ಹುಬ್ಬಳ್ಳಿ: ಕಳೆದ ದಿ.23ರಂದು ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿ ಸಂಭವಿಸಿದ ಭೀಕರ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಐದಕ್ಕೇರಿದ್ದು ಆಕ್ಸನಿಕ್ ಇನ್ನೋವೇಷನ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಮಾಲಿಕ ಗದಗ ಮೂಲದ ಮುಂಬೈನ ಉದ್ಯಮಿ ಅಬ್ದುಲ್ ಶೇಖ್ ಹಾಗೂ ಮ್ಯಾನೇಜರ್ ಸಹಿತ ಮಂಜುನಾಥ ಸಹಿತ ಇಬ್ಬರ ಬಂಧನವಾಗಿದೆ.
ಬಂಧಿತರು ನ್ಯಾಯಾಂಗವಶದಲ್ಲಿದ್ದು ಇನ್ನೂ ಮೂರು ಗಾಯಾಳುಗಳು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಂಪನಿಗೆ ಮೂರು ಪಾಲುದಾರರಿದ್ದು ಅಬ್ದುಲ್ ಶೇಖ ಅಲ್ಲದೇ ಇಲ್ಲಿನ ಬಹುತೇಕ ಎಲ್ಲ ಚಟುವಟಿಕೆಗಳ ಉಸ್ತುವಾರಿ ನಿರ್ವಹಿಸುತ್ತಿದ್ದ ತಬಸ್ಸುಮ್‌ಗಾಗಿ ಗ್ರಾಮೀಣ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಹಳೇಹುಬ್ಬಳ್ಳಿ ಪ್ರದೇಶದಲ್ಲಿ ವಾಸಿಸುತ್ತಿದ್ದ ಈಕೆ ಶಿಗ್ಗಾವಿ ತಾಲೂಕಿನ ಬಂಕಾಪುರ ಮೂಲದವಳು ಎನ್ನಲಾಗಿದೆ.
ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಗ್ರಾಮೀಣ ಇನ್ಸಪೆಕ್ಟರ್ ರಮೇಶ ಗೋಕಾಕ ನೇತೃತ್ವದಲ್ಲಿ ಎರಡು ತಂಡಗಳು ತಬಸ್ಸುಮ್‌ಗಾಗಿ ಜಾಲ ಬೀಸಿವೆ.ಕಂಪನಿಯ ಒಪ್ಪಂದದಲ್ಲಿರುವಂತೆ ಇನ್ನೋರ್ವ ಪಾಲುದಾರ ಆರೀಫ್ ಆಗಿದ್ದು ಆತನ ಇಲ್ಲಿ ಯಾವುದೇ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲ ಎನ್ನಲಾಗುತ್ತಿದೆ.
ಕಾರ್ಖಾನೆಯು ಅನಧಿಕೃತವಾಗಿ ಕಾರ್ಯ ನಿರ್ವಹಿಸುತ್ತಿರುವುದು ಬೆಳಕಿಗೆ ಬಂದಿತ್ತಲ್ಲದೇ ಫ್ಯಾಕ್ಟರಿ ಕಟ್ಟಡದ ಮೂಲ ಮಾಲೀಕ ಬನಶಂಕರಿ ದೀಕ್ಷೀತ್ ಅವರು, ಶೇಖ್ ಅವರಿಗೆ ಕಾರ್ಖಾನೆ ನಡೆಸಲು ಬಾಡಿಗೆ ನೀಡಿರುವ ಹಿನ್ನೆಲೆಯಲ್ಲಿ ಅವರನ್ನು ಹಲವು ಸಲ ವಿಚಾರಣೆಗೊಳಪಡಿಸಲಾಗಿದೆ.
ಈಗಾಗಲೇ ಉಸ್ತುವಾರಿ ಸಚಿವ ಹಾಲಪ್ಪ ಆಚಾರ ಖಡಕ್ ವಾರ್ನಿಂಗ್ ನಂತರ ಅನಧಿಕೃತವಾಗಿ ಕಾರ್ಯ ನಿರ್ವಹಿಸುತ್ತಿರುವ ಕೈಗಾರಿಕೆಗಳ ಸಮೀಕ್ಷೆಯನ್ನು ಸುಮಾರು 10 ತಂಡಗಳು ನಡೆಸಿದ್ದರೂ ಪ್ರಗತಿ ಮಾತ್ರ ಅವರಿಗೆ ಗೊತ್ತು ಎನ್ನುವಂತಾಗಿದೆ.