ಹುಬ್ಬಳ್ಳಿ: ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿ ಸಂಭವಿಸಿದ ಭೀಕರ ದುರಂತ ಸಂಭವಿಸಿದ ಆಕ್ಸನಿಕ್ ಇನ್ನೋವೇಷನ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಮಾಲಿಕ ಗದಗ ಮೂಲದ ಮುಂಬೈನ ಉದ್ಯಮಿ ಅಬ್ದುಲ್ ಶೇಖ್‌ನನ್ನು ಬಂಧಿಸುವಲ್ಲಿ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ದಿ.23ರಂದು ಕಾರ್ಖಾನೆಯಲ್ಲಿ ನಡೆದ ದುರಂತದಲ್ಲಿ ಇದುವರೆಗೆ ಐವರು ಮೃತಪಟ್ಟಿದ್ದಾರೆ. ತೀವ್ರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ನಿರ್ಮಲಾ ಇಂದು ಅಸು ನೀಗಿದ್ದಾರೆ. ಇನ್ನೂ ಮೂರು ಗಾಯಾಳುಗಳು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾರ್ಖಾನೆಯು ಅನಧಿಕೃತವಾಗಿ ಕಾರ್ಯ ನಿರ್ವಹಿಸುತ್ತಿರುವುದು ಬೆಳಕಿಗೆ ಬಂದಿತ್ತಲ್ಲದೇ ಫ್ಯಾಕ್ಟರಿ ಕಟ್ಟಡದ ಮೂಲ ಮಾಲೀಕ ಬನಶಂಕರಿ ದೀಕ್ಷೀತ್ ಅವರು, ಶೇಖ್ ಅವರಿಗೆ ಕಾರ್ಖಾನೆ ನಡೆಸಲು ಬಾಡಿಗೆ ನೀಡಿದ್ದ.
ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಗ್ರಾಮೀಣ ಇನ್ಸಪೆಕ್ಟರ್ ರಮೇಶ ಗೋಕಾಕ ನೇತೃತ್ವದಲ್ಲಿ ಮೂರ್‍ನಾಲ್ಕು ತಂಡಗಳು ಜಾಲ ಬೀಸಿ ವ್ಯಾಪಕ ಕಾರ್ಯಾಚರಣೆ ನಡೆಸಿದರೂ ಶೇಖ್ ತಪ್ಪಿಸಿಕೊಳ್ಳುತ್ತಲೇ ಇದ್ದ. ಕಳೆದ ರಾತ್ರಿ ಧಾರವಾಡ ಬಳಿ ಆತನನ್ನು ವಶಕ್ಕೆ ಪಡೆಯಲಾಗಿದ್ದು ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಎರಡಕ್ಕೇರಿದೆ.ಈಗಾಗಲೇ ಕಾರ್ಖಾನೆಯ ಮ್ಯಾನೇಜರ್ ಮಂಜುನಾಥ ಹರಿಜನನ್ನು ವಶಕ್ಕೆ ಪಡೆದಿದ್ದು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಶೇಖ್ ಜತೆ ಮತ್ತಿಬ್ಬರು ಪಾಲುದಾರರು ಇದ್ದಾರೆನ್ನಲಾಗಿದ್ದು ಅವರ ವಿವರ ಸಂಗ್ರಹಿಸಲಾಗುತ್ತಿದ್ದು ಹಾಗೂ ಫ್ಯಾಕ್ಟರಿ ಕಟ್ಟಡದ ಮೂಲ ಮಾಲಿಕ ಬನಶಂಕರಿ ದೀಕ್ಷಿತ ಅವರ ವಿಚಾರಣೆಯನ್ನೂ ಪೊಲೀಸರು ಮುಂದುವರಿಸಿದ್ದಾರೆ.
ಈಗಾಗಲೇ ಉಸ್ತುವಾರಿ ಸಚಿವ ಹಾಲಪ್ಪ ಆಚಾರ ಖಡಕ್ ವಾರ್ನಿಂಗ್ ನಂತರ ಅನಧಿಕೃತವಾಗಿ ಕಾರ್ಯ ನಿರ್ವಹಿಸುತ್ತಿರುವ ಕೈಗಾರಿಕೆಗಳ ಸಮೀಕ್ಷೆಯನ್ನು ಸುಮಾರು ೧೦ ತಂಡಗಳು ನಡೆಸಿವೆ. ಜಿಲ್ಲೆಯಲ್ಲಿ ಸಂಪೂರ್ಣ ಕಾನೂನು ಉಲ್ಲಂಘನೆ ಮಾಡಿರುವ ಕೈಗಾರಿಕೆಗಳನ್ನು ನಿರ್ದಾಕ್ಷಿಣ್ಯವಾಗಿ ಮುಚ್ಚಲು ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.