ಹುಬ್ಬಳ್ಳಿ: ಭಾರತದಲ್ಲಿ 7 ಮಿನರಲ್ ವಾಟರ್ ಪೂರೈಕೆ ಮಾಡುವ ಏಕೈಕ ಸಂಸ್ಥೆ ‘ಓಂಕಾರ’. ಒಂದು ಲೀಟರ್ ನೀರು ಹೊರಬರಲು, 2 ಲೀಟರ್ ನೀರು ರಿಚಾರ್ಜ್ ಮಾಡಲಾಗುತ್ತಿದೆ. ನೀರಿನ ಬಗ್ಗೆ ಕಾಳಜಿ ವಹಿಸಲಾಗುತ್ತಿದೆ ಎಂದು ಸಂಕೇಶ್ವರ ವೆಂಚರ್ಸ್ (ಇಂಡಿಯಾ) ಪ್ರೈ.ಲಿ.ನ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಸಂಕೇಶ್ವರ ಅವರು ಹೇಳಿದರು.
‘ನೀರು ಉಳಿಸಿ, ಭೂಮಿ ಸಂರಕ್ಷಿಸಿ’ ಅಭಿಯಾನದಡಿ ಸಂಕೇಶ್ವರ ವೆಂಚರ್ಸ್ (ಇಂಡಿಯಾ) ಪ್ರೈ.ಲಿ., ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಪರಿವಾರ, ಯಂಗ್ ಇಂಡಿಯಾ, ಹುಬ್ಬಳ್ಳಿ ಬೈಸಿಕಲ್ ಕ್ಲಬ್, ಇನ್ನರ್ವೀಲ್ ಮಹಿಳಾ ಕ್ಲಬ್, 99 ಕೆನ್ನಾಸ್ ಮೋಟರ್ ಸೈಕಲ್ ಕ್ಲಬ್, 98.3 ಎಫ್ಎಂ (ರೇಡಿಯೋ ಮಿರ್ಚಿ) ಸಹಭಾಗಿತ್ವದಲ್ಲಿ ರವಿವಾರ ಆಯೋಜಿಸಿದ್ದ ಜಲಸಂರಕ್ಷಣೆಗಾಗಿ ಜಾಗೃತಿ ರ್ಯಾಲಿಯಲ್ಲಿ ಅವರು ಮಾತನಾಡಿದರು.
ನಮ್ಮ ಭೂಮಿಯಲ್ಲಿ ಶೇ. 3ರಷ್ಟು ಮಾತ್ರ ಕುಡಿಯುವ ನೀರು ಇದೆ. ನೀರು ಪೋಲು ಮಾಡಬಾರದು. ಮುಂದಿನ ಜನಾಂಗಕ್ಕೆ ನಾವು ನೀರು ಉಳಿಸಿ ಕೊಡಬೇಕು. ಪ್ರತಿಯೊಬ್ಬರೂ ನೀರಿನ ಬಗ್ಗೆ ಜಾಗೃತಿ ವಹಿಸುವ ಅಗತ್ಯವಿದೆ ಎಂದರು.
ಹು-ಧಾ ಮಹಾನಗರ ಪಾಲಿಕೆ ಉಪ ಆಯುಕ್ತ ಮಾಧವರಾವ್ ಗಿತ್ತೆ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಮಾತನಾಡಿ, ನೀರನ್ನು ಹಿತವಾಗಿ ಮಿತವಾಗಿ ಬಳಸಬೇಕು. ನೀರು ನಮ್ಮ ಬದುಕಿನ ಅವಿಭಾಜ್ಯ ಅಂಗ. ಜಲಮೂಲಗಳನ್ನು ಸಂರಕ್ಷಿಸಲು ಇನ್ನಷ್ಟು ಜಾಗೃತಿ ವಹಿಸುವ ಅಗತ್ಯವಿದೆ ಎಂದರು.
ರೋಟರಿ ಪರಿವಾರದ ಇವೆಂಟ್ ಚೇರ್ಮನ್ ವಿಜಯ ಹಟ್ಟಿಹೊಳಿ, ಅನೀಸ್ ಖೋಜೆ, ಕೌಸ್ತುಭ ಸಂಶೀಕರ, ಶಂಕರ ಹಿರೇಮಠ, ರಾಜೇಶ ತೋಳನವರ, ಗುರು ಕಲ್ಮಠ, ಸಂಜೀವ ಭಾಟಿಯಾ, ಇಮಾಮ್ ಕೋಳೂರು, ಗುರುಮೂರ್ತಿ, ಡಾ. ನಾಗೇಶ ನಾಯಕ, ಆರ್ಜೆ ಶಾರೂಖ್ ಇತರರು ಇದ್ದರು.
ನಗರದ ತೋಳನಕೆರೆಯಿಂದ ಸೈಕಲ್ ರ್ಯಾಲಿ ಜರುಗಿತಲ್ಲದೇ, ಆಟೋಗಳ ಮೂಲಕವೂ ಜಾಗೃತಿ ಮೂಡಿಸ ಲಾಯಿತು.