15ಕ್ಕೆ 9 ಕಿ.ಮೀ. ಉದ್ದದ ’ತಿರಂಗಾ’ ಜಾಥಾ
ಕಲಘಟಗಿ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಸಂತೋಷ ಲಾಡ್ ಫೌಂಡೇಷನ್ ವತಿಯಿಂದ ಕಲಘಟಗಿ ಪಟ್ಟಣದಲ್ಲಿ 9 ಕಿ.ಮೀ. ಉದ್ದದ ತ್ರಿವರ್ಣ ಧ್ವಜ ಜಾಥಾವನ್ನು ಆಗಸ್ಟ್ 15ರಂದು ಹಮ್ಮಿಕೂಳ್ಳಲಾಗಿದೆ ಎಂದು ಮಾಜಿ ಶಾಸಕ ಸಂತೋಷ್ ಲಾಡ್ ತಿಳಿಸಿದರು.
ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 9-30 ಕ್ಕೆ ಪಟ್ಟಣದ ಹೊರವಲಯದ ಧಾರವಾಡ ಕ್ರಾಸ್‌ನಿಂದ ಜಾಥಾ ಪ್ರಾರಂಭಗೊಂಡು ತಾಲ್ಲೂಕಿನ ದೇವಿಕೊಪ್ಪ ಹತ್ತಿರದ ಗಳಗಿನಕಟ್ಟಿ ಕ್ರಾಸ್ ವರೆಗೂ ರಾಷ್ಟ್ರೀಯ ಹೆದ್ದಾರಿ 63 ಹುಬ್ಬಳ್ಳಿ-ಕಾರವಾರ ರಸ್ತೆ ಮೂಲಕ ಸಾಗಲಿದೆ ಎಂದರು.
ತ್ರಿವರ್ಣ ಧ್ವಜ ಕಾರ್ಯಕ್ರಮದಲ್ಲಿ 10 ಸಾವಿರ ಹೆಣ್ಣು ಮಕ್ಕಳಿಂದ ಪೂರ್ಣ ಕುಂಭ ಮೇಳ ಜರುಗುತ್ತದೆ. 1 ಲಕ್ಷ ಜನರಿಗೆ ಊಟ ಹಾಗೂ ಉಪಾಹಾರ 2,500 ವಾಹನ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. 6 ವೇದಿಕೆಗಳಲ್ಲಿ ನೃತ್ಯ ಮತ್ತು ದೇಶ ಭಕ್ತಿಗೀತೆಗಳು ಕಾರ್ಯಕ್ರಮ ನಡೆಯ ಲಿದ್ದು 1,000 ಸ್ಥಳೀಯರಿಗೆ ಸನ್ಮಾನ ಸೇರಿದಂತೆ ಭಾರತ ಮಾತೆಗೆ ಗೌರವ ನಮನಗಳು ಸಲ್ಲಿಸಲಾಗುವುದು. ಸ್ವಾತಂತ್ರ್ಯೋತ್ಸವದ ಅಂಗವಾಗಿ ಕ್ಷೇತ್ರದಲ್ಲಿ 75 ಕಿ.ಮೀ. ಪಾದಯಾತ್ರೆ ಮೂಲಕ ಗ್ರಾಮಗಳಲ್ಲಿ ಜಾಗೃತಿ ಮೂಡಿಸ ಲಾಗುತ್ತಿದೆ ಎಂದರು.
ಜಿ.ಪಂ.ಮಾಜಿ ಅಧ್ಯಕ್ಷ ಎಸ್.ಆರ್. ಪಾಟೀಲ, ಮಂಜುನಾಥ ಮುರಳ್ಳಿ, ನರೇಶ ಮಲೆನಾಡು, ಆನಂದ ಕಲಾಲ, ಗಂಗಾಧರ ಚಿಕ್ಕಮಠ, ಲಿಂಗರಡ್ಡಿ ನಡುವಿನಮನಿ, ಹರಿಶಂಕರ್ ಮಠದ, ಸೋಮಶೇಖರ ಬೆನ್ನೂರ, ರಾಮನಗೌಡ ಪಾಟೀಲ, ಕಲ್ಲಯ್ಯ ಹಿರೇಮಠ, ಸುಧೀರ್ ಬೋಳಾರ, ನಿಂಗಯ್ಯ ಕುರ್ಡಿಕೇರಿ, ಸಿದ್ದು ತಲೆಬಾಗಿಲು, ಬಾಳು ಖಾನಾಪೂರ, ಬಾಬು ಅಂಚಟಗೇರಿ, ಬೋಜಪ್ಪ ಲಮಾಣಿ ಇದ್ದರು.