ಹುಬ್ಬಳ್ಳಿ-ಧಾರವಾಡ ಸುದ್ದಿ

ಅಂಜುಮನ್ ಚುನಾವಣೆಗೆ ಸಿದ್ಧವಾಗುತ್ತಿದೆ ಅಖಾಡ!

ಮತ್ತೆ ಮೂರು ತಂಡಗಳ ತೀವ್ರ ಪೈಪೋಟಿ ಸಾಧ್ಯತೆ

ಹುಬ್ಬಳ್ಳಿ: ವಾಣಿಜ್ಯ ರಾಜಧಾನಿಯ ಮಸ್ಲಿಂ ಸಮುದಾಯದ ಪ್ರಾತಿನಿಧಿಕ ಸಂಸ್ಥೆ ಅಂಜುಮನ್ ಇಸ್ಲಾಂಗೆ ಚುನಾವಣೆ ದಿನಗಣನೆ ಆರಂಭವಾಗಿದ್ದು ಈ ಬಾರಿ ಮತ್ತೆ ಮೂರು ತಂಡಗಳ ಅಥವಾ ನಾಲ್ಕು ತಂಡಗಳ ಪೈಪೋಟಿ ನಿಶ್ಚಿತ ಎನ್ನಲಾಗುತ್ತಿದೆ.
ಈಗಾಗಲೇ ವಕ್ಪ ಮಂಡಳಿಗೆ ಸುಪ್ರೀಂ ಕೋರ್ಟ ಡಿಸೆಂಬರ್ ನಾಲ್ಕರೊಳಗೆ ಚುನಾವಣೆ ನಡೆಸುವಂತೆ ನಿರ್ದೇಶನ ನೀಡಿದ್ದರೂ ಇನ್ನೂ ಚುನಾವಣಾಧಿಕಾರಿ ನೇಮಕ ಸಹಿತ ಯಾವುದೇ ಪ್ರಕ್ರಿಯೆ ಆರಂಭಗೊಂಡಿಲ್ಲವಾಗಿದ್ದು, ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳ್ಳಬಹುದು ಎಂದು ಹೇಳಲಾಗುತ್ತಿದೆ.


ಈಗಾಗಲೇ 11901 ಅರ್ಹ ಮತದಾರರ ಪಟ್ಟಿಯನ್ನು ಸಹ ಹಾಲಿ ಆಡಳಿತ ಮಂಡಳಿ ನೀಡಿದೆ.ಕಳೆದ ಬಾರಿ 11513 ಸದಸ್ಯರು ಮತಾಧಿಕಾರ ಹೊಂದಿದ್ದರು.
2019ರ ಜೂನ್‌ನಲ್ಲಿ ನಡೆದ ಚುನಾವಣೆಯಲ್ಲಿ ಮೂರು ಬಣಗಳ ಮಧ್ಯೆ ಜಿದ್ದಾಜಿದ್ದಿ ನಡೆದು ಅಂತಿಮವಾಗಿ ಮಹ್ಮದ ಯೂಸೂಪ್ ಸವಣೂರ ನೇತೃತ್ವದಲ್ಲಿ ಅಲ್ತಾಫ್ ಕಿತ್ತೂರ, ಅಲ್ತಾಫ್ ಹಳ್ಳೂರ ಮುಂತಾದವರನ್ನೊಳಗೊಂಡ ಗುಂಪು ಗೆಲುವು ಸಾಧಿಸಿತ್ತು.
ಈ ಬಾರಿಯೂ ಸಹ ಸವಣೂರ ಗುಂಪು ಪೂರ್ಣ ಪ್ರಮಾಣದಲ್ಲಿ ಮತ್ತೆ ಕಣಕ್ಕಿಳಿಯಲಿದ್ದು ಕೆಲ ಬದಲಾವಣೆಯಾಗುವ ಸಾಧ್ಯತೆ ನಿಚ್ಛಳವಾಗಿದೆ.


ಅನಾರೋಗ್ಯದಿಂದ ಬಳಲುತ್ತಿರುವ ಮಾಜಿ ಸಚಿವ ಜಬ್ಬಾರ ಖಾನ ಹೊನ್ನಳ್ಳಿ ಇತ್ತೀಚೆಗೆ ನಿಧನರಾಗಿದ್ದು ಅವರ ಬೆಂಬಲಿತ ಗುಂಪು ವಹಾಬ್ ಮುಲ್ಲಾ ನೇತೃತ್ವದಲ್ಲಿ ಅಖಾಡಕ್ಕೆ ಧುಮುಕುವುದು ನಿಶ್ಚಿತವಾಗಿದ್ದುಇದರಲ್ಲಿ ಉದ್ಯಮಿ ಅಶ್ರಫ್ ಅಲಿ ಅವರ ಪಾತ್ರ ನಿರ್ಣಾಯಕವಾಗಿದ್ದು ಈಗಾಗಲೇ ಕೆಲ ಆಂತರಿಕ ಸಭೆಗಳು ನಡೆದಿವೆ ಎನ್ನಲಾಗಿದೆ.ಹೊನ್ನಳಿಯವರ ನಿಕಟವರ್ತಿಗಳು ಅನೇಕರು ಕಣಕ್ಕೆ ಇಳಿಯುವ ಸಾಧ್ಯತೆಗಳಿವೆ.
ಕಳೆದ ಬಾರಿ ಕಣಕ್ಕಿಳಿದಿದ್ದ ಹುಡಾ ಮಾಜಿ ಅಧ್ಯಕ್ಷ ಅನ್ವರ ಮುಧೋಳ ಈ ಬಾರಿ ಪ್ರತ್ಯೇಕವಾಗಿ ಕಣಕ್ಕಿಳಿಯುವುರೋ ಅಥವಾ ಬೇರೆ ಬಣದೊಂದಿಗೆ ಕೈ ಜೋಡಿಸುವರೋ ಎಂಬುದು ನಿಗೂಢವಾಗಿದೆ.


ಹಿರಿಯ ಮುಖಂಡ ಮಜಹರಖಾನ ಬಣ ಸಹ ಈ ಬಾರಿ ಅಂಜುಮನ್ ಕೈವಶಕ್ಕೆ ತುರುಸಿನ ಪೈಪೋಟಿ ನೀಡುವ ಸಾಧ್ಯತೆಗಳಿದ್ದು ಈಗಾಗಲೇ ಸಿದ್ದತೆಗಳನ್ನು ಆರಂಭಿಸಿದ್ದು ಕೆಲ ‘ಪ್ರಭಾವಿ’ ಮುಖಂಡರು ಅವರನ್ನೇ ಬೆಂಬಲಿಸುವ ಸಾಧ್ಯತೆಗಳಿವೆ.
2019ರ ಮೊದಲು ಹೊನ್ನಳ್ಳಿ ಗುಂಪಿನಲ್ಲಿದ್ದ ಕರ‍್ಯದರ್ಶಿ ಅಲ್ತಾಫ್ ಹಳ್ಳೂರ ಕಳೆದ ಬಾರಿ ಸವಣೂರ ಗುಂಪಿನಲ್ಲಿ ಸೇರ್ಪಡೆಯಾಗಿ ಅವರ ಸೋದರ ಬಶೀರ ಗೌ.ಕಾರ್ಯದರ್ಶಿಯಾಗಿದ್ದರು. ಈ ಬಾರಿಯೂ ಅಲ್ಲಿಯೇ ಮುಂದುವರಿಯುವರೋ ಎಂಬುದು ಕುತೂಹಲ ಕೆರಳಿಸಿದ್ದು, ಹೊಸ ತಂಡ ಕಟ್ಟುವರೆಂಬ ಗುಸು ಗುಸು ಸಹ ಕೇಳಿ ಬರಲಾರಂಭಿಸಿದೆ.


ಅವಿರೋಧ ಆಯ್ಕೆ ಸಾಧ್ಯತೆ ಕ್ಷೀಣವಾಗಿದ್ದು ಎರಡು ಬಣಗಳ ಅಥವಾ ಮೂರು ಬಣಗಳ ನಿಶ್ಚಿತ ಎನ್ನಲಾಗಿದೆ. ಈ ಬಾರಿ 11901 ಸದಸ್ಯರು ಮತ ಚಲಾಯಿಸುವ ಅಧಿಕಾರ ಹೊಂದಿದ್ದು ಕಳೆದ ಬಾರಿಗಿಂತ 388 ಹೆಚ್ಚಿನ ಮತದಾರರು ಅಧ್ಯಕ್ಷ, ಉಪಾಧ್ಯಕ್ಷ, ಪ್ರಧಾನ ಕರ‍್ಯದರ್ಶಿ, ಜಂಟಿ ಕಾರ್ಯದರ್ಶಿ, ಖಜಾಂಜಿ, ಶಿಕ್ಷಣ ಮಂಡಳಿ, ಆಸ್ಪತ್ರೆ ಮಂಡಳಿ, ಪೋಷಕ ಸದಸ್ಯರು,ಆಡಳಿತ ಮಂಡಳಿ ಸೇರಿದಂತೆ 52 ಜನರ ಆಯ್ಕೆ ಮಾಡಲಿದ್ದಾರೆ. ಚುನಾವಣಾ ಅಧಿಕಾರಿ ಘೋಷಣೆಯಾದ ನಂತರ ಮತ್ತಷ್ಟು ತುರುಸು ಕಾಣಿಸಿಕೊಳ್ಳಲಿದೆ.

 

administrator

Related Articles

Leave a Reply

Your email address will not be published. Required fields are marked *