90ಸಾವಿರ ಚ.ಅಡಿಯಲ್ಲಿ ಬೃಹತ್ ಪೆಂಡಾಲ್ –
10 ಸಾವಿರ ಭಕ್ತರು ಭಾಗಿ
ರಿಫ್ರೆಶ್ ಯುವರ್ ಮೈಂಡ್ ಪುಸ್ತಕ ಲೋಕಾರ್ಪಣೆ
ಹುಬ್ಬಳ್ಳಿ: ಶ್ರೀ ಅಜಿತ ಸಾಹಿತ್ಯ ಮಹೋತ್ಸವ ಸಮಿತಿ ಹಾಗೂ ಮುಂಬೈನ ಅರ್ಹಂ ಪರಿವಾರ ಟ್ರಸ್ಟ್ ಆಶ್ರಯದಲ್ಲಿ ಡಿ.18ರಂದು ಬೆಳಿಗ್ಗೆ 10.30ಕ್ಕೆ ಕುಸುಗಲ್ ರಸ್ತೆಯ ಜೈನ್ ಕಾಲೋನಿಯಲ್ಲಿ ಶ್ರೀ ಅಜಿತ ಸಾಹಿತ್ಯೋತ್ಸವ ನಡೆಯಲಿದೆ.
ಇದೇ ಸಂದರ್ಭದಲ್ಲಿ ಯುವಕರ ಖಿನ್ನತೆ, ಆತಂಕದ ಒತ್ತಡದಂತಹ ಸಮಸ್ಯೆಗಳನ್ನು ಕುರಿತು ಆಚಾರ್ಯ ಅಜಿತಶೇಖರ ಸುರೀಶ್ವರ ಅವರು ಬರೆದಿರುವ 100 ನೇ ಪುಸ್ತಕ ಕನ್ನಡ ಸೇರಿದಂತೆ 6 ಭಾಷೆಗಳಲ್ಲಿ ಮುದ್ರಣಗೊಂಡಿರುವ “ರಿಫ್ರೆಶ್ ಯುವರ್ ಮೈಂಡ್” ಸಹ ಲೋಕಾರ್ಪಣೆಗೊಳ್ಳಲಿದೆ.
ಇಂದು ಸಿದ್ದಗೊಳ್ಳುತ್ತಿರುವ ಭವ್ಯ ಟೆಂಟ್ನಲ್ಲಿಯೇ ಮಾಧ್ಯಮದವರಿಗೆ ವಿವರ ನೀಡಿದ ಸಾಹಿತ್ಯೋತ್ಸವ ಸಮಿತಿ ಅಧ್ಯಕ್ಷ ಭವರಲಾಲ್ ಸಿ.ಜೈನ ಅವರು, ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯಪಾಲ ತಾವರಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಕುಮಾರಪಾಲ್ ಭಾಯಿ ವಿ ಶಾ ಪಾಲ್ಗೊಳ್ಳಲಿರುವರೆಂದರು.
ಮಹಾರಾಷ್ಟ್ರ ಸರ್ಕಾರದ ಪ್ರವಾಸೋದ್ಯಮ, ಕೌಶಲ್ಯಾಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವ ಮಂಗಲಪ್ರಭಾತ್ ಲೋಧಾ, ರಾಜ್ಯದ ಜವಳಿ ಸಚಿವ ಶಂಕರ ಪಾಟೀಲ ಮುನೇನಕೋಪ್, ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಮಾಜಿ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕರಾದ ಪ್ರಸಾದ ಅಬ್ಬಯ್ಯ, ಅರವಿಂದ ಬೆಲ್ಲದ್, ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್, ಮೇಯರ್ ಈರೇಶ್ ಅಂಚಟಗೇರಿ, ಸಂಸದ ತೇಜಸ್ವಿ ಸೂರ್ಯ, ವಿಆರ್ಎಲ್ ಗ್ರೂಪ್ ಅಧ್ಯಕ್ಷ ವಿಜಯ ಸಂಕೇಶ್ವರ್ ಮೊದಲಾದವರು ಅತಿಥಿಗಳಾಗಿ ಆಗಮಿಸಲಿದ್ದಾರೆ.
ಅಜಿತಶೇಖರಸುರೀಶ್ವರ ಅವರು ಕಳೆದ ಒಂದು ದಶಕದಿಂದ ಕರ್ನಾಟಕ ಮತ್ತು ಹುಬ್ಬಳ್ಳಿಯ ಜನರ ಮೇಲೆ ಅತ್ಯಂತ ಸಕಾರಾತ್ಮಕ ಪ್ರಭಾವ ಬೀರಿದ್ದು, ಅವರು ತಮ್ಮ 66 ವರ್ಷಗಳ ಜೀವನದಲ್ಲಿ ಕಳೆದ 45 ವರ್ಷಗಳಿಂದ ಜೈನ ಸನ್ಯಾಸಿಗಳ ಜೀವನ ನಡೆಸುತ್ತಿದ್ದಾರೆ . ಅವರು ಬರವಣಿಗೆಯ ಮೂಲಕ ಜೈನ ಧರ್ಮದ ತಮ್ಮ ಆಲೋಚನೆಗಳು ಮತ್ತು ಬೋಧನೆಗಳನ್ನು ಹರಡುತ್ತಿದ್ದಾರೆ. ಇದುವರೆಗೆ ಅವರು ಹಿಂದಿ, ಇಂಗ್ಲಿಷ್, ಕನ್ನಡ, ಗುಜರಾತಿ, ತೆಲುಗು, ಮರಾಠಿ ಮತ್ತು ತಮಿಳು ಭಾಷೆಗಳಲ್ಲಿ 99 ಪುಸ್ತಕಗಳನ್ನು ಬರೆದಿದ್ದಾರೆಂದರು.
ದಕ್ಷಿಣ ಭಾರತದಲ್ಲಿ ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದ್ದು,ಸುಮಾರು 90 ಸಾವಿರ ಚದರಅಡಿ ಮಂಟಪ ನಿರ್ಮಿಸಲಾಗಿದ್ದು ದೇಶದ ವಿವಿಧೆಡೆಯಿಂದ ಸುಮಾರು 8ರಿಂದ 10ಸಾವಿರ ಭಕ್ತರು ಪಾಲ್ಗೊಳ್ಳಲಿದ್ದಾರೆಂದರು.
ಸಮಿತಿಯ ಎಲ್ಲ ಸದಸ್ಯರು ಕಳೆದ ಎರಡು ತಿಂಗಳುಗಳಿಂದ ಕಾರ್ಯಕ್ರಮದ ಸಿದ್ಧತೆಯಲ್ಲಿ ನಿರತರಾಗಿದ್ದು ಎಲ್ಲ ಸಿದ್ದತೆಗಳು ಪೂರ್ಣಗೊಂಡಿವೆ. ದಿ. 17ರಂದು ಬೆಳಿಗ್ಗೆ ಕೇಶ್ವಾಪುರದ ಮುನೀಶ್ವರ ಮಂದಿರದಿಂದ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದರು.
ಗೋಷ್ಠಿಯ ವೇಳೆ ಅಜಿತಸುರಿಶ್ವರಜಿ ಮಹಾರಾಜ, ವಿಮಲಬೋಧಿಸುರೀಶ್ವರಜಿ, ಸಾಧು ಮಂತ್ರಶೇಖರಜಿ ಅಲ್ಲದೇ ಉತ್ಸವದ ಸಂಚಾಲಕ ತಿಲಕ್ ಕರಮಚಂದ್ ವಿಕ್ಮಶಿ, ಸದಸ್ಯರುಗಳಾದ ಸಿಎ ಭರತ್ ಭಂಡಾರಿ, ಸುರೇಶ್ ಧೋಕಾ, ಅಮೃತ್ ಜೈನ್, ಪುರಾನ್ಕುಮಾರ ನಹತಾ, ಸುರೇಶ್ ಸಿ ಜೈನ್(ಲಕ್ಕಿ), ವಿನಯ್ ಆರ್. ಶಾ, ವಿಕ್ರಮ್ ಸುರಾನಾ, ಸಂಜಯ್ ಕೊಠಾರಿ ಇದ್ದರು.