ಧಾರವಾಡ: ಹು-ಧಾ ಪಶ್ಚಿಮ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಗುರುರಾಜ್ ಹುಣಸಿಮರದ ಅವರು ಕ್ಷೇತ್ರ ಅಮರಗೋಳ, ನವನಗರ ಸೇರಿದಂತೆ ವಿವಿಧೆಡೆ ಬಿರುಸಿನ ಪ್ರಚಾರ ನಡೆಸಿ ಮತಯಾಚಿಸಿದರು.
ಪ್ರಚಾರದ ವೇಳೆ ಮಾತನಾಡಿದ ಅವರು, ಶಾಸಕ ಅರವಿಂದ ಬೆಲ್ಲದ ಕಳೆದ ಹತ್ತು ವರ್ಷದಲ್ಲಿ ಧಾರವಾಡಕ್ಕೆ ನೀಡಿದ ಕೊಡುಗೆ ಏನು ಎಂದು ಪ್ರಶ್ನಿಸಿದ ಅವರು, ಹತ್ತು ವರ್ಷಗಳಲ್ಲಿ ಸಾಕಷ್ಟು ಅಭಿವೃದ್ದಿ ಹೊಂದಬೇಕಿದ್ದ ಪಶ್ಚಿಮ ಕ್ಷೇತ್ರವು ನಿರ್ಲಕ್ಷ್ಯಕ್ಕೆ ಒಳಗಾಗಿ ನಿರೀಕ್ಷಿತ ಮಟ್ಟದ ಅಭಿವೃದ್ಧಿ ಹೊಂದಿಲ್ಲ. ಚುನಾವಣೆ ಹಿನ್ನೆಲೆ ಸುಳ್ಳು ಹೇಳುವ ಮೂಲಕ ಜನರ ದಾರಿ ತಪ್ಪಿಸುತ್ತಿದ್ದಾರೆಂದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಆರು ತಿಂಗಳಲ್ಲೇ ಪ್ರತ್ಯೇಕ ಪಾಲಿಕೆ ಘೋಷಣೆ ಮಾಡುವುದಾಗಿ ಹೇಳಿರುವುದು ಅತ್ಯಂತ ನಾಚಿಗೇಡು ಎಂದರಲ್ಲದೇ ಐಐಟಿ, ಐಐಐಟಿ, ಲಲಿತ ಕಲಾ ಅಕಾಡೆಮಿ, ವಿಜ್ಞಾನ ಕೇಂದ್ರಗಳು ಸಾರ್ವಜನಿಕರ ಹೋರಾಟ ಫಲವೇ ವಿನಃ ಬೆಲ್ಲದ ಅವರ ಶ್ರಮದ ಫಲ ಅಲ್ಲ. ಆದರೂ ತಾವೇ ತಂದಿರುವುದಾಗಿ ಜನರಿಗೆ ತಪ್ಪು ಸಂದೇಶ ನೀಡುತ್ತಿದ್ದಾರೆ ಎಂದು ದೂರಿದರು.
ಈ ಸಂದರ್ಭದಲ್ಲಿ ಮಾಜಿ ಎಪಿಎಂಸಿ ಅಧ್ಯಕ್ಷರ ಈಶ್ವರ್ ಬಿ ಕಿತ್ತೂರ್, ಭೀಮರಾಯ ಗುಡೇನಕಟ್ಟಿ, ಈಶ್ವರಗೌಡ ಪಾಟೀಲ್, ಇಮಾಮ್ ಸಾಬ್ ದರ್ಗಾದ, ಶಿವಾನಂದ ಇಟ್ನಾಳ್, ವಸಂತ್ ಬಿಳಿಯಲಿ ಇನ್ನಿತರರಿದ್ದರು.