ಧಾರವಾಡ : ತಾಲ್ಲೂಕಿನ ಗರಗ ಗ್ರಾಮದ ಶ್ರೀ ಮಡಿವಾಳೇಶ್ವರ ಮಠದ ಟ್ರಸ್ಟ್ ವಿರುದ್ಧ ಮಠದ ಉತ್ತರಾಧಿಕಾರಿ ಶ್ರೀ ಪ್ರಶಾಂತ ದೇವರು ಇದೀಗ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಕಳೆದ ದಿ.1 ರಂದು ಗರಗ ಮಡಿವಾಳೇಶ್ವರ ಮಠದ ಹಾಲಿ ಉತ್ತರಾಧಿಕಾರಿ ಶ್ರೀ ಪ್ರಶಾಂತ ದೇವರು ಧಾರವಾಡದ ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದ ಮೊರೆ ಹೋಗಿದ್ದರು.
ತಾವು ಮಠದ ಉತ್ತರಾಧಿಕಾರಿ ಆಗಿದ್ದು, ತಮ್ಮನ್ನು ಉತ್ತರಾಧಿಕಾರಿ ಅಂತ ಪರಿಗಣಿಸಬೇಕು. ಮತ್ತು ಸಂಭೋಧಿಸಬೇಕು. ತಮ್ಮ ಕಾರ್ಯನಿರ್ವಹಣೆಗೆ ಯಾವುದೇ ರೀತಿಯ ಅಡಚಣೆ ಮಾಡದಂತೆ ಟ್ರಸ್ಟ್ ಪದಾಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಮನವಿ ಮಾಡಿದ್ದರು. ಈ ಮನವಿಯನ್ನು ಜೂನ್ 5 ರಂದು ವಿಚಾರಣೆ ನಡೆಸಿದ ನ್ಯಾಯಾಧೀಶರು, ಸ್ವಾಮೀಜಿಯವರ ಮನವಿಯನ್ನು ಪುರಸ್ಕರಿಸಿದೆ.
ಟ್ರಸ್ಟ್ ನ ಅಶೋಕ ದೇಸಾಯಿ ಸೇರಿದಂತೆ ೧೮ ಜನರು, ಶ್ರೀ ಪ್ರಶಾಂತ ದೇವರು ಅವರನ್ನೇ ಉತ್ತರಾಧಿಕಾರಿ ಎಂದೇ ಪರಿಗಣಿಸಬೇಕು. ಯಾವುದೇ ರೀತಿಯ ತಾರತಮ್ಯ ಮಾಡಬಾರದು ಎಂದು ಸೂಚಿಸಿದೆ.
ಮುಂದಿನ ವಿಚಾರಣೆಯನ್ನು ಜೂನ್ ೨೯ ಕ್ಕೆ ನ್ಯಾಯಾಲಯವು ಮುಂದೂಡಿದೆ. ಈ ಸಂಬಂದ ಎಲ್ಲರಿಗೂ ಸಮನ್ಸ್ ಕೂಡ ನೀಡಲಾಗಿದೆ. ಈ ಬೆಳವಣಿಗೆಯಿಂದ ಶ್ರೀ ಮಡಿವಾಳೇಶ್ವರ ಮಠದ ಉತ್ತರಾಧಿಕಾರಿ ವಿಷಯ ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದೆ. ಮಠದ ಉತ್ತರಾಧಿಕಾರಿ ಬದಲಾಯಿಸುವ ಪ್ರಯತ್ನ ನಡೆದಿತ್ತಾ ಎನ್ನುವ ಪ್ರಶ್ನೆ ಈಗ ಉದ್ಭವಿಸಿದೆ. ಹೀಗಾಗಿ ಸ್ವಾಮೀಜಿ ಮತ್ತು ಟ್ರಸ್ಟ್ ನಡುವಿನ ಈ ತಿಕ್ಕಾಟ ಹಂತಕ್ಕೆ ತಲುಪುವುದೋ ಎಂಬುದು ಮಠದ ಭಕ್ತರಲ್ಲಿ ಕಳವಳ ಮೂಡಿಸಿದೆ.