ಹುಬ್ಬಳ್ಳಿ-ಧಾರವಾಡ ಸುದ್ದಿ

ಶೆಟ್ಟರ್, ಸವದಿ, ಪಕ್ಷಕ್ಕೆ ಶಕ್ತಿ ತುಂಬಿದ್ದಾರೆ: ಡಿಕೆಶಿ

ಕಾಂಗ್ರೆಸ್ ಯಾರನ್ನೂ ಕೈ ಬಿಡುವುದಿಲ್ಲ

ಶೆಟ್ಟರ, ಸವದಿ ಮನೆಗೆ ಡಿಕೆಶಿ ಭೇಟಿ

ಇಬ್ಬರಿಗೂ ಉನ್ನತ ಸ್ಥಾನಮಾನದ ಸುಳಿವು

ಪಕ್ಷ ಸಂಘಟನೆ ಕುರಿತು ಚರ್ಚೆ : ಶೆಟ್ಟರ್

ಹುಬ್ಬಳ್ಳಿ /ಬೆಳಗಾವಿ: ಯಾವ ನಾಯಕರು ಕಷ್ಟಕಾಲದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬಿದ್ದಾರೋ ಅಂತಹ ನಾಯಕರನ್ನು ಕಾಂಗ್ರೆಸ್ ಎಂದಿಗೂ ಕೈಬಿಡುವುದಿಲ್ಲ. ಪಕ್ಷ ಅವರ ಜೊತೆಗೆ ಸದಾ ನಿಲ್ಲುತ್ತದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹೇಳಿದರು.
ಶೆಟ್ಟರ್ ನಿವಾಸದಿಂದ ಹೊರ ಬಂದು ಮಾಧ್ಯಮಗಳ ಜತೆ ಮಾತನಾಡಿದ ಅವರು, ಚುನಾವಣಾ ಪ್ರಚಾರದಲ್ಲಿ ತೊಡಗಿದ್ದರಿಂದ ಬಿ ಫಾರಂ ಕೊಟ್ಟ ಮೇಲೆ ಜಗದೀಶ ಶೆಟ್ಟರ್ ಜೊತೆ ಸರಿಯಾಗಿ ಮಾತನಾಡಿರಲಿಲ್ಲ. ಹೀಗಾಗಿ ಅವರ ಭೇಟಿಗೆ ಆಗಮಿಸಿರೋದಾಗಿ ಹೇಳಿದರು.


ಶೆಟ್ಟರ್, ಸವದಿ, ಗುಬ್ಬಿ ಶ್ರೀನಿವಾಸ ಅವರಿಂದ ನಮಗೆ ಶಕ್ತಿ ಬಂದಿದೆ. ಇವರೆಲ್ಲ ನಮಗೆ ಮಾರ್ಗದರ್ಶನ ಕೊಟ್ಟಿದ್ದಾರೆ. ಹೀಗಾಗಿ ಬಹಳ ಬದಲಾಗಣೆ ಆಗಿದ್ದು, ದೊಡ್ಡ ಅವಕಾಶ ಸಿಕ್ಕಿದೆ. ದೇವರು ವರವನ್ನೂ ಕೊಡಲ್ಲ. ಶಾಪನೂ ಕೊಡಲ್ಲ ಅವಕಾಶ ಮಾತ್ರ ಕೊಡ್ತಾನೆ ಅದನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಮಾರ್ಮಿಕವಾಗಿ ನುಡಿದರು.
ಬೆಳಗಾವಿಯಲ್ಲಿ ಮಾತನಾಡಿದ ಅವರು, ಸವದಿ ಮತ್ತು ಶೆಟ್ಟರ ನಾಯಕರು ಕಾರ್ಯಕರ್ತರಲ್ಲ. ಪಕ್ಷಕ್ಕೆ ಕಷ್ಟ ಕಾಲದಲ್ಲಿ ಶಕ್ತಿ ತುಂಬಿದ್ದಾರೆ. ಹೀಗಿರುವಾಗ ನಾವು ಅವರನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.


ಸಚಿವ ಸ್ಥಾನ ಸಿಗದೇ ಇರುವುದಕ್ಕೆ ಬೇಸರ ಗೊಂಡಿದ್ದಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ ಯಾರಿಗೂ ಬೇಸರವಿಲ್ಲ.ಲಕ್ಷ್ಮಣ ಸವದಿ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದರು ಎಂಬ ವಿಚಾರ ನನಗೆ ಗೊತ್ತಿಲ್ಲ. ಆದರೆ ಕಾಂಗ್ರೆಸ್ ಪಕ್ಷ ಯಾರನ್ನೂ ಕೈ ಬಿಡುವುದಿಲ್ಲ ಅಷ್ಟು ಮಾತ್ರ ಹೇಳುತ್ತೇನೆ ಎಂದರು.

ಶೆಟ್ಟರ, ಸವದಿ ಮನೆಗೆ ಡಿಕೆಶಿ ಭೇಟಿ

ಹುಬ್ಬಳ್ಳಿ: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಇಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರ ಮಧುರಾ ಎಸ್ಟೇಟ್‌ನಲ್ಲಿನ ನಿವಾಸಕ್ಕೆ ಭೇಟಿ ಉಪಾಹಾರ ಸೇವಿಸಿ ನೀಡಿ ಅರ್ಧ ಗಂಟೆಗೂ ಹೆಚ್ಚು ಕಾಲ ಗೌಪ್ಯ ಸಭೆ ನಡೆಸಿದರು.
ಡಿ.ಕೆ. ಶಿವಕುಮಾರ ಜತೆ ಸಚಿವರಾದ ಸತೀಶ ಜಾರಕಿಹೊಳಿ,ಲಕ್ಷ್ಮಿ ಹೆಬ್ಬಾಳ್ಕರ.ಶಾಸಕ ಎನ್ ಎಚ್.ಕೋನರೆಡ್ಡಿ ಇದ್ದರು. ನಿನ್ನೆ ರಾತ್ರಿ ಬೆಳಗಾವಿಯ ಸದಾಶಿವನಗರದಲ್ಲಿರುವ ಲಕ್ಷ್ಮಣ ಸವದಿ ನಿವಾಸಕ್ಕೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ ಆಗಮಿಸಿ ಮಾತುಕತೆ ನಡೆಸಿದರು.


ಸಚಿವ ಸ್ಥಾನ ಸಿಗದಿದ್ದಕ್ಕೆ ಸವದಿ ಅಸಮಾಧಾನಗೊಂಡಿದ್ದಾರೆ ಎಂಬ ಹಿನ್ನೆಲೆಯಲ್ಲಿ ಕೆಲಕಾಲ ಮಾತುಕತೆ ನಡೆಸಿದರು. ಶಿವಕುಮಾರ ಅವರಿಗೆ ಸಚಿವರಾದ ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್, ಶಾಸಕರಾದ ಬಾಬಾಸಾಹೇಬ್ ಪಾಟೀಲ್, ಆಸೀಫ್ ಸೇಠ್, ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ ಸಾಥ್ ನೀಡಿದರು. ಇಬ್ಬರೂ ನಾಯಕರ ಭೇಟಿ ತೀವ್ರ ಕುತೂಹಲ ಕೆರಳಿಸಿದೆ.

ಪಕ್ಷ ಸಂಘಟನೆ ಕುರಿತು ಚರ್ಚೆ : ಶೆಟ್ಟರ್

ಹುಬ್ಬಳ್ಳಿ : ಡಿಸಿಎಂ ಡಿಕೆ ಶಿವಕುಮಾರ ಅವರ ಜೊತೆ ಮಾತುಕತೆ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಿಎಂ ಜಗದೀಶ ಶೆಟ್ಟರ್ ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷ ಸಂಘಟನೆ ಬಗ್ಗೆ ಡಿಕೆಶಿ ಸಂತೋಷ ವ್ಯಕ್ತಪಡಿಸಿದ್ದಾರೆ.ಅಲ್ಲದೇ ಮುಂಬರುವ ಲೋಕಸಭೆ, ತಾಲೂಕು ಹಾಗೂ ಜಿಲ್ಲಾ ಪಂಚಾಯತಿ ಚುನಾವಣೆ ತಯಾರಿ ಬಗ್ಗೆಯೂ ಔಪಚಾರಿಕ ಚರ್ಚೆ ಮಾಡಿದ್ದೇವೆ. ಪಕ್ಷವನ್ನ ಇನ್ನೂ ಹೆಚ್ಚಿನ ರೀತಿಯಲ್ಲಿ ಬಲಪಡಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿದ್ದೇವೆ. ಅವರೂ ಸಹ ಕೆಲವು ಸಲಹೆ, ಸೂಚನೆಗಳನ್ನ ನೀಡಿದ್ದಾರೆ ಎಂದರು.


ಪಕ್ಷ ನನ್ನ ಜೊತೆಗಿದೆ ಅನ್ನೋ ಭರವಸೆಯನ್ನು ನೀಡಿದ್ದು, ಲೋಕಸಭೆ ಚುನಾವಣೆ ಯಲ್ಲಿ ನಾನು ಅಭ್ಯರ್ಥಿ ಅನ್ನೋಬಗ್ಗೆ ಯಾವುದೇ ಚರ್ಚೆ ಮಾಡಿಲ್ಲ ಎಂದು ಶೆಟ್ಟರ ಸ್ಪಷ್ಟಪಡಿಸಿದರು.

administrator

Related Articles

Leave a Reply

Your email address will not be published. Required fields are marked *