಿನ ಸೇವೆ ವ್ಯಾಪಕ ಪ್ರಶಂಸೆಗೊಳಗಾದರೂ ಆ ಅವಧಿಯಲ್ಲಿ ಭದ್ರತಾ ಸಿಬ್ಬಂದಿಗಳ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಅಂದಿನ ಜಿಲ್ಲಾಧಿಕಾರಿಗಳಾಗಿದ್ದ ನಿತೇಶ ಪಾಟೀಲ ಅವರು ಭದ್ರತಾ ಗುತ್ತಿಗೆ ಪಡೆದಿದ್ದ ಭಾರತ ಎಕ್ಸ ಸರ್ವಿಸ್‌ಮನ್ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಿದ್ದರಲ್ಲದೇ ಭದ್ರತಾ ಟೆಂಡರ್ ಗುತ್ತಿಗೆ ಅಧಿಕಾರವನ್ನು ಕಿಮ್ಸ್ ನಿರ್ದೇಶಕರಿಂದ ಹಿಂಪಡೆಯಲಾಗಿತ್ತು.
ಕಿಮ್ಸ್ ಸಂಸ್ಥೆಯ ಕಾಲೇಜು, ಆಸ್ಪತ್ರೆಗಳಲ್ಲಿ ಅನೇಕ ಭದ್ರತಾ ಲೋಪ, ಶಿಶು ನಾಪತ್ತೆ ಪ್ರಕರಣ ,ಅಲ್ಲದೇ ಕಿಮ್ಸ್ ವಸತಿ ಕ್ವಾರ್ಟರ್ಸಗಳಲ್ಲಿ ಪದೇ ಪದೇ ಕಳ್ಳತನ ಇವುಗಳು ಯಾವುದೇ ತರಬೇತಿಯಿಲ್ಲದ ಹೊರಗುತ್ತಿಗೆ ಭದ್ರತಾ ಸಿಬ್ಬಂದಿಗಳ ಮೇಲೆ ಸಂಶಯದಿಂದ ನೋಡುವಂತಾಗಿತ್ತಲ್ಲದೇ ಈ ಪ್ರಕರಣದಲ್ಲೇ ವಿದ್ಯಾನಗರ ಠಾಣಾಧಿಕಾರಿಯೊಬ್ಬರ ತಲೆದಂಡವೂ ಆಗಿತ್ತು.ಈ ಹಿನ್ನೆಲೆಯಲ್ಲಿ ಗೃಹರಕ್ಷಕರನ್ನು ನಿಯೋಜನೆಗೊಳಿಸಲಾಗಿದೆ.
ಅನೇಕ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದ ತಮ್ಮ ಸೇವೆ ಹಿಂಪಡೆಯಲಾಗಿದೆ ಎಂದು ಕೆಲ ಭದ್ರತಾ ಸಿಬ್ಬಂದಿ ಧರಣಿಗೆ ಮುಂದಾಗಿ ನಿರ್ದೇಶಕರ ಬಳಿ ವಿನಂತಿಸಿದಾಗ ಸೇವೆ ಹಿಂಪಡೆಯುವ ವಿಷಯ ಈಗಾಗಲೇ ಭದ್ರತಾ ಸಂಸ್ಥೆ ಮುಖ್ಯಸ್ಥರಿಗೆ ತಿಳಿಸಲಾಗಿದೆ ಎಂದು ಸಮಜಾಯಿಸಿ ನೀಡಿದರಲ್ಲದೇ ವಿದ್ಯಾನಗರ ಇನ್ಸಪೆಕ್ಟರ್ ಸಹ ಬಂದು ವಿವರ ತಿಳಿಸಿದ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿಯವರೆಗೆ ಯಥಾ ಪ್ರಕಾರ ಕಾರ್ಯನಿರ್ವಹಿಸಿದ್ದರು.
ಗೃಹರಕ್ಷಕರ ನೆರವನ್ನು ಈಗಾಗಲೇ ಪೊಲೀಸ್ ಇಲಾಖೆಗೂ ನೀಡಲಾಗುತ್ತಿದ್ದು ಸರ್ಕಾರದ ಅಧೀನ ಸಂಸ್ಥೆಯಾದ ಗೃಹರಕ್ಷಕದಳದ ಸಿಬ್ಬಂದಿಯೇ ಬೆಳಗಾವಿ ಜಿಲ್ಲಾ ಆಸ್ಪತ್ರೆಗೂ ನಿಯೋಜಿತಗೊಂಡಿದ್ದಾರೆ.ತರಬೇತಿ ಹೊಂದಿರುವ ಗೃಹರಕ್ಷಕರು ಸ್ವಯಂ ಸೇವಕರಾದ್ದರಿಂದ ಉತ್ತಮ ಸೇವೆ ನಿರೀಕ್ಷಿಸಬಹುದಾಗಿದೆ.
ಪಿಎಫ್ ಕಟ್ಟಿಲ್ಲ- ಸರಿಯಾಗಿ ವೇತನವಿಲ್ಲ
ಕಿಮ್ಸ್ ಸಂಸ್ಥೆ ಹಾಗೂ ಸೂಪರ್ ಸ್ಟೆಶಾಲಿಟಿ ಆಸ್ಪತ್ರೆಗೆ ಪ್ಯಾಕೇಜ್ -6 ಹಾಗೂ ಪ್ಯಾಕೇಜ್ -4ರ ಮೂಲಕ 139 ಸೆಕ್ಯುರಿಟಿ ಗಾರ್ಡ್ಸ ಮತ್ತು ಸೂಪರವೈಸರ್ ಸೇವೆಯನ್ನು ಭಾರತ ಎಕ್ಸ ಸರ್ವಿಸಮೆನ್ ಸಂಸ್ಥೆಯ ಮೂಲಕ ಸೇವೆ ಗುತ್ತಿಗೆಯನ್ನು 08-03-2019 ರಿಂದ 28-02-2022ರವರೆಗೆ ಪಡೆಯಲಾಗಿತ್ತು. ಕೋವಿಡ್ ಹಿನ್ನೆಲೆಯಲ್ಲಿ ಸದರಿ ಸೇವೆ ಕಾಲ ಕಾಲಕ್ಕೆ ಮುಂದೂಡಿದ್ದರೂ ಕಳೆದ ಕಳೆದ ಎಂಟು ತಿಂಗಳಿಂದ ಹಾಗೆಯೆ ಮುಂದುವರಿದಿತ್ತು. ಸಂಸ್ಥೆ ಪ್ರತಿ ತಿಂಗಳು 20ಲಕ್ಷಕ್ಕೂ ಮೊತ್ತವನ್ನು ನಿಯಮಿತವಾಗಿ ಪಡೆದಿದ್ದರೂ ಭದ್ರತಾ ಸಿಬ್ಬಂದಿಗಳಿಗೆ ಕಳೆದ 9 ತಿಂಗಳಿಂದ ಪಿಎಫ್ ಪಾವತಿಸಿಲ್ಲ ಎನ್ನಲಾಗಿದ್ದು ಅಲ್ಲದೇ ಕಳೆದ ಐದಾರು ತಿಂಗಳಿನಿಂದ ಸರಿಯಾಗಿ ವೇತನ ಸಹಿತ ನೀಡುತ್ತಿಲ್ಲ ಎಂಬ ಮಾತು ಕಾರ್ಯನಿರ್ವಹಿಸುತ್ತಿದ್ದ ಸೆಕ್ಯುರಿಟಿ ಗಾರ್ಡಗಳೇ ಹೇಳುತ್ತಿದ್ದಾರೆ.ಅಲ್ಲದೇ ಈ ಬಗ್ಗೆ ಕೋರ್ಟ ಕಟ್ಟೆ ಹತ್ತಲು ಕೆಲವರು ಮುಂದಾಗಿದ್ದಾರೆನ್ನಲಾಗಿದೆ.
ಸಂಸ್ಥೆಗೆ ಉಳಿತಾಯ
ಹೊರಗುತ್ತಿಗೆಯನ್ನು ಪಡೆದ ಭಾರತ ಎಕ್ಸ ಸರ್ವಿಸಮೆನ್ ಸಂಸ್ಥೆ ದಾಖಲೆಗಳಲ್ಲಿ 139 ಗಾರ್ಡ ಹಾಗೂ ಮೇಲ್ವಿಚಾರಕರನ್ನು ಪೂರೈಸಿದೆ ಎಂಬಂತಿದ್ದರೂ ಕನಿಷ್ಟ 20ಕ್ಕೂ ಕಡಿಮೆ ಜನರನ್ನು ಪೂರೈಸಿದ್ದರೂ 139ರ ಹಾಜರಾತಿಗನುಗುಣವಾಗಿ 20 ಲಕ್ಷಕ್ಕೂ ಹೆಚ್ಚು ಹಣ ಸಂದಾಯಮಾಡಿಕೊಳ್ಳುತ್ತಿತ್ತು ಎನ್ನಲಾಗಿದೆ. ಈಗ ಗೃಹರಕ್ಷಕರ ಸೇವೆ ನಿಯೋಜನೆಯಿಂದ ಸುಮಾರು 11 ಸಿಬ್ಬಂದಿ ಹೆಚ್ಚುವರಿ ಪಡೆದಿದ್ದರೂ ಕಿಮ್ಸ್ ಸಂಸ್ಥೆಗೆ ಪ್ರತಿ ತಿಂಗಳು ಸುಮಾರು 3ಲಕ್ಷ ನಿವ್ವಳ ಉಳಿತಾಯವಾಗಲಿದ್ದು ವರ್ಷಕ್ಕೆ 36 ಲಕ್ಷ ಲಾಭವಾಗಲಿದೆ ಎಂಬ ಮಾತುಗಳು ಕೇಳಿ ಬಂದಿವೆ.