3 ದಶಕಗಳ ನಂತರ ಅಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ
ಪದಾಧಿಕಾರಿಗಳು ಸೇರಿ 88 ಸದಸ್ಯರೂ ಅವಿರೋಧ ಆಯ್ಕೆ
ಸಂಸ್ಥೆಯ ಚುನಾವಣೆಯಲ್ಲಿ ಒಗ್ಗಟ್ಟು ಪದರ್ಶಿಸಿದ ಮುಸ್ಲಿಂ ಸಮುದಾಯ
ಧಾರವಾಡ: ನಗರದ ಮುಸ್ಲಿಂ ಸಮುದಾಯದ ಪ್ರತಿಷ್ಠಿತ ಪ್ರಾತಿನಿಧಿಕ ಸಂಸ್ಥೆಯಾಗಿರುವ ಅಂಜುಮನ್-ಇ-ಇಸ್ಲಾಂ ಸಂಸ್ಥೆಯ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಯುವ ಮುಖಂಡ ಇಸ್ಮಾಯಿಲ್ ತಮಟಗಾರ ಅವರ ತಂಡ ಅವಿರೋಧವಾಗಿ ಆಯ್ಕೆಗೊಂಡಿತು.
ಸಂಸ್ಥೆಯ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ಖಜಾಂಚಿ ಮತ್ತು ಆಡಳಿತ ಮಂಡಳಿಯ 88 ಸದಸ್ಯ ಸ್ಥಾನಗಳಿಗೆ ಜ. 28 ರಂದು ಚುನಾವಣೆ ನಡೆಯಬೇಕಿತ್ತು. ವೇಳಾಪಟ್ಟಿಯ ಪ್ರಕಾರ ಬುಧವಾರ (ಜ. 17) ನಾಮಪತ್ರ ಹಿಂಪಡೆಯಲು ಕೊನೆ ದಿನವಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಇಸ್ಮಾಯಿಲ್ ತಮಟಗಾರ ಮತ್ತು ನಿಕಟಪೂರ್ವ ಕಾರ್ಯದರ್ಶಿ ನಜೀರ ಮನಿಯಾರ ನಾಮಪತ್ರ ಸಲ್ಲಿಸಿದ್ದರು. ಆದರೆ, ಇಂದು ಮನಿಯಾರ ತಮ್ಮ ನಾಮಪತ್ರ ಹಿಂಪಡೆಯುವ ಮೂಲಕ ತಮಟಗಾರ ಅವಿರೋಧ ಆಯ್ಕೆಯ ಹಾದಿಯನ್ನು ಸುಗಮಗೊಳಿಸಿದರು.
ಉಪಾಧ್ಯಕ್ಷ ಸ್ಥಾನದ ಬಶೀರ ಅಹ್ಮದ ಜಾಗೀರದಾರ, ಕಾರ್ಯದರ್ಶಿ ಸ್ಥಾನದ ಡಾ.ಎಸ್.ಎ.ಸರಗಿರೋ, ಜಂಟಿ ಕಾರ್ಯದರ್ಶಿ ಸ್ಥಾನದ ಮಹಮ್ಮದ್ ಶಫಿ ಕಳ್ಳಿಮನಿ, ಖಜಾಂಚಿ ಸ್ಥಾನದ ರಫೀಕ ಅಹ್ಮದ ಶಿರಹಟ್ಟಿ ಅವಿರೋಧ ಆಯ್ಕೆಯಾದರು.
ತಮಟಗಾರ ದಾಖಲೆ :

ಅಂಜುಮನ್ ಸಂಸ್ಥೆಗೆ ಅಧ್ಯಕ್ಷರಾಗಿ ಸುಮಾರು ಮೂರು ದಶಕಗಳ (ದಾಸನಕೊಪ್ಪ) ನಂತರ ಅವಿರೋಧವಾಗಿ ಆಯ್ಕೆಯಾದವರೆಂಬ ಗೌರವಕ್ಕೆ ಇಸ್ಮಾಯಿಲ್ ತಮಾಟಗಾರ ಪಾತ್ರರಾಗಿದ್ದಾರೆ. ಈ ಗೆಲುವಿನ ಮೂಲಕ ಇಸ್ಮಾಯಿಲ್ ಮತ್ತೆ ಸಮುದಾಯದ ಸಂಸ್ಥೆಯ ಗದ್ದುಗೆ ಏರಿದಂತಾಗಿದೆ. ಇತರ ಸ್ಥಾನಗಳಿಗೂ ಸ್ಪರ್ಧಿಸಿರುವ ತಮಟಗಾರ ಗುಂಪಿನವರು ಅವಿರೋಧವಾಗಿ ಆಯ್ಕೆಯಾಗಿದ್ದು, ಮುಸ್ಲಿಂ ಸಮುದಾಯ ಒಗ್ಗಟ್ಟಿನ ಸಂದೇಶ ರವಾನಿಸಿದೆ.