ಹುಬ್ಬಳ್ಳಿ-ಧಾರವಾಡ ಸುದ್ದಿ

ಅವಳಿನಗರದ ನಿರಂತರ ನೀರು: ರಾಷ್ಟಕ್ಕೆ ಮಾದರಿ

ಸಾರ್ವಜನಿಕರ ಸಹಕಾರ ಮುಖ್ಯ: ಮಹಾಪೌರ ಅಂಚಟಗೇರಿ

ಧಾರವಾಡ: ವಿಶ್ವ ಬ್ಯಾಂಕ್ ನೆರವಿನಲ್ಲಿ ಅನುಷ್ಠಾನಕ್ಕೆ ಬರುತ್ತಿರುವ ಅವಳಿನಗರದ ನಿರಂತರ ನೀರು ಯೋಜನೆ ಪ್ರಾಯೋಗಿಕವಾಗಿ 24×7 ನೀರು ಸರಬರಾಜು ಯಶಸ್ವಿಯಾಗಿದ್ದು, ದೇಶಕ್ಕೆ ಮಾದರಿ ಆಗಿದೆ. ಯೋಜನೆ ಪೂರ್ಣಗೊಳ್ಳಲು ಮಾಧ್ಯಮ, ಸಾರ್ವಜನಿಕರ ಸಹಕಾರವು ಅಗತ್ಯವಾಗಿದೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರದ ಮಹಾಪೌರ ಈರೇಶ ಅಂಚಟಗೇರಿ ಅವರು ಹೇಳಿದರು.

ಅವರು ಇಂದು ಬೆಳಿಗ್ಗೆ ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ, ಕೆಯುಐಡಿಎಫ್ ಸಿ , ಮತ್ತು ನಗರ ನೀರು ಸರಬರಾಜು ಆಧುನೀಕರಣ ಕುಸ್ಸೆಂಪ್ ಯೋಜನೆ ಅಡಿಯಲ್ಲಿ ಹಮ್ಮಿಕೊಂಡಿದ್ದ ಮಾಧ್ಯಮ ಮಾಹಿತಿ ವಿನಮಯ ಹಾಗೂ ಕ್ಷೇತ್ರ ಭೇಟಿ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.
ನಿರಂತರ ನೀರು ಯೋಜನೆ ಯೋಜನೆಯಡಿ ಅವಳಿನಗರದ ಕುಡಿಯುವ ನೀರು ಸರಬರಾಜು ಜಾಲವನ್ನು
ಸುಧಾರಿಸಲಾಗುವುದು. ಅವಳಿನಗರದಲ್ಲಿ ಸುಮಾರು 1,345 ಕೀ.ಮಿ ಪೈಪಲೈನ್ ಪುನರ್ ಸ್ಥಾಪಿಸಲಾಗುವುದು. ಅವಳಿನಗರ ವ್ಯಾಪ್ತಿಯ ಸುಮಾರು 12ಲಕ್ಷ ಜನರಿಗೆ ಯೋಜನೆಯ ಲಾಭ ಸೀಗಲಿದೆ.1,45,000 ಮನೆಗಳಿಗೆ ನಳ ಸಂಪರ್ಕ ಕಲ್ಪಿಸಲಾಗುತ್ತಿದೆ. ನಿರತಂತರ ನೀರು ಯೋಜನೆಯ ಸುಗಮ ಅನುಷ್ಠಾನಕ್ಕಾಗಿ ಸುಮಾರು ೨೩ ಜಲಸಂಗ್ರಹಾರಗಳನ್ನು ನಿರ್ಮಿಸಲು ಯೋಜಿಸಲಾಗಿದೆ ಎಂದು ಅವರು ಹೇಳಿದರು.

ಈ ಮೊದಲು ಇದ್ದ 67 ವಾರ್ಡ್ ಗಳಿಗೆ 24×7 ನಿರಂತರ ನೀರು ಸರಬರಾಜು ಯೋಜನೆ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿತ್ತು. ಈಗ ವಾರ್ಡ್ಗಳ ಸಂಖ್ಯೆ ಹೆಚ್ಚಾಗಿರುವದರಿಂದ ಕೇಂದ್ರ ಸರ್ಕಾರ, ವಿಶ್ವಬ್ಯಾಂಕ್ ಹಾಗೂ ರಾಜ್ಯ ಸರ್ಕಾರದ ಹಣಕಾಸಿನ ನೆರವಿನೊಂದಿಗೆ ಈ ಹೆಚ್ಚಾಗಿರುವ 82 ವಾರ್ಡ್ ಗಳಿಗೂ ನಿರಂತರ ನೀರು ಸರಬರಾಜು ಯೋಜನೆ ವಿಸ್ತರಣೆಗೊಳಿಸಲಾಗುತ್ತಿದೆ ಎಂದು ಮಹಾಪೌರರು ಹೇಳಿದರು.


ಅವಳಿನಗರದ ಅಭಿವೃದ್ಧಿಗಾಗಿ ಅನೇಕ ಕಾಮಗಾರಿ, ಕಾರ್ಯಕ್ರಮ ಹಮ್ನಿಕೊಳ್ಳಲಾಗುತ್ತಿದೆ. ಅದರಲ್ಲಿ ಕುಡಿಯುವ ನೀರು ಸರಬರಾಜು ವ್ಯವಸ್ಥೆಗೆ ಆಧ್ಯತೆ ನೀಡಲಾಗಿದೆ. ಅವಳಿ ನಗರದ ನಾಗರಿಕರು ಸಹಕಾರ ನೀಡಬೇಕೆಂದು ಅವರು ಹೇಳಿದರು.
ಮಹಾನಗರಪಾಲಿಕೆ ಆಯುಕ್ತ ಡಾ.ಗೋಪಾಲಕೃಷ್ಣ ಬಿ., ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ನಗರದ ಮಹಾಜನತೆಗೆ ಸಕಾಲಕ್ಕೆ ಅಗತ್ಯ ಕುಡಿಯುವ ನೀರು ಸರಬರಾಜು ಮಾಡುವುದು ಪಾಲಿಕೆಯ ಜವಾಬ್ದರಿ. ಕುಡಿಯುವ ನೀರು ಅಪವ್ಯಯ ತಪ್ಪಿಸಿ, ನೀರು ಸರಬರಾಜು ಸುಧಾರಣೆಗೆ ಮಹತ್ವ ನೀಡಲಾಗಿದೆ.
ತೀವ್ರಗತಿಯಲ್ಲಿ ಬೆಳೆಯುತ್ತಿರುವ ಮಹಾನಗರದ ಜನತೆಗೆ ನಿರಂತರ ನೀರು ಯೋಜನೆ ಒಂದು ವರದಾನವಾಗಿದೆ. ಪ್ರಾಯೋಗಕವಾಗಿ ದಿನದ 24 ಗಂಟೆ ನಿರಂತರ ನೀರು ಸರಬರಾಜು ಯೋಜನೆ ಅತ್ಯಂತ ಯಶಸ್ವಿಯಾಗಿದ್ದು, ಇದು ರಾಷ್ಟ್ರದ ಗಮನ ಸೆಳೆದಿದೆ. ದೇಶದ ಅನೇಕ ಮಹಾನಗರಗಳ ಮತ್ತು ವಿದೇಶಗಳ ಅನೇಕ ತಂತ್ರಜ್ಞರು, ಜನಪ್ರತಿನಿಧಿಗಳು, ಸರಕಾರದ ಪ್ರತಿನಿಧಿಗಳು ನಿರಂತರ ನೀರು ಯೋಜನಾ ಪ್ರದೇಶಗಳಿಗೆ ಭೇಟಿ ನೀಡಿ, ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮತ್ತು ತಮ್ಮ ನಗರಗಳಲ್ಲೂ ಯೋಜನೆ ಅನುಷ್ಠಾನಗೊಳಿಸಲು ಆಸಕ್ತಿ ವ್ಯಕ್ತಪಡಿಸಿದ್ದಾರೆ. ಇದು ನಮ್ಮ ನಗರದ ಹೆಮ್ಮೆ ಎಂದು ಅವರು ಹೇಳಿದರು.

ನಿರಂತರ ನೀರು ಯೋಜನೆ ಈಗ ಇಡೀ ಮಹಾನಗರದ ಇಂದಿನ ೮೨ ವಾರ್ಡ್‌ಗಳಿಗೆ ವಿಸ್ತರಿಸಲಾಗುತ್ತಿದೆ. ಯೋಜನೆ ಅನುಷ್ಠಾನ ಸಂದರ್ಭದಲ್ಲಿ ಸಣ್ಣಪುಟ್ಟ ತೊಂದರೆ, ವಿಳಂಬವಾಗುವುದು ಸಹಜ. ಅದಕ್ಕೆ ಮಾಧ್ಯಮ ಮತ್ತು ಸಾರ್ವಜನಿಕರ ಸಹಕಾವೂ ಮುಖ್ಯವಾಗಿದೆ ಎಂದು ಡಾ.ಗೋಪಾಲಕೃಷ್ಣ ಹೇಳಿದರು.

ಕಾರ್ಯಕ್ರಮದಲ್ಲಿ ಮಹಾನಗರಪಾಲಿಕೆ ಉಪ ಮಹಾಪೌರರಾದ ಉಮಾ ಮುಕುಂದ, ಪಾಲಿಕೆ ವಿರೋಧ ಪಕ್ಷದ ನಾಯಕ ದೊರೆರಾಜ ಮಣಿಕುಂಟ್ಲಾ, ಕೆಯುಐಡಿಎಫ್ ಸಿ, ಕುಸ್ಸೆಂಪ್ ಯೋಜನೆ ಕಾರ್ಯ ವ್ಯವಸ್ಥಾಪಕ ಶರಣಪ್ಪ ಸುಲಗುಂಟೆ, ಅಧೀಕ್ಷಕ ಅಭಿಯಂತರರಾದ ಎಂ.ಕೆ.ಮನಗೊಂಡ, ಪ್ರತಿಭಾ ಮಠ ಇನ್ನಿತರರು ಉಪಸ್ಥಿತರಿದ್ದರು.

ಕಾರ್ಯಾಗಾರದಲ್ಲಿ ಕೆಯುಐಡಿಎಫ ಸಿ ಅಧೀಕ್ಷಕ ಅಭಿಯಂತರ ಎಂ.ಕೆ.ಮನಗೊಂಡ ಅವರು ನಿರಂತರ ಯೋಜನೆ ಕುರಿತು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು. ಕಾರ್ಯಾಗಾರದಲ್ಲಿ ಅವಳಿನಗರದ ಮಾಧ್ಯಮ ಪ್ರತಿನಿಧಿಗಳು, ಕೆಯುಐಡಿಎಫ್ ಸಿ, ಮಹಾನಗರಪಾಲಿಕೆ ಅಧಿಕಾರಿಗಳು ಮತ್ತು ಸರಕಾರೇತರ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

 

administrator

Related Articles

Leave a Reply

Your email address will not be published. Required fields are marked *