ಉಪಾಧ್ಯಕ್ಷರಾಗಿ ಸುರೇಶ್ಚಂದ್ರ ಹೆಗಡೆ ಅವಿರೋಧ ಆಯ್ಕೆ
ಧಾರವಾಡ: ಅತ್ಯಂತ ಕುತೂಹಲ ಕೆರಳಿಸಿದ್ದ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಶಂಕರ ಮುಗದ ಅವರು 8 ಮತ ಪಡೆದುಕೊಂಡು ಅಧ್ಯಕ್ಷರಾಗಿ ಆಯ್ಕೆಯಾದರು.
ಸರ್ಕಾರದಿಂದ ಈಚೆಗೆ ನಾಮನಿರ್ದೇಶಿತ ಸದಸ್ಯರಾಗಿ ಕಾಂಗ್ರೆಸ್ ಬೆಂಬಲಿತ ಶಿವಲೀಲಾ ಕುಲಕರ್ಣಿ ಕೊನೆ ಕ್ಷಣದಲ್ಲಿ ಸ್ಪರ್ಧಿಸಿ ಕುತೂಹಲ ಕೆರಳಿಸಿದ್ದರಾದರು 6 ಮತ ಪಡೆದು ಪರಾಭವಗೊಳ್ಳಬೇಕಾಯಿತು.
ಧಾರವಾಡ ಕೆಎಂಎಫ್ ಅಧ್ಯಕ್ಷರ ಚುನಾವಣೆ ನಿರ್ದೇಶಕರಾದ ಶಂಕರ ಮುಗದ, ಗೀತಾ ಮರಲಿಂಗಣ್ಣವರ ಹಾಗೂ ಸರ್ಕಾರದಿಂದ ನಾಮ ನಿರ್ದೇಶಿತರಾದ ಶಿವಲೀಲಾ ಕುಲಕರ್ಣಿ ನಾಮಪತ್ರ ಸಲ್ಲಿಸಿದ್ದರು. ಬಿಜೆಪಿ ಬೆಂಬಲಿತ ಅಭ್ಯರ್ಥಿ ಶಂಕರ ಮುಗದ, ಗೀತಾ ಮರಲಿಂಗಣ್ಣವರ ಹಾಗೂ ಕಾಂಗ್ರೆಸ್ ಬೆಂಬಲಿತ ಶಿವಲೀಲಾ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಸುರೇಶ್ಚಂದ್ರ ಹೆಗಡೆ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಶಂಕರ ಮುಗದ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಶಾಸಕ ಅರವಿಂದ ಬೆಲ್ಲದ, ಮಾಜಿ ಶಾಸಕ ಅಮೃತ ದೇಸಾಯಿ, ಮುಖಂಡರಾದ ಮಹೇಶ ಯಲಿಗಾರ, ಸುರೇಶಗೌಡ ಪಾಟೀಲ, ಶಕ್ತಿ ಹಿರೇಮಠ, ರುದ್ರಪ್ಪ ಅರಿವಾಳ, ಶಿವು ಬೆಳಾರದ ಇತರರು ಜೊತೆಗಿದ್ದರು. ಶಿವಲೀಲಾ ಕುಲಕರ್ಣಿ ಜೊತೆಗೆ ಈಶ್ವರ ಶಿವಳ್ಳಿ, ಅರವಿಂದ ಏಗನಗೌಡರ, ಚನಬಸಪ್ಪ ಮಟ್ಟಿ, ಹನಮಂತಪ್ಪ ಕೊರವರ ಇತರರಿದ್ದರು.
ಚುನಾವಣಾ ಅಧಿಕಾರಿಯಾಗಿ ಹುಡಾ ಆಯುಕ್ತ ಡಾ.ಸಂತೋಷ ಬಿರಾದಾರ ಕಾರ್ಯನಿರ್ವಹಿಸಿದರು. ವ್ಯವಸ್ಥಾಪಕ ನಿರ್ದೇಶಕ ಡಾ.ವೀರೇಂದ್ರ ತರಲಿ ಇತರರು ಉಪಸ್ಥಿತರಿದ್ದರು. ಫಲಿತಾಂಶ ಘೋಷಣೆ ಆಗುತ್ತಿದ್ದಂತೆಯೇ ಬೆಂಬಲಿಗರು ಬಣ್ಣ ಎರಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಶಿವಲೀಲಾ ಕುಲಕರ್ಣಿ ಅವರನ್ನು ನಿರ್ದೇಶಕರನ್ನಾಗಿ ನೇಮಕ ಮಾಡಿರುವ ಕ್ರಮವನ್ನು ಪ್ರಶ್ನಿಸಿ ನಿರ್ದೇಶಕ ಶಂಕರ ಮುಗದ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಶಿವಲೀಲಾ ಕುಲಕರ್ಣಿ ಅವರು ಸ್ವತಃ ಡೇರಿ ಹೊಂದಿದ್ದು, ದೊಡ್ಡ ಪ್ರಮಾಣದ ಹೈನುಗಾರಿಕೆ ನಡೆಸುತ್ತಿದ್ದಾರೆ. ಕೆಎಂಎಫ್ ಗೆ ನಾಮನಿರ್ದೇಶನ ಆಗುವುದರ ಹಿಂದೆ ಸ್ವಹಿತಾಸಕ್ತಿ ಅಡಗಿದೆ. ಹೀಗಾಗಿ ನಾಮನಿರ್ದೇಶನದಲ್ಲಿ ಕೆಎಂಎಫ್ ನಿಯಮಾವಳಿಯ ಉಲ್ಲಂಘನೆ ಆಗಲಿದೆ. ಆದ್ದರಿಂದ ಅವರ ನಾಮನಿರ್ದೇಶನ ಸರಿಯಲ್ಲ ಎಂದು ನ್ಯಾಯಾಲಯಕ್ಕೆ ತಕರಾರು ಅರ್ಜಿ ಸಲ್ಲಿಸಿದ್ದರು.
ಈ ಕಾರಣದಿಂದ ಕೆಎಂಎಫ್ ಅಧ್ಯಕ್ಷ ಗಾದಿಗಾಗಿ ನಡೆದ ಚುನಾವಣೆ ಮತ್ತಷ್ಟು ಕೌತುಕ ಮೂಡಿಸಿತು. ಮಾಜಿ ಶಾಸಕ ಅಮೃತ ದೇಸಾಯಿ ಅವರ ಆಪ್ತ ಶಂಕರ ಮುಗದ ಅವರಿಗೆ ಅಧ್ಯಕ್ಷ ಗಾದಿ ಸಿಗದಂತೆ ಸರ್ವ ಪ್ರಯತ್ನವನ್ನು ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದವರು ನಡೆಸಿದ್ದು ವಿಫಲವಾಯಿತು. ಧಾರವಾಡ, ಗದಗ, ಉತ್ತರ ಕನ್ನಡ ಜಿಲ್ಲಾ ವ್ಯಾಪ್ತಿ ಹೊಂದಿರುವ ಕೆಎಂಎಫ್ ನಿರ್ದೇಶಕರ ಸ್ಥಾನಕ್ಕೆ ಕಳೆದ ಜೂ.30 ರಂದು ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಗರು ಮೇಲುಗೈ ಸಾಧಿಸಿದ್ದರು.
9 ಸ್ಥಾನದ ಪೈಕಿ ಸುಮಾರು ಏಳು ಸ್ಥಾನದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿದ್ದರೆ, ಇಬ್ಬರು ಕಾಂಗ್ರೆಸ್ ಬೆಂಬಲಿತರಿದ್ದಾರೆ (ನೀಲಕಂಠ ಅಸೂಟಿ, ಹನಮಂತಗೌಡ ಹಿರೇಗೌಡರ). ಆದರೆ, ಕಳೆದ ಎರಡು ದಿನಗಳ ಹಿಂದೆ ಮಾಜಿ ಸಚಿವ, ಪ್ರಭಾವಿ ಶಾಸಕ ವಿನಯ ಕುಲಕರ್ಣಿ ಅವರ ಪತ್ನಿ ಶಿವಲೀಲಾ ಕುಲಕರ್ಣಿ ಅವರನ್ನು ಸರಕಾರದಿಂದ ನಾಮನಿರ್ದೇಶನಗೊಳಿಸಿದ್ದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿತ್ತು.