ಧಾರವಾಡ: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಹಲವಾರು ಮುಖಂಡರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಮೂಲಕ ಬಿಜೆಪಿಯವರು ಕಾಂಗ್ರೆಸ್ ತಿರುಗೇಟು ನೀಡಲು ಮುಂದಾಗಿದ್ದಾರೆ.
ನಗರದ ಹಿರಿಯ ನ್ಯಾಯವಾದಿ ಪಿ.ಎಚ್.ನೀರಲಕೇರಿ ಅವರ ಮನೆಗೆ ವಿಧಾನಸಭೆಯ ಪ್ರತಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ ಅವರು ಇತ್ತೀಚೆಗೆ ಭೇಟಿ ನೀಡಿದ್ದು ಈ ವಿಚಾರಕ್ಕೆ ಇಂಬು ನೀಡಿದೆ.
ಇದಿಷ್ಟೇ ಅಲ್ಲದೇ ಕೇಂದ್ರ ಸಚಿವ, ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಅವರನ್ನು ಭೇಟಿ ಮಾಡಿಸಿರುವ ಬೆಲ್ಲದ, ಇತ್ತೀಚೆಗೆ ಹುಬ್ಬಳ್ಳಿಗೆ ಆಗಮಿಸಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೂ ನೀರಲಕೇರಿ ಅವರನ್ನು ಪರಿಚಯಿಸಿದ್ದಾರೆ.
ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳುವ ಮೂಲಕ ಶಕ್ತಿ ವೃದ್ಧಿಸಿಕೊಳ್ಳುವುದರ ಜೊತೆಗೆ ಕಾಂಗ್ರೆಸ್ ಗೆ ಏಟು ನೀಡಲು ಕೇಸರಿ ಪಡೆ ಸಜ್ಜಾದಂತಿದೆ.
ಮೂರು ದಶಕಗಳಗೂ ಹೆಚ್ಚು ಕಾಲ ಕಾಂಗ್ರೆಸ್ ಪಕ್ಷದಲ್ಲಿದ್ದ ನೀರಲಕೇರಿ ಅವರು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹು-ಧಾ ಪಶ್ಚಿಮ ಕ್ಷೇತ್ರದ ಟಿಕೆಟ್ ಆಕಾಂಕ್ಷೆ ಯಾಗಿದ್ದರು.
ಕೆಪಿಸಿಸಿ ವಕ್ತಾರರಾಗಿ ಕ್ರಿಯಾಶೀಲರಾಗಿದ್ದ ನೀರಲಕೇರಿ ಅವರು ಪಕ್ಷದಲ್ಲಿನ ಆಂತರಿಕ ಕಿತ್ತಾಟ ಮತ್ತು ಬೆಳವಣಿಗೆಗಳಿಂದ ಬೇಸರಗೊಂಡಿದ್ದರು. ಈ ಕಾರಣದಿಂದ ಅವರು ಕಾಂಗ್ರೆಸ್ ಗೆ ಗುಡಬೈ ಕೂಡ ಹೇಳಿದ್ದರು. ಸದ್ಯದಲ್ಲಿಯೇ ತೀರ್ಮಾನ ತೆಗೆದುಕೊಳ್ಳುವುದಾಗಿ ನೀರಲಕೇರಿ ತಿಳಿಸಿದ್ದಾರೆ.