ಗುರಿಕಾರ ಪರ ಸಿದ್ದರಾಮಯ್ಯ ಬಿರುಸಿನ ಪ್ರಚಾರ
ಧಾರವಾಡ : ಈಗಲ್ಲ ನಾವು ಮೊದಲನಿಂದಲೂ ಕೋಮುವಾದಿಗಳನ್ನ ವಿರೋಧಿಸುತ್ತೇವೆ, ಕೋಮುವಾದಿ ಶಕ್ತಿಗಳನ್ನು ಸೋಲಿಸಲು ಕಾಂಗ್ರೆಸ್ ಅಭ್ಯರ್ಥಿಯನ್ನು ಜೆಡಿಎಸ್ ಬೆಂಲಿಸಲಿ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಸುದ್ದಿಗಾರರೊಂದಿಗೆ ಇಲ್ಲಿ ಮಾತನಾಡಿದ ಅವರು, ರಾಜ್ಯಸಭಾ ಚುನಾವಣೆ ಹಿನ್ನೆಲೆ ಕೋಮುವಾದಿಗಳನ್ನು ಸೋಲಿಸಲು ಕಾಂಗ್ರೆಸ್ ಮತ್ತು ಜೆಡಿಎಸ್ ಒಂದಾಗಬೇಕು ಎಂಬ ಎಚ್.ಡಿ.ಕುಮಾರಸ್ವಾಮಿಯವರ ಹೇಳಿಕೆಗೆ ಮೇಲಿನಂತೆ ಪ್ರತಿಕ್ರಿಯಿಸಿದರು.
ನಾವು ಯಾವತ್ತಿಗೂ ಕೋಮುವಾದಿಗಳನ್ನು ವಿರೋಧಿಸುತ್ತೇವೆ. ಜೆಡಿಎಸ್ ಗಿಂತ ಒಂದು ದಿನ ಮೊದಲೇ ನಾವು ತೀರ್ಮಾನ ಮಾಡಿ ರಾಜ್ಯಸಭೆಯ ಚುನಾವಣೆಗೆ ಎರಡನೇ ಅಭ್ಯರ್ಥಿ ಹಾಕಿದ್ದೇವೆ. ನಮ್ಮ ಅಭ್ಯರ್ಥಿ ಹಾಕಿದ ನಂತರ ಅವರು ಅಭ್ಯರ್ಥಿ ಹಾಕಿದ್ದಾರೆ. ಕೋಮುವಾದಿ ಅಭ್ಯರ್ಥಿ ಸೋಲಿಸ ಬೇಕು ಎಂಬ ಉದ್ದೇಶವಿದ್ದರೆ. ಅವರು ಅಭ್ಯರ್ಥಿ ಹಾಕುತ್ತಿರಲಿಲ್ಲ. ನಾವು ಅಲ್ಪಸಂಖ್ಯಾತ ಸಮುದಾಯದ ಮನ್ಸೂರ್ ಅಲಿಖಾನ್‌ರನ್ನು ಹಾಕಿದ್ದೇವೆ.
ಅವರನ್ನು ಗೆಲ್ಲಿಸಬೇಕಿದ್ದರೆ ನಮಗೆ ಮತ ಹಾಕಲಿ. ದೇವೇಗೌಡರು ರಾಜ್ಯಸಭೆಗೆ ನಿಂತಾಗ ನಾವು ಅಭ್ಯರ್ಥಿ ಹಾಕಿದ್ದೇವಾ ಎಂದು ಮರು ಪ್ರಶ್ನೆ ಹಾಕಿದರು.
ಜೆಡಿಎಸ್ ನವರು ೩೭ ಜನ ಇದ್ದರೂ ಕೂಡ ಬಿಜೆಪಿ ಅಧಿಕಾರಕ್ಕೆ ಬರಬಾರದು ಅಂತ ಅವರನ್ನೇ ಸಿಎಂ ಮಾಡಿದ್ದೆವು. ದೇವೇಗೌಡರು ಪಿಎಂ ಆಗಲು ಕೂಡ ನಾವು ಬೆಂಬಲ ನೀಡಿದ್ದೇವೆ. ನಮಗೆ ಈಗ ಅವರು ಬೆಂಬಲ ಕೊಡಲಿ. ಕೋಮುವಾದಿ ಸೋಲಿಸೋಕೆ ನಮಗೆ ಬೆಂಬಲ ಕೊಡಲಿ. ನಾವೇ ಕೋಮುವಾದಿಗಳನ್ನು ಸೋಲಿಸುತ್ತೇವೆ. ನಾವು ಅನೇಕ ಬಾರಿ ಅವರಿಗೆ ಸಹಾಯ ಮಾಡಿದ್ದೇವೆ ಎಂದು ತಿರುಗೇಟು ನೀಡಿದರು.
ಯಡಿಯೂರಪ್ಪ ಭೇಟಿ ವಿಚಾರ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮದು ಹಲೋ ಹಲೋ ಅಷ್ಟೇ. ಭೇಟಿಯಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ಸ್ಪಷ್ಟಪಡಿಸಿದರು.
ಪರಿಷತ್ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಗುರಿಕಾರ ಪರವಾಗಿ ಪ್ರಚಾರಕ್ಕೆ ಬಂದಿದ್ದೇನೆ. ಕ್ಷೇತ್ರದ ಎಲ್ಲ ಶಿಕ್ಷಕ ಮತದಾರರು ಈ ಸಾರಿ ಬದಲಾವಣೆ ಬಯಸಿದ್ದಾರೆ. ಗುರಿಕಾರ ಅವರು ಕಳೆದ ೩೦ ವರ್ಷದಿಂದ ಶಿಕ್ಷಕರ ಪರವಾಗಿ ಹೋರಾಡಿದ ವ್ಯಕ್ತಿ ಅವರು ಈ ಬಾರಿ ಅವರು ಗೆಲ್ಲಬೇಕು ಎಂದು ಸಿದ್ಧರಾಮಯ್ಯ ಹೇಳಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಶಾಸಕಿ ಕುಸುಮಾವತಿ ಶಿವಳ್ಳಿ, ಮಾಜಿ ಶಾಸಕರಾದ ಬಿ.ಆರ್.ಯಾವಗಲ್ಲ, ಎನ್.ಎಚ್.ಕೋನರಡ್ಡಿ, ಜಿಲ್ಲಾ ಅಧ್ಯಕ್ಷರಾದ ಅನಿಲಕುಮಾರ ಪಾಟೀಲ, ಅಲ್ತಾಫ್ ಹಳ್ಳೂರ, ಮುಖಂಡರಾದ ದೀಪಕ ಚಿಂಚೋರೆ, ಪಿ.ಎಚ್.ನೀರಲಕೇರಿ, ದಾನಪ್ಪ ಕಬ್ಬೇರ ಮತ್ತಿತರರು ಜೊತೆಗಿದ್ದರು.