ಸಂಸ್ಥೆ ಸಲ್ಲಿಸಿದ ಮತದಾರರ ಪಟ್ಟಿಗೆ ಅಸ್ತು
ಹುಬ್ಬಳ್ಳಿ : ಹುಬ್ಬಳ್ಳಿಯ ಅಂಜುಮನ್ ಸಂಸ್ಥೆಯ ಚುನಾವಣೆಯನ್ನು ಸುಪ್ರೀಂ ಕೋರ್ಟ 2023ರ ಜನವರಿ ನಾಲ್ಕರೊಳಗೆ ನಡೆಸುವಂತೆ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಗೆ ಇಂದು ನಿರ್ದೇಶನ ನೀಡಿದೆ.
ಇಂದು ಸುಪ್ರೀಂ ಕೋರ್ಟಿನ 9ನೇ ಹಾಲ್ನಲ್ಲಿ ನಡೆದ ವಿಚಾರಣೆಯಲ್ಲಿ ನ್ಯಾ.ಮೂ ಬಿ.ಆರ್.ಗವಾಯಿ ಹಾಗು ನ್ಯಾ.ಮೂ.ವಿಕ್ರಮನಾಥ ಪೀಠವು ಈ ಆದೇಶ ನೀಡಿದ್ದು ಈಗಾಗಲೇ ಅಂಜುಮನ್ ಸಂಸ್ಥೆ ಸಲ್ಲಿಸಿದ ಅರ್ಹ ಮತದಾರರ ಪಟ್ಟಿಯಂತೆಯೇ ಚುನಾವಣೆ ನಡೆಸಲು ಸೂಚನೆ ನೀಡಿದೆ.
ಈ ಹಿಂದೆ ಸುಪ್ರೀ ಕೋರ್ಟ ಡಿಸೆಂಬರ್ ನಾಲ್ಕರೊಳಗೆ ಚುನಾವಣೆ ನಡೆಸುವಂತೆ ನಿರ್ದೇಶನ ನೀಡಿದ್ದರೂ ಚುನಾವಣಾಧಿಕಾರಿ ನೇಮಕ ಸಹಿತ ಯಾವುದೇ ಪ್ರಕ್ರಿಯೆ ನಡೆದಿಲ್ಲವಾದ್ದರಿಂದ ಕೂಡಲೇ ಚುನಾವಣೆ ನಡೆಸಬೇಕೆಂದು ಹಾಲಿ ಅಂಜುಮನ್ ಅಧ್ಯಕ್ಷ ಮಹ್ಮದ ಯೂಸೂಪ್ ಸವಣೂರು ಸುಪ್ರೀ ಕೋರ್ಟ್ ಕದ ತಟ್ಟಿದ್ದರು. ಈಗಾಗಲೇ 11901 ಅರ್ಹ ಮತದಾರರ ಪಟ್ಟಿಯನ್ನು ನೀಡಿದ್ದು ಅದರ ಪ್ರಕಾರ ಚುನಾವಣೆ ನಡೆಸಬೇಕಾಗಿದೆ.
ಅಂಜುಮನ್ ಪರ ನ್ಯಾಯವಾದಿ ರಾಜೇಶ ಮಹಾಲೆ ವಾದಿಸಿದರೆ ವಕ್ಪ ಬೋರ್ಡನ್ನು ರಣಬೀರಸಿಂಗ ಯಾದವ ಪ್ರತಿನಿಧಿಸಿದ್ದರು.
ಅವಿರೋಧ ಆಯ್ಕೆ ಸಾಧ್ಯತೆ ಕ್ಷೀಣವಾಗಿದ್ದು ಎರಡು ಬಣಗಳ ಅಥವಾ ಮೂರು ಬಣಗಳ ನಿಶ್ಚಿತ ಎನ್ನಲಾಗಿದೆ. ಈ ಬಾರಿ 11901 ಸದಸ್ಯರು ಮತ ಚಲಾಯಿಸುವ ಅಧಿಕಾರ ಹೊಂದಿದ್ದು ಕಳೆದ ಬಾರಿಗಿಂತ 388 ಹೆಚ್ಚಿನ ಮತದಾರರು ಅಧ್ಯಕ್ಷ,ಉಪಾಧ್ಯಕ್ಷ,ಪ್ರದಾನ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ಖಜಾಂಜಿ, ಶಿಕ್ಷಣ ಮಂಡಳಿ, ಆಸ್ಪತ್ರೆ ಮಂಡಳಿ, ಪೋಷಕ ಸದಸ್ಯರು, ಆಡಳಿತ ಮಂಡಳಿ ಸೇರಿದಂತೆ 52 ಜನರ ಆಯ್ಕೆ ಮಾಡಲಿದ್ದಾರೆ. ಸುಪ್ರೀಂ ನಿರ್ದೇಶನದನ್ವಯ ಕೂಡಲೇ ಚುನಾವಣಾ ಪ್ರಕ್ರಿಯೆ ವೇಗ ಪಡೆಯುವ ಸಾಧ್ಯತೆಗಳಿವೆ.
2019 ರ ಜೂನ್ನಲ್ಲಿ ನಡೆದ ಚುನಾವಣೆಯಲ್ಲಿ ಮೂರು ಬಣಗಳ ಮಧ್ಯೆ ಜಿದ್ದಾಜಿದ್ದಿ ನಡೆದು ಅಂತಿಮವಾಗಿ ಮಹ್ಮದ ಯೂಸೂಪ್ ಸವಣೂರ ನೇತೃತ್ವದಲ್ಲಿ ಅಲ್ತಾಫ್ ಕಿತ್ತೂರ, ಅಲ್ತಾಫ್ ಹಳ್ಳೂರ ಮುಂತಾದವರನ್ನೊಳಗೊಂಡ ಗುಂಪು ಗೆಲುವು ಸಾಧಿಸಿತ್ತು.