ಹುಬ್ಬಳ್ಳಿ-ಧಾರವಾಡ ಸುದ್ದಿ

ನಾಳೆ ಹುಬ್ಬಳ್ಳಿ ’ಜಗ್ಗಲಗಿ’ ಹಬ್ಬ

ಹುಬ್ಬಳ್ಳಿ: ಭಾರತೀಯರ ಸಾಂಪ್ರದಾಯಿಕ ಮತ್ತು ಧಾರ್ಮಿಕ ಹಬ್ಬಗಳ ಲ್ಲೊಂದಾದ “ಹೋಳಿ ಹಬ್ಬದ ಪ್ರಯುಕ್ತ ಜರುಗುವ ಹುಬ್ಬಳ್ಳಿ ಜಗ್ಗಲಗಿ ಹಬ್ಬನ್ನು ಮಾ.೨೦ರಂದು ಮಧ್ಯಾಹ್ನ ೩ ಘಂಟೆಗೆ ನಗರದ ಮೂರುಸಾವಿರ ಮಠದ ಮೈದಾನದಿಂದ ಆಯೋಜನೆ ಮಾಡಲಾಗಿದೆ ಎಂದು ಸಚಿವ ಶಂಕರಪಾಟೀಲ ಮುನೇನಕೊಪ್ಪ ಹೇಳಿದರು.
ಅವರು ನಗರದ ಮೂರುಸಾವಿರಮಠದಲ್ಲಿಂದು ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಕ್ರಮದ ಸಾನಿಧ್ಯವನ್ನು ಜಗದ್ಗುರು ಡಾ. ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ವಹಿಸಲಿದ್ದಾರೆ. ವಿವಿಧ ಮಠಾಧೀಶರು, ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನೇತೃತ್ವವನ್ನು ಹಬ್ಬದ ಆಯೋಜಕ ಮಹೇಶ ಟೆಂಗಿನಕಾಯಿ ವಹಿಸಲಿದ್ದಾರೆ ಎಂದರು.
ಪಾಶ್ಚಿಮಾತ್ಯ ಸಂಸ್ಕೃತಿ ಮತ್ತು ಸಂಗೀತಕ್ಕೆ ತಲೆದೂಗಿಸುತ್ತಿದ್ದ ಯುವ ಜನತೆಗೆ ಭಾರತೀಯ ಸಂಸ್ಕೃತಿ, ಪರಂಪರೆ, ಜಾನಪದ ಶ್ರೀಮಂತಗೊಳಿಸುವ ದೃಷ್ಠಿಯಿಂದ ಆಯೋಜಿಸಲಾದ ಹುಬ್ಬಳ್ಳಿ ಜಗ್ಗಲಗಿ ಹಬ್ಬವು ಮಹಾನಗರದ ಜನತೆಗೆ ಹರ್ಷವನ್ನುಂಟು ಮಾಡಲಿದೆ. ಹಬ್ಬದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ವಿನಂತಿಸಿದರು.


ಪ್ರಸಕ್ತ ವರ್ಷದ ಹುಬ್ಬಳ್ಳಿ ಜಗ್ಗಲಗಿ ಹಬ್ಬದ ಮೆರವಣಿಗೆಯು ನೂರಾರು ಜಗ್ಗಲಗಿ ಮತ್ತು ವಿವಿಧ ಚರ್ಮವಾದ್ಯಗಳ ಇಂಪಾದ ನಾದದೊಂದಿಗೆ, ಜಾನಪದ ಕಲಾವಿದರ ಸಾರಥ್ಯದಲ್ಲಿ ಮೂರುಸಾವಿರ ಮಠದ ಮೈದಾನದಿಂದ ಪ್ರಾರಂಭಗೊಂಡು ವಿಕ್ಟೋರಿಯಾ ರಸ್ತೆ, ಕೊಪ್ಪಿಕರ ರಸ್ತೆ, ಬ್ರಾಡ್‌ವೇ, ದುರ್ಗದಬೈಲ ವೃತ್ತ, ರಾಧಾಕೃಷ್ಣ ಗಲ್ಲಿ, ಬಾರದಾನಸಾಲ, ಸರಾಫಗಟ್ಟಿ, ಜವಳಿ ಸಾಲ, ಬೆಳಗಾಂವ ಗಲ್ಲಿ, ಪೆಂಡಾರ ಗಲ್ಲಿ, ತುಳಜಾಭವಾನಿ ವೃತ್ತ, ದಾಜಿಬಾನಪೇಟೆ ಮಾರ್ಗವಾಗಿ ಮೂರುಸಾವಿರ ಮಠದ ಆವರಣದಲ್ಲಿ ಮುಕ್ತಾಯಗೊಳ್ಳಲಿದೆ ಎಂದರು.
ಹುಬ್ಬಳ್ಳಿ ಜಗ್ಗಲಗಿ ಹಬ್ಬದಲ್ಲಿ ಸುಳ್ಳ, ಬ್ಯಾಹಟ್ಟಿ, ಛಬ್ಬಿ, ಸೂರಶೆಟ್ಟಿಕೊಪ್ಪ, ಭೋಗೇನಾಗರಕೊಪ್ಪ, ಪಾಳೆ, ತಾರಿಹಾಳ, ಶಿವಳ್ಳಿ, ಕಲಘಟಗಿ, ಗುಂಡೇನಟ್ಟಿ, ಶೆರೆವಾಡ, ಮರೆವಾಡ, ಬೊಮ್ಮಸಮುದ್ರ, ಅಮ್ಮಿನಬಾವಿ, ಗಂಗಾವತಿ, ಕಣವಿಹೊನ್ನಾಪುರ ಸೇರಿದಂತೆ ಸುತ್ತ-ಮುತ್ತಲಿನ ಗ್ರಾಮಗಳಿಂದ ನೂರಾರು ಜಾನಪದ ಕಲಾವಿದರು ತಮ್ಮ ತಮ್ಮ ತಂಡಗಳೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಮಹಿಳೆಯರ ಡೊಳ್ಳು ಕುಣಿತದ ತಂಡಗಳು ಭಾಗವಹಿ ಸುವವು ಎಂದು ವಿವರಿಸಿದರು.
ವಿಶೇಷವಾಗಿ ಹೋಳಿ ಹುಣ್ಣಿಮೆ ಆಚರಣೆಯ ಮಹತ್ವ ಸಾರುವ ಹಾನಗಲ್ಲನ ತಾರಕೇಶ್ವರ ಯುವಕ ಮಂಡಳದ ಬೇಡರ ದೇಹದ ತಂಡದ ಸದಸ್ಯರು ಮತ್ತು ರಾಧಾಕೃಷ್ಣ ಅಕ್ಯಾಡೆಮಿ ವತಿಯಿಂದ ವಿವಿಧ ಚರ್ಮ ವಾದ್ಯಗಳು ಜಗ್ಗಲಗಿ ಹಬ್ಬದಲ್ಲಿ ಭಾಗವಹಿಸುತ್ತವೆ. ಈ ವರ್ಷ ಬೆಂಗಳೂರಿನ ಅತ್ಯಂತ ವಿಶೇಷ ಹಾಗೂ ಪ್ರಸಿದ್ಧ ತಮಟೆ ರವಿಯವರ ಶ್ರೀ ಅಣ್ಣಮ್ಮದೇವಿ ತಮಟೆ ವಾದ್ಯ ವೃಂದದ ಕಲಾವಿದರು ಪಾಳ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಆಯೋಜಕ ಮಹೇಶ್ ಟೆಂಗಿನಕಾಯಿ, ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್, ವಿಜಯ ಶೆಟ್ಟರ್, ಶಿವು ಮೆಣಸಿನಕಾಯಿ, ಚಂದ್ರಶೇಖರ್ ಗೋಕಾಕ್, ಸುಭಾಷ್‌ಸಿಂಗ್ ಜಮಾದಾರ್, ರವಿ ನಾಯಕ್, ಸುಬ್ರಮಣ್ಯ ಶಿರಕೋಳ ಗೋಷ್ಠಿಯಲ್ಲಿ ಇದ್ದರು.

administrator

Related Articles

Leave a Reply

Your email address will not be published. Required fields are marked *