ನಾಮಪತ್ರ ಹಿಂಪಡೆಯಲು ನಾಳೆ ಕೊನೆ ದಿನ – ಎಲ್ಲ ಸ್ಥಾನ ಅವಿರೋಧ ಸಾಧ್ಯತೆ!
ಸುಮಾರು ಮೂರು ದಶಕದ ನಂತರ ’ಐಟಿ’ ಇತಿಹಾಸ ರಚಿಸುವರೇ?
ಧಾರವಾಡ: ನಗರದ ಮುಸಲ್ಮಾನ ಸಮುದಾಯದ ಪ್ರಾತಿನಿಧಿಕ ಸಂಸ್ಥೆಯಾದ ಅಂಜುಮನ್-ಇ- ಇಸ್ಲಾಂ ಸಂಸ್ಥೆಯ ಆಡಳಿತ ಚುಕ್ಕಾಣಿ ಮತ್ತೆ ಮಾಜಿ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಅವರ ಕೈ ಸೇರುವುದು ನಿಶ್ಚಿತವಾಗಿದೆ.
ಸಂಸ್ಥೆಯ ಆಡಳಿತ ಮಂಡಳಿಗೆ ಇದೇ ದಿ. 28-1-2024 ರಂದು ಚುನಾವಣೆ ನಡೆಯಬೇಕಿತ್ತು.ಸಂಸ್ಥೆಯ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ಖಜಾಂಚಿ ಮತ್ತು ಆಡಳಿತ ಮಂಡಳಿಯ 80 ಸದಸ್ಯ ಸಹಿತ ಎಲ್ಲ ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆಗೆ ದಿ. 15 ಕೊನೆಯ ದಿನವಾಗಿತ್ತು.
ಇಂದು ದಿ. 16 ರಂದು ನಾಮ ಪತ್ರಗಳ ಪರಿಶೀಲನೆ ನಡೆಯುತ್ತಿದ್ದು, ನಾಳೆ ದಿ.17 ರಂದು ನಾಮಪತ್ರ ಹಿಂತೆಗೆಯಲು ಅಂತಿಮ ದಿನವಾಗಿದೆ.
ಅಧ್ಯಕ್ಷ ಸ್ಥಾನಕ್ಕೆ ಯುವ ಮುಖಂಡ ಇಸ್ಮಾಯಿಲ್ ತಮಟಗಾರ ನಾಮಪತ್ರ ಸಲ್ಲಿಸಿದ್ದು, ನಿಕಟಪೂರ್ವ ಕಾರ್ಯದರ್ಶಿ ನಜೀರ ಮನಿಯಾರ ಕೂಡ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಸಿರುವ ನಜೀರ ಮನಿಯಾರ ಕೂಡ ತಮಟಗಾರ ಆಪ್ತ ವಲಯದವರು. ಹೀಗಾಗಿ ನಾಳೆ ಮನಿಯಾರ ಅವರು ತಮ್ಮ ನಾಮಪತ್ರ
ಹಿಂಪಡೆಯುವುದಂತೂ ಖಾತ್ರಿ. ಈ ಕಾರಣದಿಂದ ಇಸ್ಮಾಯಿಲ್ ಅವಿರೋಧವಾಗಿ ಆಯ್ಕೆ ಆಗುವುದು ನಿಶ್ಚಿತವಾಗಿದೆ.
ತಮಟಗಾರ ನಾಳೆ ಅವಿರೋಧವಾಗಿ ಆಯ್ಕೆಯಾದರೆ ಸುಮಾರು ಮೂರು ದಶಕಗಳ ಮೇಲೆ ದಾಸನಕೊಪ್ಪ ನಂತರ ಪ್ರಥಮ ಬಾರಿಗೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದವರೆಂಬ ಗೌರವಕ್ಕೆ ಪಾತ್ರರಾಗಲಿದ್ದಾರೆ. ಇದೇ ರೀತಿ ಇನ್ನಿತರ ಸ್ಥಾನಗಳಿಗೂ ಅವಿರೋಧವಾಗಿ ಆಯ್ಕೆಯಾಗುವ ಎಲ್ಲ ಸಾಧ್ಯತೆಗಳಿವೆ.
ಒಟ್ಟಾರೆಯಾಗಿ ನಗರದ ಮುಸ್ಲಿಂ ಸಮುದಾಯದ ಸಂಸ್ಥೆಯ ಚುನಾವಣೆಯು ಅತ್ಯಂತ ಸರಳ ಮತ್ತು ಅವಿರೋಧವಾಗಿ ನಡೆದರೆ ಸಮಾಜದ ಗೌರವ ಮತ್ತು ಒಗ್ಗಟ್ಟು ಮತ್ತಷ್ಟು ಹೆಚ್ಚಲಿದೆ. ಈ ದಿಸೆಯಲ್ಲಿ ತಮ್ಮ ಪ್ರಾಮಾಣಿಕ ಪ್ರಯತ್ನ ನಡೆಸಿದ ಇಸ್ಮಾಯಿಲ್ ತಮಟಗಾರ ಮತ್ತವರ ತಂಡಕ್ಕೆ ಸಮಾಜದ ಬೆಂಬಲದ ಜೊತೆಗೆ ಹಾರೈಕೆ ಸಹ ಲಭಿಸಲಿದೆ.