ಮುಂದುವರಿದಿದೆ ಸಂತೋಷ ಷಡ್ಯಂತ್ರ
ಹುಬ್ಬಳ್ಳಿ: ಜಗದೀಶ ಶೆಟ್ಟರ್ ಅವರನ್ನು ಸೋಲಿಸಲೇ ಬೇಕೆಂಬ ಬಿಜೆಪಿಯ ಒಂದಂಶದ ಅಭಿಯಾನ ಆರಂಭಿಸಿದ್ದು, ನನ್ನ ಸೋಲಿಸಿದರೇ ಖುಷಿ ಪಡುವ ಜನರೇ ಹೆಚ್ಚು. ಆದರೆ ಅವರ ಕನಸನ್ನು ಮತದಾರರು ನನಸು ಮಾಡದೇ ಕನಸಾಗಿಯೇ ಇಡಲಿದ್ದಾರೆಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಹುರಿಯಾಳಾಗಿರುವ ಅವರು, ಈ ಬಾರಿ ದಾಖಲೆ ಮತಗಳನ್ನು ಪಡೆದು ಚುನಾವಣೆಯನ್ನು ಗೆದ್ದು ಬರಲಿದ್ದೇನೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿಯವರು ಹೇಗಾದರೂ ಮಾಡಿ ಕುತಂತ್ರದಿಂದ ಸೋಲಿಸುವ ಗುರಿ ಹೊಂದಿದ್ದಾರೆ. ಇದೇ ಕಾರಣಕ್ಕೆ ಹು-ಧಾ ಸೆಂಟ್ರಲ್ ಕ್ಷೇತ್ರ ರಾಜ್ಯ, ದೇಶದ ಗಮನ ಸೆಳೆಯುತ್ತಿದೆ. ಯಾವುದೇ ಚುನಾವಣೆ ಬಂದಲ್ಲಿ ಅಭ್ಯರ್ಥಿಗಳು ಉತ್ತಮವಾಗಿದ್ದಾರೆ. ಅವರ ಪರವಾಗಿ ಮತ ಹಾಕುವಂತೆ ನಾಯಕರು ಮನವಿ ಮಾಡುವುದು ಸಾಮಾನ್ಯ. ಆದರೆ ಬಿಜೆಪಿ ನಾಯಕರು ಮಾತ್ರ ವಿರೋಧ ಪಕ್ಷದಲ್ಲಿರುವ ನನ್ನ ಸೋಲಿಸುವಂತೆ ಕರೆ ಕೊಡುತ್ತಿದ್ದಾರೆ. ಇದೀಗ ಪಕ್ಷ ಬಿಟ್ಟಿರುವ ಮಹತ್ವ ಬಿಜೆಪಿಗೆ ಅರಿವಾಗಿದೆ. ನನ್ನ ಗೆಲುವಿನ ನಂತರ ಇತಿಹಾಸ ನಿರ್ಮಾಣ ಆಗಲಿದೆ ಎಂದರು.
ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ ಅವರು ಲಿಂಗಾಯತ ಹಿರಿಯ ನಾಯಕರನ್ನು ಮುಗಿಸುವ ಷಡ್ಯಂತ್ರ ಮುಂದುವರೆಸಿದ್ದಾರೆ. ಇದೇ ಕಾರಣಕ್ಕೆ ಬಿ.ಎಸ್.ಯಡಿಯೂರಪ್ಪ ಅವರಿಂದ ವಯಸ್ಸಾಗಿದೆ ಎಂದು ರಾಜೀನಾಮೆ ಕೊಡಿಸಿದ್ದಾರೆ. ಆದರೆ ಅವರನ್ನೇ ಇಂದು ಚುನಾವಣೆ ಪ್ರಚಾರಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ನೋಡಿದ್ರೆ ಲಿಂಗಾಯತರನ್ನು ಮುಗಿಸುವ ಇವರ ಹಿಡನ್ ಅಜೆಂಡಾ ಗೊತ್ತಾಗುತ್ತದೆ ಎಂದರು.
ಬಿ.ಎಲ್.ಸಂತೋಷ ಹೇಳಿಕೆಗೆ ಸುದ್ದಿ ಎಲ್ಲೆಡೆ ಹರಿಡಾಡುತ್ತಿದ್ದಂತೆ ಅದನ್ನು ಫೇಕ್ ಎಂದು ಇದೀಗ ಬಿಜೆಪಿಯವರು ದೂರು ಕೊಡಲು ಮುಂದಾಗಿದ್ದಾರೆ. ಇವರಿಗೆ ಅನಾನುಕೂಲ ಯಾವುದು ಆಗುತ್ತದೆ ಅದರ ವಿರುದ್ಧ ದೂರು ಕೊಡೋದು ಇವರ ಸ್ವಭಾವ. ಇಷ್ಟು ದಿನ ಕಳೆದರೂ ಕೂಡಾ ಬಿ.ಎಲ್.ಸಂತೋಷ ಈ ಬಗ್ಗೆ ಸ್ಪಷ್ಟನೆ ನೀಡಲು ಮುಂದಾಗಿಲ್ಲ ಎಂದು ಹರಿಹಾಯ್ದರು.
ಬಿಜೆಪಿಯಲ್ಲಿ ಗುಲಾಮಗಿರಿ ಸಂಸ್ಕೃತಿಗೆ ಬೆಲೆಯಿದೆ. ಯಾರು ಜೀ ಹುಜುರ್ ಅವರನ್ನು ನಾಯಕರಾಗಿ ಮಾಡತ್ತಾರೆ. ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಅವರು ಕೆಜಿಪಿ ಪಕ್ಷ ಕಟ್ಟಿಸುವಂತೆ ಮಾಡಿದ್ದೇ ಇವರು, ಆಗ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ಪಕ್ಷವನ್ನು ಸಂಪರ್ಕಿಸಿ ಸೇರ್ಪಡೆಗೊಳ್ಳುವ ಹಂತದಲ್ಲಿದ್ದರು. ಆದರೆ ಇದೀಗ ನನ್ನ ಬಗ್ಗೆ ಮಾತನಾಡಲು ಅವರಿಗೆ ಯಾವುದೇ ನೈತಿಕತೆ ಇಲ್ಲ ಎಂದು ದೂರಿದರು.
ಬಿಜೆಪಿ ತತ್ವ ಸಿದ್ದಾಂತಗಳ ಬಗ್ಗೆ ಮಾಡುತ್ತದೆ. ಅದೇ ತನ್ನ ಟಿಕೆಟ್’ನ್ನು ರೌಢಿಶೀಟರ್ ಗಳಿಗೆ, ಸಿಡಿ ಕೇಸ್’ದಲ್ಲಿ ಇದ್ದವರಿಗೆ ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡ ನನ್ನ ಬಗ್ಗೆ ಮಾತನಾಡಲು ಬಿಜೆಪಿಯವರಿಗೆ ಯಾವುದೇ ನೈತಿಕತೆ ಇಲ್ಲ ಎಂದು ಕಿಡಿಕಾರಿದರು.
.ಬಹಿರಂಗ ಪ್ರಚಾರಕ್ಕೆ ಇಂದು ಕೊನೆಯ ದಿನವಾಗಿದೆ. ಕ್ಷೇತ್ರದ ಪ್ರತಿಯೊಂದು ಭಾಗಕ್ಕೆ ಹೋಗಿ ಪ್ರಚಾರ ಮಾಡಿದ್ದೇನೆ. ಕಾಂಗ್ರೆಸ್ ಪಕ್ಷ ಸೇರ್ಪಡೆ ಬಳಿಕ ಸ್ಥಳೀಯ ನಾಯಕರು, ರಾಜ್ಯ, ಕೇಂದ್ರದ ನಾಯಕರು ನನಗೆ ಕೈಜೋಡಿಸಿದ್ದಾರೆ. ಜೊತೆಗೆ ನಾನು ಪಕ್ಷ ನೀಡಿದ ಜವಾಬ್ದಾರಿ ತೆಗೆದುಕೊಂಡು, ಪಕ್ಷದ ಅಭ್ಯರ್ಥಿಗಳ ಪರವಾಗಿ ವಿವಿಧೆಡೆ ಪ್ರಚಾರ ಮಾಡಿದ್ದೇನೆ. ಈಗಾಗಲೇ ಎಲ್ಲೆಡೆ ಕಾಂಗ್ರೆಸ್ ಪರವಾಗಿ ದೊಡ್ಡ ಮಟ್ಟದ ಬೆಂಬಲ ಸಿಗುತ್ತಿದೆ. ನನ್ನ ಆರು ಬಾರಿಯ ಹಿಂದಿನ ಚುನಾವಣೆಗಿಂತಲೂ ಹೆಚ್ಚಿನ ಜನಬೆಂಬಲ ವ್ಯಕ್ತವಾಗುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಅನಿಲಕುಮಾರ ಪಾಟೀಲ್, ಅಲ್ತಾಫ್ ಹಳ್ಳೂರು, ಮಂಜುನಾಥ ಕುನ್ನೂರ, ಸದಾನಂದ ಡಂಗನವರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.