2-3 ದಿನಗಳಲ್ಲಿ ಸರ್ಕಾರದ ಅಧಿಸೂಚನೆ ಸಾಧ್ಯತೆ?
ಪ್ರಸನ್ನಕುಮಾರ ಹಿರೇಮಠ
ಹುಬ್ಬಳ್ಳಿ: ರಾಜ್ಯದಲ್ಲಿ 2ನೇ ಅತಿದೊಡ್ಡ ಮಹಾನಗರ ಪಾಲಿಕೆಯಾಗಿರುವ ಹುಬ್ಬಳ್ಳಿ-ಧಾರವಾಡಕ್ಕೆ ಮಹಾನಗರ ಪಾಲಿಕೆಯನ್ನು ಇಬ್ಭಾಗ ಮಾಡಿ ಧಾರವಾಡ ನಗರಕ್ಕೆ ಪ್ರತ್ಯೇಕವಾಗಿ ಮಹಾನಗರ ಪಾಲಿಕೆಯನ್ನು ಸ್ಥಾಪಿಸಬೇಕು ಎನ್ನುವ ಕೂಗು ಸರ್ಕಾರಕ್ಕೆ ಮುಟ್ಟಿದ್ದು, ಶೀಘ್ರದಲ್ಲಿಯೇ ಈ ಕುರಿತು ಸರ್ಕಾರದ ಅಧಿಕೃತ ಅಧಿಸೂಚನೆ ಹೊರಬೀಳುವ ಸಾಧ್ಯತೆಗಳಿವೆ.
ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತು ಚರ್ಚಿಸಲು ಬೆಳಗಾವಿಯಲ್ಲಿ ಕರೆದಿರುವ ವಿಧಾನಸಭೆ ಅಧಿವೇಶನದಲ್ಲಿಯೇ ಈ ಕುರಿತು ಸರ್ಕಾರ ತನ್ನ ನಿರ್ಧಾರ ಪ್ರಕಟಿಸಲಿದೆ ಎಂದು ಖಚಿತ ಮೂಲಗಳಿಂದ ತಿಳಿದು ಬಂದಿದೆ.
ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು, ಶಾಸಕ ಅರವಿಂದ ಬೆಲ್ಲದ ಅವರ ಜೊತೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಪ್ರತ್ಯೇಕ ಪಾಲಿಕೆಯ ಅಧಿಸೂಚನೆ 2-3 ದಿನಗಳಲ್ಲಿ ಪ್ರಕಟವಾಗುವ ಸಾಧ್ಯತೆಗಳಿವೆ ಎಂಬ ಸುದ್ದಿ ಹುಬ್ಬಳ್ಳಿ- ಧಾರವಾಡ ಎರಡು ಪಾಲಿಕೆ ಆವರಣದಲ್ಲಿ ಕೇಳಿಬರುತ್ತಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು ರಾಜ್ಯದಲ್ಲಿ ಎರಡನೇ ಬೃಹತ್ ಮಹಾನಗರ ಪಾಲಿಕೆಯಾಗಿದೆ. ಈ ಪ್ರದೇಶವು ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿದ್ದು, ಹುಬ್ಬಳ್ಳಿ ಮತ್ತು ಧಾರವಾಡ ಸಮೀಪದ ಅನೇಕ ಹಳ್ಳಿಗಳು ಪಾಲಿಕೆಗೆ ಸಮೀಪವಾಗುತ್ತಿದೆ. ಈ ಗಿನ ಲೆಕ್ಕಾಚಾರ ಪ್ರಕಾರ ಆರ್‌ಟಿಒ ವರೆಗೂ ಅಂದರೆ 25ನೇ ವಾರ್ಡಿನ ವರೆಗೆ ಧಾರವಾಡ ಪಾಲಿಕೆಗೆ ಸೇರುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಜನಸಂಖ್ಯೆಯು ಕೂಡ ಹೆಚ್ಚಿನ ಪ್ರಮಾಣದಲ್ಲಿದ್ದು, ಕೈಗಾರಿಕೆ, ವಸತಿ ಹಾಗೂ ಶಿಕ್ಷಣದ ಸೇರಿದಂತೆ ಎಲ್ಲ ಕ್ಷೇತ್ರಗಳು ಬೃಹದಾಕಾರವಾಗಿ ಬೆಳೆಯುತ್ತಿವೆ. ಧಾರವಾಡಕ್ಕೆ ಪ್ರತ್ಯೇಕವಾಗಿ ಮಹಾನಗರ ಪಾಲಿಕೆ ಆಗುವುದರಿಂದ ಆನೇಕ ಅಭಿವೃದ್ಧಿ ಕಾರ್ಯಗಳೊಂದಿಗೆ ಸಾರ್ವಜನಿಕರ ಸಮಸ್ಯೆಗಳು ಕೂಡ ಶೀಘ್ರವಾಗಿ ಇತ್ಯರ್ಥವಾಗಲಿವೆ ಎನ್ನುವ ಅಭಿಪ್ರಾಯ ಸಾರ್ವಜನಿಕರದ್ದಾಗಿದೆ.
ಪ್ರತ್ಯೇಕ ಮಹಾನಗರ ಪಾಲಿಕೆ ಸ್ಥಾಪಿಸುವುದು ಹಲವು ಸಂಘಟನೆಗಳ ಬೇಡಿಕೆಯೂ ಆಗಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ಧಾರವಾಡದ ಸರ್ವತೋಮಖ ಅಭಿವೃದ್ಧಿಯನ್ನು ಗಣನೆಗೆ ತೆಗೆದುಕೊಂಡು ಧಾರವಾಡಕ್ಕೆ ಪ್ರತ್ಯೇಕವಾದ ಮಹಾನಗರ ಪಾಲಿಕೆಯನ್ನು ಸ್ಥಾಪಿಸಲೇಬೇಕು ಎಂದು ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಕೂಡ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.
1962 ರಲ್ಲಿ ಸರ್ಕಾರ ಹು-ಧಾ ಮಹಾನಗರ ಪಾಲಿಕೆಯನ್ನು ರಚನೆ ಮಾಡಿತು. ಅಂದಿನಿಂದ ಇಲ್ಲಿಯವರೆಗೆ ಧಾರವಾಡ ವಿದ್ಯೆಗೆ ಮತ್ತು ಹುಬ್ಬಳ್ಳಿ ವಾಣಿಜ್ಯ ನಗರಗಳಾಗಿ ಬೆಳೆದಿವೆ. ಅದಕ್ಕೆ ತಕ್ಕಂತೆ ಜನಸಂಖ್ಯೆ ಹಾಗೂ ಎರಡೂ ನಗರಗಳ ಸಮಸ್ಯೆಗಳು ಬೆಳೆದಿವೆ. ಆದರೆ, ಈವರೆಗೆ ಮಾತ್ರ ಧಾರವಾಡ ಜನತೆಯ ಸಮಸ್ಯೆಗಳು ಹಾಗೆಯೇ ಉಳಿದಿವೆ.
ಬೆಳೆಯುತ್ತಿರುವ ಜನಸಂಖ್ಯೆ ಮತ್ತು ವಿಸ್ತಾರವಾಗಿರುವ ಪಾಲಿಕೆಯ ಕಾರ್ಯ ವ್ಯಾಪ್ತಿ ಹಾಗೂ ಎರಡೂ ನಗರಗಳ ಮಧ್ಯೆ ಇರುವ ಭೌಗೋಳಿಕ ಅಂತರದಿಂದಾಗಿ ನಗರ ಪಾಲಿಕೆಯ ಆಡಳಿತ ಸಮರ್ಪಕವಾಗಿ ನಡೆಯುತ್ತಿಲ್ಲ. ನಗರ ಪಾಲಿಕೆ ಆಯುಕ್ತರು ಮತ್ತು ಮಹಾಪೌರರು ವಾರದಲ್ಲಿ ಎರಡು ದಿನ ಧಾರವಾಡ ಪಾಲಿಕೆ ಕಾರ್ಯಾಲಯದಿಂದ ಕಾರ್ಯ ನಿರ್ವಹಿಸಬೇಕು ಎಂದಿದ್ದರೂ ಅದೂ ಆಗುತ್ತಿಲ್ಲ. ಕಾಟಾಚಾರಕ್ಕಾಗಿ ಮಾತ್ರ ಕೆಲ ಸಮಯ ಭೇಟಿ ನೀಡಿ ಸುಮ್ಮನಾಗುತ್ತಿದ್ದಾರೆ. ಇದರಿಂದಾಗಿ ಧಾರವಾಡ ಜನರ ಕುಂದುಕೊರತೆ, ನಗರ ವೀಕ್ಷಣೆ ಮಾಡುವ ಕೆಲಸ ನೆನೆಗುದಿಗೆ ಬಿದ್ದಿವೆ.
ಮಹಾನಗರ ಪಾಲಿಕೆಯ ಹೆಚ್ಚಿನ ಆದಾಯ ಹಾಗೂ ವಿವಿಧ ಯೋಜನೆಗಳಡಿ ಸರ್ಕಾರದಿಂದ ಬಂದ ವಿಶೇಷ ಅನುದಾನಗಳ ಸಿಂಹಪಾಲು ಹುಬ್ಬಳ್ಳಿ ನಗರಕ್ಕೆ ಬಳಕೆ ಮಾಡಲಾಗುತ್ತಿದ್ದು, ಸ್ಮಾರ್ಟ್ ಸಿಟಿ ಯೋಜನೆಯಲ್ಲಿಯೂ ಧಾರವಾಡಕ್ಕೆ ಸಿಗಬೇಕಾದ ನ್ಯಾಯಯುತ ಪಾಲು ದೊರೆತಿಲ್ಲ. ಇದರಿಂದ ಧಾರವಾಡ ನಗರ ಅಭಿವೃದ್ಧಿಯಿಂದ ಕುಂಠಿತವಾಗುತ್ತಿದೆ ಎನ್ನುವ ಆರೋಪ ವ್ಯಾಪಕವಾಗಿದೆ.
ಧಾರವಾಡ ನಗರಕ್ಕೆ ಐತಿಹಾಸಿಕವಾಗಿ ಪ್ರತ್ಯೇಕ ಅಸ್ಮಿತೆ ಇದೆ. ಆದ್ದರಿಂದ ಧಾರವಾಡ ನಗರಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಮಾಡಿದರೆ, ಧಾರವಾಡ ಕೂಡ ಎಲ್ಲ ರೀತಿಯಿಂದ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎನ್ನುವ ಅಭಿಪ್ರಾಯ ಧಾರವಾಡದ ನಾಗರಿಕರದ್ದು.