ಹುಬ್ಬಳ್ಳಿ-ಧಾರವಾಡ ಸುದ್ದಿ
ಹುಬ್ಬಳ್ಳಿಯಲ್ಲೂ ಹಿಜಾಬ್ ಪರ ಕೂಗು

ಹುಬ್ಬಳ್ಳಿಯಲ್ಲೂ ಹಿಜಾಬ್ ಪರ ಕೂಗು

ಹುಬ್ಬಳ್ಳಿ: ಶಾಲಾ-ಕಾಲೇಜುಗಳಲ್ಲಿ ಸಮುದಾಯದ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಅವಕಾಶ ಕೊಡಬೇಕು ಎಂದು ಆಗ್ರಹಿಸಿ ಹಾಗೂ ಕಡ್ಡಾಯವಾಗಿ ಸಮವಸ್ತ್ರ ಸಂಹಿತೆ ಪಾಲಿಸುವಂತೆ ಸರ್ಕಾರ ಹೊರಡಿಸಿರುವ ಆದೇಶ ಖಂಡಿಸಿ ನಗರದ ಮುಸ್ಲಿಂ ಸಮುದಾಯ ಇಲ್ಲಿನ ತಹಶಿಲ್ದಾರರ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್ ಮುಖಂಡ ಅಶ್ಪಾಕ್ ಕುಮಾಟಾಕರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಹಿಜಾಬ್ ಧರಿಸುವುದು ನಮ್ಮ ಮೂಲಭೂತ ಹಕ್ಕು. ಆದರೆ, ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿಗಳಿಗೆ ತರಗತಿಗೆ ಹೋಗಲು ರಾಜಕೀಯ ಕಾರಣಕ್ಕೆ ಅವಕಾಶ ನಿರಾಕರಿಸಲಾಗುತ್ತಿದೆ. ಸರ್ಕಾರದ ಈ ನಡೆ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿಜಾಬ್ ಸಮಾಜಕ್ಕೆ ಉತ್ತಮ ಸಂದೇಶ ಸಾರುತ್ತದೆ. ಹಾಗಾಗಿ ಹಿಜಾಬ್ ಧರಿಸಿಯೇ ನಮ್ಮ ವಿದ್ಯಾರ್ಥಿನಿಯರು ಶಾಲಾ-ಕಾಲೇಜಿಗೆ ಹೋಗುತ್ತಾರೆ. ಮುಂದೆಯೂ ಅದನ್ನು ಪಾಲಿಸುತ್ತಾರೆ. ಹಾಗಾಗಿ ಸರ್ಕಾರ ಬೇಡಿಕೆಗೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು.
ಮಹಿಳೆಯರು, ಪುರುಷರು ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಭಾರತ ಬಿಡುವುದಿಲ್ಲ, ಪಾಕಿಸ್ತಾನಕ್ಕೆ ಹೋಗುವುದಿಲ್ಲ ಎಂದು ಘೋಷಣೆ ಕೂಗಿದರು. ಇದೇ ವೇಳೆ ಸರ್ಕಾರ ಹಿಜಾಬ್ ಸಮಸ್ಯೆ ಬಗೆಹರಿಸಿ ಮುಸ್ಲಿಂ ವಿದ್ಯಾರ್ಥಿಗಳಿಗೆ ಪ್ರವೇಶಿಸಲು ಅನುಮತಿ ನೀಡಬೇಕು. ಇಲ್ಲವಾದರೆ ಹುಬ್ಬಳ್ಳಿಯಿಂದ ಉಡುಪಿಗೆ ಬಂದು ಕಾಲೇಜಿನ ವಿರುದ್ಧ ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿ ತಹಶಿಲ್ದಾರರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಮೌಲಾನಾ ನಯಿಮುದ್ದಿನ ಶೇಖ, ಮೌಲಾನಾ ನಿಜಾಮುದ್ದಿನ್ ಚಡನ್, ಮೌಲಾನಾ ಅಬ್ದುಲ್ ರಹಮಾನ್, ಮೌಲಾನಾ ಹುಸ್ಮಾನ್ ಗನಿ, ಅಲ್ತಾಫ್ ಹಳ್ಳೂರ, ಮಜರ್ ಖಾನ್, ಜರೀನ್ ತಾಜ್ ಆಫಜ್, ಫರಜಾನ್ ಒಂಟಿ, ಶಹಜಾನ್ ಬ್ಯಾಹಟ್ಟಿ, ಶಾಹಿನ್ ಶಿರಹಟ್ಟಿ ಸೇರಿದಂತೆ ಮುಂತಾದವರು ಇದ್ದರು.

 

administrator

Related Articles

Leave a Reply

Your email address will not be published. Required fields are marked *