ಹುಬ್ಬಳ್ಳಿ-ಧಾರವಾಡ ಸುದ್ದಿ
ಹುಬ್ಬಳ್ಳಿಯಲ್ಲಿ ಎರಡು ದಿನ ಸಂಗೀತ ಕಲರವ

ಹುಬ್ಬಳ್ಳಿಯಲ್ಲಿ ಎರಡು ದಿನ ಸಂಗೀತ ಕಲರವ

14,15ರಂದು ಭೀಮಪಲಾಸ ಸಂಗೀತೋತ್ಸವ

ಹುಬ್ಬಳ್ಳಿ: ಸ್ಥಳೀಯ ಸವಾಯಿ ಗಂಧರ್ವ ಕಲಾಮಂದಿರದಲ್ಲಿ ದಿ.14,15ರಂದು ಭಾರತರತ್ನ ಪಂ. ಭೀಮಸೇನ ಜೋಶಿ ಅವರ ಜನ್ಮಶತಮಾನೋತ್ಸವದ ಅಂಗವಾಗಿ ಆಯೋಜನೆಗೊಂಡಿರುವ ಎರಡು ದಿನಗಳ ಭೀಮಪಲಾಸ ಸಂಗೀತೋತ್ಸವದಲ್ಲಿ ಗಾಯನ-ವಾದನಗಳ ನಿನಾದ ಹರಿಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಕ್ಷಮತಾ ಸಂಸ್ಥೆಯ ಸಂಚಾಲಕ ಗೋವಿಂದ ಜೋಶಿ ಮಾತನಾಡಿ, ಧಾರವಾಡದ ಜಿ.ಬಿ. ಜೋಶಿ ಮೆಮೊರಿಯಲ್ ಟ್ರಸ್ಟ್ ಹಾಗೂ ಹುಬ್ಬಳ್ಳಿಯ ಕ್ಷಮತಾ ಸಂಸ್ಥೆಗಳು ಜಂಟಿಯಾಗಿ ಹಮ್ಮಿಕೊಂಡಿದ್ದು, 14 ರಂದು ಸಂಜೆ 5.30ಕ್ಕೆ ಆರಂಭಗೊಳ್ಳಲಿದೆ. 15ರಂದು ರವಿವಾರ ಬೆಳಿಗ್ಗೆ 10 ರಿಂದ ಆರಂಭಗೊಂಡು ರಾತ್ರಿ 9 ಗಂಟೆವರೆಗೆ ದಿನಪೂರ್ತಿ ಜರುಗಲಿದೆ ಎಂದರು.


ಪಂ. ಗಣಪತಿ ಭಟ್ಟ ಹಾಸಣಗಿ, ಪಂ. ಜಯತೀರ್ಥ ಮೇವುಂಡಿ, ವಿದುಷಿ ಗೌರಿ ಪಠಾರೆ, ರಮಾಕಾಂತ ಗಾಯಕವಾಡ, ಆದಿತ್ಯ ಮೋಡಕ, ವಿನಾಯಕ ಹೆಗಡೆ ಅವರ ಗಾಯನ, ವಿದುಷಿ ಕಲಾ ರಾಮನಾಥ ಅವರ ವಯೋಲಿನ್, ಪಂ. ಪೂರ್ಬಯಾನ್ ಚಟರ್ಜಿ, ಮೀತಾ ನಾಗ ಅವರ ಸಿತಾರ, ವಿದ್ವಾನ್ ಯು. ರಾಜೇಶ ಅವರ ಮ್ಯಾಂಡೋಲಿನ್, ಪಂ. ಪ್ರವೀಣ ಗೋಡಖಿಂಡಿ ಹಾಗೂ ಷಡಜ್ ಗೋಡಖಿಂಡಿ ಅವರ ಕೊಳಲು ಹಾಗೂ ವಿದುಷಿ ದೇಬಸ್ಮಿತಾ ಭಟ್ಟಾಚಾರ್ಯ ಅವರ ಸರೋದ ವಾದನಗಳ ಝೇಂಕಾರ ಮೊಳಗಲಿದೆ ಎಂದರು.
ಸಹಕಲಾವಿದರಾಗಿ ಪಂ. ರಘುನಾಥ ನಾಕೋಡ, ಓಜಸ್ ಆಧಿಯಾ, ದೇಬಜಿತ ಪಟಿತುಂಡಿ, ಶ್ರೀಧರ ಮಾಂಡ್ರೆ, ಡಾ. ಉದಯ ಕುಲಕರ್ಣಿ ತಬಲಾ ಹಾಗೂ ಪಂ. ವ್ಯಾಸಮೂರ್ತಿ ಕಟ್ಟಿ, ಗುರುಪ್ರಸಾದ ಹೆಗಡೆ, ಸತೀಶ ಭಟ್ಟ ಹೆಗ್ಗಾರ ಹಾರ್ಮೋನಿಯಂ ಸಾಥ್ ವಿವಿಡ್‌ಲಿಪಿ ಸಂಸ್ಥೆಯು ಈ ಕಾರ್ಯಕ್ರಮದ ನೇರಪ್ರಸಾರವನ್ನು ಮಾಡಲಿದೆ. ಎಲ್ಲ ರಸಿಕಶ್ರೋತೃಗಳಿಗೂ ಉಚಿತ ಪ್ರವೇಶವಿದೆ ಎಂದರು.
೨೦೨೧ರ ಫೆಬ್ರುವರಿ ೭ ರಿಂದ ಇಲ್ಲಿಯವರೆಗೆ ರಾಜ್ಯದ ವಿವಿಧೆಡೆಗಳಲ್ಲಿ ’ಭೀಮಪಲಾಸ’ ಶೀರ್ಷಿಕೆ ಯಡಿ ಗಾಯನ-ವಾದನ-ನರ್ತನಗಳ ಹೊಳೆಯೇ ಹರಿದುಬಂದಿದೆ ಎಂದರು.
ಗೋಷ್ಠಿಯಲ್ಲಿ ಮುರಳೀಧರ ಮಳಗಿ, ಚಂದ್ರಶೇಖರ ಬೆಳವಾಡಿ, ಉಮೇಶ ದುಶಿ ಇದ್ದರು.

ಪಾಲ್ಗೊಳ್ಳಲಿರುವ ಕಲಾವಿದರ ವಿವರ
ವಿನಾಯಕ ಹೆಗಡೆ ಮುತ್ಮುರುಡು (ಗಾಯನ)

ಉತ್ತರ ಕನ್ನಡದ ಮುತ್ಮುರುಡುವಿನಲ್ಲಿ ಜನಿಸಿದ ವಿನಾಯಕ ಹೆಗಡೆ ನಾಡಿನ ಭರವಸೆಯ ಹಿಂದುಸ್ತಾನಿ ಗಾಯಕ. ಸಂಗೀತಪ್ರಿಯರ ಮನೆತನದಲ್ಲಿ ಜನಿಸಿದ ಇವರಿಗೆ ಬಾಲ್ಯದಿಂದಲೇ ಸಂಗೀತದತ್ತ ಒಲವು ಮೂಡಿತು. ತಂದೆ ದತ್ತಾತ್ರೇಯ ಹೆಗಡೆ ತಾಯಿ ಯಶೋಧಾ. ವಿನಾಯಕ ಅವರ ಗಾಯನ ಕಲಿಕೆಗೆ ತಂದೆಯ ಪ್ರೋತ್ಸಾಹ ವಿಶೇಷವಾಯಿತು. ಪಂ. ಶ್ರೀಪಾದ ಹೆಗಡೆ ಸೋಮನಮನೆಯವರಲ್ಲಿ ಸುಮಾರು ೬ ವರ್ಷಗಳ ಸಂಗೀತಾಧ್ಯಯನ ಮಾಡಿದರು. ನಂತರ ಕಿರಾನಾ ಘರಾಣೆಯ ಪಂ. ಜಯತೀರ್ಥ ಮೇವುಂಡಿಯವರಲ್ಲಿ ೮ ವರ್ಷಗಳ ಆಳವಾದ ಮಾರ್ಗದರ್ಶನ ಪಡೆದು ಯುವ ಗಾಯಕರಾಗಿ ಹೊರಹೊಮ್ಮಿದರು. ಕಿರಾನಾ ಘರಾಣೆಯ ವಿಶೇಷ ಗುಣಲಕ್ಷಣಗಳನ್ನು ತಮ್ಮ ಗಾಯನದಲ್ಲಿ ಅಳವಡಿಸಿಕೊಂಡರು. ಪ್ರಸ್ತುತವಾಗಿ ಪುಣೆಯ ಪಂ. ಶ್ರೀನಿವಾಸ ಭೀಮಸೇನ ಜೋಶಿಯವರಿಂದ ಹೆಚ್ಚಿನ ಅಭ್ಯಾಸ ಮಾಡುತ್ತಿದ್ದಾರೆ.
ಖಯಾಲ್, ಠುಮರಿ, ಭಜನ್, ಅಭಂಗ್, ವಚನ, ದಾಸರಪದ ಹೀಗೆ ವಿವಿಧ ಗಾಯನಶೈಲಿಗಳನ್ನು ಪ್ರಸ್ತುತಪಡಿಸುವಲ್ಲಿ ಪ್ರಬುದ್ಧತೆ ಸಾಧಿಸಿರುವ ವಿನಾಯಕ ಅವರಿಗೆ ರಾಜ್ಯ ಸಂಗೀತ ನೃತ್ಯ ಅಕಾಡೆಮಿಯ ಪ್ರತಿಭಾ ಪುರಸ್ಕಾರ, ನಿಶ್ಚಯ ಪುರಸ್ಕಾರಗಳು ಸಂದಿವೆ. ಗುಜರಾತ, ಬೆಂಗಳೂರು, ಕುಂದಗೋಳ, ಮಂತ್ರಾಲಯ, ಹುಬ್ಬಳ್ಳಿ-ಧಾರವಾಡ ಹೀಗೆ ನಾಡಿನ ವಿವಿಧೆಡೆಗಳಲ್ಲಿ ತಮ್ಮ ಸಂಗೀತಸುಧೆಯನ್ನು ಹರಿಸಿದ್ದಾರೆ.
ಸಹಕಲಾವಿದರು : ಪಂ. ರಘುನಾಥ ನಾಕೋಡ (ತಬಲಾ), ಸತೀಶ ಭಟ್ಟ ಹೆಗ್ಗಾರ (ಹಾರ್ಮೋನಿಯಂ)
ಪಂ. ಪೂರ್ಬಯಾನ್ ಚಟರ್ಜಿ (ಸಿತಾರ) – ವಿದ್ವಾನ ಯು. ರಾಜೇಶ (ಮ್ಯಾಂಡೋಲಿನ್)
ಪಂ. ಪೂರ್ಬಯಾನ್ ಚಟರ್ಜಿ: ದೇಶದ ಪ್ರತಿಭಾವಂತ ಸಿತಾರ ವಾದಕರಲ್ಲಿ ಕೋಲ್ಕತಾದ ಪೂರ್ಬಯಾನ್ ಚಟರ್ಜಿ ಅವರು ಜನಿಸಿದ್ದು ೧೯೭೬ರಲ್ಲಿ. ಅವರದು ಪಾರಂಪರಿಕ ಸಿತಾರ ವಾದಕರ ಮನೆತನ. ತಂದೆ ಪ್ರಥಪ್ರತಿಮ್ ಚಟರ್ಜಿ ಅವರು ಸಿತಾರ ವಾದಕರು. ಇವರು ಸಿತಾರ ಕಲಿಯಲು ಪ್ರೇರಣೆ ನೀಡಿದ್ದು ಪಂ. ನಿಖಿಲ್ ಬ್ಯಾನರ್ಜಿ ಅವರ ಸಿತಾರ್‌ನ ಮಾಂತ್ರಿಕತೆ. ಇವರ ಸಿತಾರ ಕಲಿಕೆ ಆರಂಭಗೊಂಡಾಗ ಪೂರ್ಬಯಾನ್ ಆಗಿನ್ನೂ ೮ರ ಕಿಶೋರ. ತಂದೆಯ ಪದತಲದಲ್ಲಿ ಕುಳಿತು ಕಠಿತಮ ರಿಯಾಜ಼್, ಶ್ರದ್ಧೆಯೊಂದಿಗೆ ಆಳವಾದ ಅಧ್ಯಯನಗೈದು ಅತ್ಯಂತ ಕಡಿಮೆ ಸಮಯದಲ್ಲಿ ಉದಯೋನ್ಮುಖ ಸಿತಾರ ವಾದಕರಾಗಿ ಹೊರಹೊಮ್ಮಿದರು.
ಪೂರ್ಬಯಾನ್ ಅವರದು ಬಹುಮುಖ ಪ್ರತಿಭೆ. ಗಾಯನದಲ್ಲೂ ಪ್ರಾವೀಣ್ಯತೆ ಸಾಧಿಸಿರುವ ಪೂರ್ಬಯಾನ್ ಚಟರ್ಜಿ ಶಂಕರ ಮಹಾದೇವನ್ ಅವರೊಂದಿಗೆ ಹಾಡಿದ್ದಾರೆ. ಪೂರ್ಬಯಾನ್ ಅವರ ಅನೇಕ ಧ್ವನಿಸುರುಳಿಗಳು ಬಿಡುಗಡೆಗೊಂಡಿದ್ದು, ರಾಷ್ಟ್ರಪತಿ ಪ್ರಶಸ್ತಿ, ಆದಿತ್ಯ ವಿಕ್ರಮ ಬಿರ್ಲಾ ಪುರಸ್ಕಾರ ಹಾಗೂ ಪಾಮ್ ಐಆರ್‌ಎಎ ಪ್ರಶಸ್ತಿಗಳಿಗೆ ಭಾಜರಾಗಿದ್ದಾರೆ. ಇವರು ದೇಶದ ವಿವಿಧ ಸಂಗೀತೋತ್ಸವಗಳಲ್ಲದೇ ಇಂಗ್ಲೆಂಡ್, ಸಿಂಗಾಪೂರ, ಫ್ರಾನ್ಸ್, ಜರ್ಮನಿ, ಆಸ್ಟ್ರೇಲಿಯಾ, ಅಮೆರಿಕಗಳಲ್ಲಿ ತಮ್ಮ ಸಿತಾರ್ ಸ್ವರ ತರಂಗಗಳನ್ನು ಹರಿಸಿದ್ದಾರೆ.
ಯು. ರಾಜೇಶ: ಉಪ್ಪಾಲಪು ರಾಜೇಶ ದೇಶ ಕಂಡ ಸುಪ್ರಸಿದ್ಧ ಮ್ಯಾಂಡೋಲಿನ್ ವಾದಕ, ಸಂಗೀತ ನಿರ್ದೇಶಕ, ಸಂಗೀತ ಸಂಯೋಜಕ. ಅವಿಭಜಿತ ಆಂಧ್ರಪ್ರದೇಶದ ಪಲಕೋದ ಸಂಗೀತಗಾರರ ಮನೆತನದಲ್ಲಿ ಜನಿಸಿದ ರಾಜೇಶ, ಖ್ಯಾತ ಮ್ಯಾಂಡೋಲಿನ್ ವಾದಕರಾಗಿದ್ದ ಯು. ಶ್ರೀನಿವಾಸ ಅವರ ತಮ್ಮ. ತಂದೆ ಸತ್ಯನಾರಾಯಣ ಹಾಗೂ ಅಣ್ಣ ಶ್ರೀನಿವಾಸ ಇಬ್ಬರೂ ಸಂಗೀತಗಾರರು. ಹೀಗಾಗಿ ಸಂಗೀತದ ಪರಿಸರದಲ್ಲಿ ಜನಿಸಿದ ರಾಜೇಶ ತಮ್ಮ ೬ನೇ ವಯಸ್ಸಿನಲ್ಲಿಯೇ ಕರ್ನಾಟಕಿ ಸಂಗೀತ ಶೈಲಿಯಲ್ಲಿ ಮ್ಯಾಂಡೋಲಿನ್ ನುಡಿಸಲು ಆರಂಭಿಸಿದರು. ತಂದೆ ಹಾಗೂ ಅಣ್ಣನಿಂದ ಆಳವಾದ ಮಾರ್ಗದರ್ಶನ ಪಡೆದು ಅತ್ಯಂತ ಕಡಿಮೆ ಸಮಯದಲ್ಲಿ ಯುವ ಮ್ಯಾಂಡೋಲಿನ್ ವಾದಕರಾಗಿ ಹೊರಹೊಮ್ಮಿದರು.
ಕಂಚಿ ಕಾಮಕೋಟಿ ಪೀಠದ ಚಂದ್ರಶೇಖರ ಸರಸ್ವತಿ ಸ್ವಾಮಿಗಳ ಉಪಸ್ಥಿತಿಯಲ್ಲಿ ಮೊದಲ ಸಂಗೀತ ಕಚೇರಿಯನ್ನು ನೀಡಿದ ರಾಜೇಶ ಅಣ್ಣನೊಂದಿಗೆ ವೇದಿಕೆ ಹಂಚಿಕೊಂಡರು. ಖ್ಯಾತ ಕಲಾವಿದರಾದ ಉ. ಝಾಕೀರ ಹುಸೇನ, ಸುಲ್ತಾನ್ ಖಾನ್, ಪಂ. ಹರಿಪ್ರಸಾದ ಚೌರಾಸಿಯಾ, ಶಂಕರ ಮಹಾದೇವನ್, ಲೂಯಿಸ್ ಬ್ಯಾಂಕ್ಸ್, ಶಿವಮಣಿ, ನಿಲಾದ್ರಿಕುಮಾರ ಅವರೊಂದಿಗೆ ಮ್ಯಾಂಡೋಲಿನ್ ಜುಗಲ್‌ಬಂದಿ ಕಾರ್ಯಕ್ರಮಗಳನ್ನು ನೀಡಿದರು. ಇದಲ್ಲದೇ ವಿದೇಶದ ಪಾಶ್ಚಾತ್ಯ ಸಂಗೀತಗಾರರೊಂದಿಗೂ ನುಡಿಸಿದ ಕೀರ್ತಿ ರಾಜೇಶ ಅವರದಾಗಿದೆ.
ಸಹಕಲಾವಿದರು : ದೇಬಜಿತ ಪಟಿತುಂಡಿ (ತಬಲಾ)
ಪಾಲ್ಗೊಳ್ಳಲಿರುವ ಕಲಾವಿದರ ವಿವರ
ಮೇ 15, 2022, ರವಿವಾರ – ಬೆಳಿಗ್ಗೆ 10 ರಿಂದ ರಾತ್ರಿ 9.೦೦ ರವರೆಗೆ
ಪಂ. ಗಣಪತಿ ಭಟ್ ಹಾಸಣಗಿ, ಹುಬ್ಬಳ್ಳಿ (ಗಾಯನ)
೧೯೫೧ರಲ್ಲಿ ಕಲೆ ಹಾಗೂ ಸಾಹಿತ್ಯದ ಹಿನ್ನೆಲೆಯುಳ್ಳ ಮನೆತನದಲ್ಲಿ ಜನಿಸಿದ ಪಂ. ಗಣಪತಿ ಭಟ್ ಅವರ ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಹಾಸಣಗಿ ಗ್ರಾಮ. ತಂದೆ ವೆಂಕಟರಮಣ ಹೆಗಡೆ ಯಕ್ಷಗಾನ ಕಲೆಯ ಸಾಹಿತಿ ಹಾಗೂ ಕಲಾವಿದರು. ತಾಯಿ ಮಹಾದೇವಿ ಜಾನಪದ ಹಾಡುಗಾರ್ತಿ. ಹೀಗಾಗಿ ಗಣಪತಿ ಭಟ್ ಅವರಿಗೆ ಬಾಲ್ಯದಿಂದಲೇ ಸಂಗೀತದತ್ತ ಒಲವು. ಹಾಗೆ ನೋಡಿದರೆ ಅವರ ಸಂಗೀತ ಕಲಿಕೆ ಪ್ರಾರಂಭಗೊಂಡಿದ್ದು ಸಿತಾರ ಕಲಿಕೆಯೊಂದಿಗೆ. ೧೯೬೬ ರಿಂದ ಕಿಂಗ್ ಆಫ್ ಮೆಲೋಡಿ ಪಂ. ಬಸವರಾಜ ರಾಜಗುರು ಅವರಲ್ಲಿ ಗಾಯನ ಕಲಿಕೆ ಆರಂಭ. ೧೯೭೯ರಲ್ಲಿ ಗುರುಶಿಷ್ಯರ ಗಂಡಾಬಂಧನ ಸಮಾರಂಭ ನೆರವೇರಿತು.
ಗಣಪತಿ ಭಟ್ಟರು ಅತ್ಯಂತ ಆಳ, ಕಠಿಣತಮ ರಿಯಾಜ್, ಗುರುಭಕ್ತಿಯೊಂದಿಗೆ ಅಭ್ಯಾಸಗೈದು ಉದಯೋನ್ಮುಖ ಗಾಯಕರಾಗಿ ಹೊರಹೊಮ್ಮಿದರು. ದೇಶ ವಿದೇಶಗಳಲ್ಲಿ ತಮ್ಮ ಸಂಗೀತ ಸುಧೆಯನ್ನು ಹರಿಸಿರುವ ವಿದ್ವತ್‌ಪೂರ್ಣ ಗಾಯನದ ಗಣಪತಿ ಭಟ್ಟರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಂಗೀತ ನೃತ್ಯ ಅಕ್ಯಾಡೆಮಿ ಪುರಸ್ಕಾರ, ಪುಣೆಯ ವತ್ಸಲಾತಾಯಿ ಜೋಶಿ ಪ್ರಶಸ್ತಿ, ಆರ್ಯಭಟ ಪುರಸ್ಕಾರ, ಟೊರೋಂಟೋ ಪ್ರಶಸ್ತಿ, ಚಂದ್ರಹಾಸ, ಸ್ವರನಿಧಿ, ಗಾನ ಗಂಗಾಧರ, ಸಂಗೀತ ಭೂಷಣ, ಸಂಗೀತ ಕಲಾರತ್ನ, ಗಾನವಿದ್ಯಾ ವಲ್ಲಭ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ
ಸಹಕಲಾವಿದರು : ಶ್ರೀಧರ ಮಾಂಡ್ರೆ (ತಬಲಾ), ಪಂ. ವ್ಯಾಸಮೂರ್ತಿ ಕಟ್ಟಿ (ಹಾರ್ಮೋನಿಯಂ)
ಪಂ. ಪ್ರವೀಣ ಗೋಡಖಿಂಡಿ-ಷಡ್ಜ್ ಗೋಡಖಿಂಡಿ (ದ್ವಂದ್ವ ಬಾನ್ಸುರಿ ವಾದನ)

ಪಂ. ಪ್ರವೀಣ ಗೋಡಖಿಂಡಿ: ಸಂಗೀತಗಾರರ ಮನೆತನದಲ್ಲಿ ಜನಿಸಿದ ಪ್ರವೀಣ ಗೋಡಖಿಂಡಿ, ಬಾನ್ಸುರಿ ವಾದನದ ದೈತ್ಯ ಪ್ರತಿಭೆ. ತಮ್ಮ ೩ನೇ ವರ್ಷದಿಂದಲೇ ಬಾನ್ಸುರಿಯೊಂದಿಗೆ ಅವಿನಾಭಾವ ಸಂಬಂಧವಿರಿಸಿಕೊಂಡಿರುವ ಪ್ರವೀಣಗೆ ಖ್ಯಾತ ಗಾಯಕ ಹಾಗೂ ಬಾನ್ಸುರಿ ವಾದಕರಾದ ತಂದೆ ಪಂ. ವೆಂಕಟೇಶ ಗೋಡಖಿಂಡಿ ಅವರು ಏಕೈಕ ಗುರು. ಹೀಗಾಗಿ ಪ್ರವೀಣಗೆ ಬಾಲ್ಯದಿಂದಲೇ ಸಂಗೀತ ಓತಪ್ರೋತ. ತಮ್ಮ ೬ನೇ ವಯಸ್ಸಿನಲ್ಲಿಯೇ ಪ್ರಥಮ ಸಾರ್ವಜನಿಕ ಕಾರ್ಯಕ್ರಮ ನೀಡಿದ ಕೀರ್ತಿ ಪ್ರವೀಣ ಅವರದು. ಕಿರಾನಾ ಘರಾಣೆಯ ಗಾಯಕಿ ಶೈಲಿಯಲ್ಲಿ ಬಾನ್ಸುರಿ ನುಡಿಸುವ ಪ್ರವೀಣ, ಗತಕಾರಿ ಅಥವಾ ತಂತ್ರಕಾರಿ ಎಂಬ ವಿನೂತನ ಶೈಲಿಯನ್ನು ಅಳವಡಿಸಿಕೊಂಡಿದ್ದಾರೆ. ಪಾಶ್ಚಿಮಾತ್ಯ ಶಾಸ್ತ್ರೀಯ ಸಂಗೀತ ಹಾಗೂ ಕರ್ನಾಟಕಿ ಸಂಗೀತ ಶೈಲಿಯಲ್ಲಿ ಬಾನ್ಸುರಿಯನ್ನು ನುಡಿಸುವ ಪ್ರವೀಣಗೆ ಮುಂಬೈನ ಸುರ್ ಸಿಂಗಾರ್ ಸಂಸದದಿಂದ ’ಸುರಮಣಿ’ ಪ್ರಶಸ್ತಿ ನೀಡಿ ಗೌರವಿಸಿದೆ. ಆಕಾಶವಾಣಿಯು ಪ್ರವೀಣಗೆ ’ಎ’ ಗ್ರೇಡ್ ಕಲಾಕಾರರೆಂದು ಮಾನ್ಯತೆ ನೀಡಿದೆ. ನಾದನಿಧಿ ಹಾಗೂ ಆರ್ಯಭಟ ಪ್ರಶಸ್ತಿ ಪಡೆದ ಪ್ರವೀಣ, ದೇಶ-ವಿದೇಶಗಳಲ್ಲಿ ಬಾನ್ಸುರಿ ಸೋಲೊ ಹಾಗೂ ಫ್ಯೂಜನ್ ಸಂಗೀತದ ನಾದಲಹರಿಯನ್ನು ಹರಿಸಿದ ಕೀರ್ತಿ ಇವರದು.
ಷಡ್ಜ್ ಗೋಡಖಿಂಡಿ: ಅಜ್ಜ ಪಂ. ವೆಂಕಟೇಶ ಗೋಡಖಿಂಡಿ ತಮ್ಮ ವಿದ್ಯಾರ್ಥಿಗಳಿಗೆ ಪಾಠ ಮಾಡುವಾಗಲೇ ಅವರಿಗೆ ತಾನಪುರದ ಸಾಥ್ ನೀಡುತ್ತಿದ್ದ ಮೂರು ವರ್ಷದ ಮೊಮ್ಮಗ ಷಡ್ಜ್. ಆಗಲೇ ಕೊಳಲು ಹಿಡಿಯಲು ಪ್ರಾರಂಭಿಸಿದ್ದ ಷಡ್ಜ್ ಅತ್ಯಂತ ಕಡಿಮೆ ವಯಸ್ಸಿನಲ್ಲಿಯೇ ಸ್ವತಂತ್ರವಾಗಿ ಬಾನ್ಸುರಿ ವಾದನದ ಕಚೇರಿಯನ್ನು ನೀಡಿ ಹಿರಿಯರಿಂದ ಶಬ್ಬಾಷಗಿರಿಯನ್ನು ಪಡೆದ ಪುಟ್ಟ ಬಾಲಕ ಷಡ್ಜ್ ಈಗ ದೇಶದ ಪ್ರತಿಭಾವಂತ ಯುವ ಬಾನ್ಸುರಿ ವಾದಕರಾಗಿ ಹೊರಹೊಮ್ಮಿದ್ದಾರೆ. ಅಜ್ಜ ವೆಂಕಟೇಶ, ತಂದೆ ಪ್ರವೀಣರಿಂದ ಬಳುವಳಿಯಾಗಿ ಬಂದ ಬಾನ್ಸುರಿವಾದನದ ಪರಂಪರೆಯನ್ನು ಷಡ್ಜ್ ಈಗ ಅತ್ಯುತ್ತಮವಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ದೇಶದ ವಿವಿಧ ಸಂಗೀತೋತ್ಸವಗಳಲ್ಲದೇ ಕತಾರ್, ದೋಹಾ, ಹಾಂಗ್‌ಕಾಂಗ್ ಅಂತರ್ರಾಷ್ಟ್ರೀಯ ವೇದಿಕೆಗಳಲ್ಲಿ ಬಾನ್ಸುರಿಯ ನಿನಾದವನ್ನು ಹರಿಸಿ ಸೈ ಎನಿಸಿಕೊಂಡಿದ್ದಾರೆ.
ಸಹಕಲಾವಿದರು : ದೇಬಜಿತ ಪಟಿತುಂಡಿ (ತಬಲಾ)
ರಮಾಕಾಂತ ಗಾಯಕವಾಡ – ಆದಿತ್ಯ ಮೋಡಕ (ದ್ವಂದ್ವ ಗಾಯನ)
ರಮಾಕಾಂತ ಗಾಯಕವಾಡ : ಸಂಗೀತಗಾರರ ಮನೆತನದಲ್ಲಿ ಜನಿಸಿದ ರಮಾಕಾಂತ ಗಾಯಕವಾಡ ಹಿಂದುಸ್ತಾನಿ ಸಂಗೀತದ ಉದಯೋನ್ಮುಖ ಪ್ರತಿಭೆ. ಸಂಗೀತ ಶಿಕ್ಷಕರಾಗಿರುವ ತಂದೆ ಪಂ. ಸೂರ್ಯಕಾಂತ ಹಾಗೂ ತಾಯಿ ಸಂಗೀತಾ ಗಾಯಕವಾಡ ಅವರು ಸಂಗೀತ ಶಿಕ್ಷಕರು. ಗಾಯನ ಕಲಿಕೆ ಪ್ರಾರಂಭಗೊಂಡಾಗ ಅವರಿಗೆ ಕೇವಲ ನಾಲ್ಕು ವರ್ಷ. ತಂದೆ ಸೂರ್ಯಕಾಂತ ಅವರು ನಡೆಸುವ ಹರಿ ಓಂ ಸಂಗೀತ ಕಲಾ ಮಂಚ್ ಸಂಸ್ಥೆಯಲ್ಲಿ ಪಟಿಯಾಲಾ ಘರಾಣೆ ಶೈಲಿಯಲ್ಲಿ ಶಾಸ್ತ್ರೋಕ್ತ ಆಳವಾದ ಸಂಗೀತಾಭ್ಯಾಸ ಮಾಡಿದರು. ರಮಾಕಾಂತ ಅವರು ಅತೀ ಚಿಕ್ಕ ವಯಸ್ಸಿನಲ್ಲಿಯೇ ಓರ್ವ ಭರವಸೆಯ ಗಾಯಕನಾಗಿ ಹೊರಹೊಮ್ಮಿದರು.
ಗಂಧರ್ವ ಮಹಾವಿದ್ಯಾಲಯದಿಂದ ವಿಶಾರದ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಹಾಗೂ ಸಂಗೀತ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿರುವ ರಮಾಕಾಂತ ಅವರು ಪಂ. ರಾಮ ಮರಾಠೆ ಪುರಸ್ಕಾರ, ಪಂ. ಜಗನ್ನಾಥಬುವಾ ಪುರೋಹಿತ ಪುರಸ್ಕಾರ ಇನ್ನೂ ಅನೇಕ ಪುರಸ್ಕಾರಗಳಿಗೆ ಪಾತ್ರರಾಗಿರುವ ಅತೀ ಕಡಿಮೆ ವಯಸ್ಸಿನ ಸಂಗೀತ ಪ್ರತಿಭೆ. ಮುಂಬೈ, ಪುಣೆ, ಕೊಲ್ಹಾಪುರ, ಜೈಪುರ, ಹೈದರಾಬಾದ ಅಲ್ಲದೇ ಅಮೆರಿಕದ ಅನೇಕ ಸ್ಥಳಗಳಲ್ಲಿ ತಮ್ಮ ಸಂಗೀತ ಸುಧೆಯನ್ನು ಹರಿಸಿದ್ದಾರೆ.
ಆದಿತ್ಯ ಮೋಡಕ: ಗ್ವಾಲಿಯರ್ ಘರಾಣೆಯ ಖ್ಯಾತ ಗಾಯಕ ಪಂ. ರಾಮ ದೇಶಪಾಂಡೆ ಅವರ ಶಿಷ್ಯ ಮುಂಬೈನ ಆದಿತ್ಯ ಮೋಡಕ ತಮ್ಮ 5 ವಯಸ್ಸಿನಿಂದಲೇ ಸಂಗೀತದತ್ತ ಮುಖ ಮಾಡಿದವರು. ಚಂದ್ರಕಾಂತ ಪರ್ಕರ್ ಹಾಗೂ ಪ್ರದೀಪ ಧೋಂಡ ಅವರಲ್ಲಿ ಆರಂಭಿಕ ಸಂಗೀತಾಧ್ಯಯನ ಮಾಡಿದ ಆದಿತ್ಯ ಮೋಡಕ ಅತ್ಯಂತ ಕಡಿಮೆ ಅವಧಿಯಲ್ಲಿ ವೇದಿಕೆ ಪ್ರದರ್ಶನಗೈದವರು. ಮಿರಜ್‌ನ ಗಂಧರ್ವ ಮಹಾವಿದ್ಯಾಲಯದಿಂದ ಸಂಗೀತ ಅಲಂಕಾರ ಪದವಿಯನ್ನು ಪಡೆದರು. ಕೇಂದ್ರ ಸರ್ಕಾರವು ಇವರಿಗೆ ರಾಷ್ಟ್ರೀಯ ಶಿಷ್ಯವೇತನ, ಮುಂಬೈ ವಿಶ್ವವಿದ್ಯಾಲಯ ಭೀಮಸೇನ ಜೋಶಿ ಶಿಷ್ಯವೇತನ ನೀಡಿ ಪ್ರೋತ್ಸಾಹಿಸಿವೆ. ದೇಶದ ವಿವಿಧ ಪ್ರಮುಖ ಸಂಗೀತ ಸಮ್ಮೇಳನಗಳಲ್ಲಿ ತಮ್ಮ ಗಾನಸುಧೆ ಹರಿಸಿರುವ ಆದಿತ್ಯ ಅವರಿಗೆ ಚತುರಂಗ ಫೌಂಡೇಶನ್ ಪ್ರಶಸ್ತಿ ದೊರೆತಿದೆ.
ಸಹಕಲಾವಿದರು : ಡಾ. ಉದಯ ಕುಲಕರ್ಣಿ (ತಬಲಾ), ಪಂ. ವ್ಯಾಸಮೂರ್ತಿ ಕಟ್ಟಿ (ಹಾರ್ಮೋನಿಯಂ)
ವಿದುಷಿ ಗೌರಿ ಪಠಾರೆ, ಮುಂಬೈ (ಗಾಯನ)
ಮುಂಬೈನ ಗೌರಿ ಪಠಾರೆ, ದೇಶದ ಪ್ರಬುದ್ಧ ಹಿಂದುಸ್ತಾನಿ ಸಂಗೀತ ಕಲಾವಿದೆ. ತಾಯಿ ಡಾ. ವಿದ್ಯಾ ದಾಮ್ಲೆ ಸಂಗೀತ ವಿದುಷಿ. ಪಂ. ಜಿತೇಂದ್ರ ಅಭಿಷೇಕಿ ಅವರ ಶಿಷ್ಯೆ. ಸಂಗೀತಮಯ ಪರಿಸರದಲ್ಲಿ ಜನಿಸಿದ ಗೌರಿ ಪಠಾರೆ ಅವರಿಗೆ ಸಹಜವಾಗಿ ಬಾಲ್ಯದಿಂದಲೇ ಸಂಗೀತದತ್ತ ಒಲವು ಮೂಡಿತು. ತಾಯಿಯಿಂದ ಪ್ರಾಥಮಿಕ ಹಂತದ ಸಂಗೀತದ ತಾಲೀಮು ನಡೆಯಿತು. ನಂತರದ ದಿನಗಳಲ್ಲಿ ಕಿರಾನಾ ಘರಾಣೆಯ ಮಾಧುರಿ ಜೋಶಿ ಹಾಗೂ ಪಂ. ಗಂಗಾಧರಬುವಾ ಪಿಂಪಲಖರೆ ಅವರಲ್ಲಿ ಮುಂದುವರಿಸಿದರು. ಮುಂದೆ ಜೈಪುರ-ಅತ್ರೌಲಿ ಘರಾಣೆಯ ವಿದುಷಿ ಪದ್ಮಾ ತಳವಲಕರ ಅವರಲ್ಲಿ ಆಳವಾದ ಅಧ್ಯಯನಗೈದು ಉದಯೋನ್ಮುಖ ಗಾಯಕಿಯಾಗಿ ಹೊರಹೊಮ್ಮಿದರು. ೨೦೧೦ ರಿಂದ ಜೈಪುರ ಘರಾಣೆಯ ಪಂ. ಅರುಣ ದ್ರಾವಿಡ ಅವರಲ್ಲಿ ಹೆಚ್ಚಿನ ಮಾರ್ಗದರ್ಶನ ಪಡೆಯುತ್ತಿದ್ದಾರೆ.
ಸುಮಧುರ ಕಂಠದ ಗೌರಿ ಪಠಾರೆ ಅವರ ಗಾಯನವೆಂದರೆ ಗ್ವಾಲಿಯರ್, ಕಿರಾನಾ ಹಾಗೂ ಜೈಪುರ-ಅತ್ರೌಲಿ ಘರಾಣೆಗಳ ಸಮ್ಮಿಲನ. ಪುಣೆ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ವಿಜ್ಞಾನದಲ್ಲಿ ಪದವಿಧರೆಯಾಗಿರುವ ಗೌರಿ ಪಠಾರೆ ಅವರು ಮುಂಬೈ ಎನ್.ಸಿ.ಪಿ.ಎ ದಿಂದ ಕೇಸರಬಾಯಿ ಕೇಳಕರ ಫೆಲೋಶಿಪ್, ಪುಣೆಯ ಗಾನವರ್ಧನದಿಂದ ಯುಮುನಾದೇವಿ ಶಹಾನೆ ಪುರಸ್ಕಾರ, ರಾಮಕೃಷ್ಣಬುವಾ ವಝೆ ಯುವ ಗಾಯಕಿ ಪುರಸ್ಕಾರ, ಸುರಮಣಿ ಪುರಸ್ಕಾರ, ಸಂಗೀತ ರತ್ನ ಪುರಸ್ಕಾರ, ಕಲಾಕಿರಣ ಪುರಸ್ಕಾರ, ಪಂ. ಭೀಮಸೇನ ಜೋಶಿ ಸ್ವರಭಾಸ್ಕರ ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ. ಆಕಾಶವಾಣಿ ಎ ಶ್ರೇಣಿಯ ಕಲಾವಿದೆಯಾಗಿರುವ ಗೌರಿ ಪಠಾರೆ ಅವರು ದೇಶದ ಪ್ರತಿಷ್ಠಿತ ಸಂಗೀತೋತ್ಸವಗಳಲ್ಲಿ ಹಾಗೂ ಇಂಗ್ಲೆಂಡ್, ಸ್ವಿಝರಲ್ಯಾಂಡ್, ಕೆನಡಾ, ದುಬೈ, ಅಮೆರಿಕ, ಫ್ರಾನ್ಸ್, ಆಸ್ಟ್ರೇಲಿಯಾ ಹಾಗೂ ಸಿಂಗಾಪೂರಗಳಲ್ಲಿ ತಮ್ಮ ಸಂಗೀತ ಸುಧೆಯನ್ನು ಹರಿಸಿದ್ದಾರೆ.

ಸಹಕಲಾವಿದರು : ಪಂ. ರಘುನಾಥ ನಾಕೋಡ (ತಬಲಾ), ಗುರುಪ್ರಸಾದ ಹೆಗಡೆ (ಹಾರ್ಮೋನಿಯಂ)
ಜುಗಲ್‌ಬಂದಿ
ವಿದುಷಿ ದೇಬಸ್ಮಿತಾ ಭಟ್ಟಾಚಾರ್ಯ (ಸರೋದ) – ವಿದುಷಿ ಮೀತಾ ನಾಗ್ (ಸಿತಾರ)
ವಿದುಷಿ ದೇಬಸ್ಮಿತಾ ಭಟ್ಟಾಚಾರ್ಯ: ದೇಶದ ಯುವ ಪ್ರತಿಭಾವಂತ ಸರೋದ ವಾದನ ಕಲಾವಿದೆಯರಲ್ಲಿ ದೇಬಸ್ಮಿತಾ ಭಟ್ಟಾಚಾರ್ಯ ಅವರೂ ಕೂಡ ಒಬ್ಬರು. ಸಂಗೀತಗಾರರ ಮನೆತನದಲ್ಲಿ ಜನಿಸಿದ ದೇಬಸ್ಮಿತಾ ಅವರ ಹುಟ್ಟೂರು ಕೋಲ್ಕತ್ತಾದಲ್ಲಿ. ಸೇನಿಯಾ ಷಹಜಾನ್‌ಪುರ ಘರಾಣೆಯ ಸುವಿಖ್ಯಾತ ಸರೋದ ವಾದಕರಾದ ಪದ್ಮಭೂಷಣ ಪಂ. ಬುದ್ಧದೇವ ದಾಸಗುಪ್ತಾ ಅವರ ಮಗಳು ದೇಬಸ್ಮಿತಾ. ಮನೆತುಂಬಿದ ನಾದಮಯ ಪರಿಸರದಲ್ಲಿ ಬೆಳೆದ ದೇಬಸ್ಮಿತಾಗೆ ಸಹಜವಾಗಿ ಬಾಲ್ಯದಿಂದಲೇ ಸಂಗೀತ ಕಲಿಯಬೇಕೆಂಬ ಹಂಬಲವುಂಟಾಯಿತು.
ನಂತರ ಪಂ. ಬುದ್ದದೇವ ದಾಸಗುಪ್ತಾ ಅವರು ದೇಬಸ್ಮಿತಾಗೆ ಸಪ್ತಸ್ವರಗಳ ಶ್ರೀಕಾರ ಹಾಕಿದರು. ಆಗ ದೇಬಸ್ಮಿತಾಗೆ ಕೇವಲ 4 ವರ್ಷದ ಪ್ರಾಯ. ನಂತರ ತಂದೆಯವರಲ್ಲಿ ೧೨ ವರ್ಷಗಳ ಆಳವಾದ ತಾಲೀಮನ್ನು ಪಡೆದರು. ಕೋಲ್ಕತ್ತಾದ ಪ್ರತಿಷ್ಠಿತ ಐಟಿಸಿ ರಿಸರ್ಚ್ ಅಕ್ಯಾಡೆಮಿಯ ಉನ್ನತ ಶ್ರೇಣಿಯ ಶಿಷ್ಯವೇತನ ಪಡೆದ ಇವರು ಉದಯೋನ್ಮುಖ ಸರೋದ ವಾದಕಿಯಾಗಿ ಹೊರಹೊಮ್ಮಿದರು. ಸಂಗೀತದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ದೇಬಸ್ಮಿತಾ ಅವರು ದೇಶದ ಪ್ರತಿಷ್ಠಿತ ಸಂಗೀತೋತ್ಸವಗಳಲ್ಲದೇ, ಹಾಲೆಂಡ್, ಇಂಗ್ಲೆಂಡ್, ಚೀನಾ, ಕುವೈತ್, ಸ್ವೀಡನ್ ಹಾಗೂ ಅಮೆರಿಕಗಳಲ್ಲಿ ಸರೋದ್‌ನ ನಿನಾದವನ್ನು ಹರಿಸಿದ್ದಾರೆ.
ವಿದುಷಿ ಮೀತಾ ನಾಗ್: ವಿಷ್ಣುಪುರ ಘರಾಣೆಯ ನಾಗ್ ಕುಟುಂಬದ 6ನೇ ತಲೆಮಾರಿನ ಸಿತಾರವಾದಕಿ ವಿದುಷಿ ಮೀತಾ ನಾಗ್ ಅವರು. ತಂದೆ ಮಣಿಲಾಲ್ ನಾಗ್, ಅಜ್ಜ ಗೋಕುಲ ನಾಗ್ ಪಶ್ಚಿಮ ಬಂಗಾಳದವರು. ಗಾಯನ ಹಾಗೂ ವಾದನ ಎರಡರಲ್ಲೂ ಪ್ರಾವೀಣ್ಯತೆಯನ್ನು ಈ ಘರಾಣೆಯವರು ಸಾಧಿಸಿದವರು. 1969 ರಲ್ಲಿ ಜನಿಸಿದ ಮೀತಾ ಅವರು ಸಾಂಗೀತಿಕ ಪರಿಸರದಲ್ಲಿ ಬೆಳೆದವರು. 6ವಯಸ್ಸಿನಲ್ಲಿಯೇ ತಂದೆಯವರಿಂದ ಸಿತಾರ ಕಲಿಕೆಯ ಆರಂಭಗೊಂಡಿತು. ತಮ್ಮ 10ನೇ ವಯಸ್ಸಿನಲ್ಲಿಯೇ ವೇದಿಕೆಯಲ್ಲಿ ಸಿತಾರ ವಾದನವನ್ನು ನುಡಿಸಿದರು. ನಂತರ ಆಳವಾದ ಮಾರ್ಗದರ್ಶನ ಪಡೆದು ಅತ್ಯಂತ ಕಡಿಮೆ ಅವಧಿಯಲ್ಲಿ ಸಿತಾರ ವಾದಕಿಯಾಗಿ ಹೊರಹೊಮ್ಮಿದರು. ದೇಶದ ಪ್ರತಿಷ್ಠಿತ ಸಂಗೀತೋತ್ಸವಗಳಲ್ಲಿ ಹಾಗೂ ಇಂಗ್ಲೆಂಡ್, ಅಮೆರಿಕ, ಕೆನಡಾ, ಜಪಾನ್, ಯುರೋಪ್‌ಗಳಲ್ಲಿ ತಮ್ಮ ಸಿತಾರ ತಂತುಗಳ ಝೇಂಕಾರವನ್ನು ಮೊಳಗಿಸಿದ್ದಾರೆ.
ಸಹಕಲಾವಿದರು : ದೇಬಜಿತ ಪಟಿತುಂಡಿ (ತಬಲಾ)

ಜುಗಲ್‌ಬಂದಿ
ಪಂ.ಜಯತೀರ್ಥ ಮೇವುಂಡಿ, (ಗಾಯನ) – ವಿದುಷಿ ಕಲಾ ರಾಮನಾಥ (ವಯೋಲಿನ್)
ಪಂ.ಜಯತೀರ್ಥ ಮೇವುಂಡಿ: 1972 ರಲ್ಲಿ ಜನಿಸಿದ ಪಂ. ಜಯತೀರ್ಥ ಮೇವುಂಡಿ ಕಿರಾನಾ ಘರಾಣೆಯ ಮೇರು ಪ್ರತಿಭೆ. ಅವರ ಗ್ವಾಲಿಯರ್ ಘರಾಣೆಯ ಸಂಗೀತ ರತ್ನ ಪಂ. ಅರ್ಜುನಸಾ ನಾಕೋಡ ಅವರಲ್ಲಿ 10 ವರ್ಷಗಳ ಕಠಿಣತಮ ರಿಯಾಜ್‌ನೊಂದಿಗೆ ಪ್ರಾರಂಭಿಕ ಶಿಕ್ಷಣ. ನಂತರದ ಮಾರ್ಗದರ್ಶನ ಭಾರತ ರತ್ನ ಪಂ. ಭೀಮಸೇನ ಜೋಶಿ ಅವರ ಶಿಷ್ಯರಾದ ಪಂ. ಶ್ರೀಪತಿ ಪಾಡಿಗಾರ ಅವರಿಂದ ಪಡೆದ ಜಯತೀರ್ಥ, ಕಿರಾನಾ ಘರಾಣೆಯ ವಿದ್ವತ್‌ಪೂರ್ಣ ಗಾಯಕರಾಗಿ ಹೊರಹೊಮ್ಮಿದರು. ಉಸ್ತಾದ ಅಮೀರ ಖಾನ್ ಸಾಹೇಬರ ಗಾಯಕಿಗೆ ಪ್ರಭಾವಿತಗೊಂಡ ಗಾಯಕರಲ್ಲಿ ಪಂ. ಜಯತೀರ್ಥ ಮೇವುಂಡಿ ಅವರೂ ಕೂಡ ಒಬ್ಬರು.
ಅಹಮದಾಬಾದ್, ಧಾರವಾಡ ಆಕಾಶವಾಣಿ ಕೇಂದ್ರಗಳು, ಸಂಗೀತ ರಿಸರ್ಚ್ ಅಕ್ಯಾಡೆಮಿ, ಕರ್ನಾಟಕ ಕಥಕ್ ಕೇಂದ್ರಗಳು ಆಯೋಜಿಸಿದ ಶಾಸ್ತ್ರೀಯ ಸಂಗೀತದ ಸ್ಪರ್ಧೆಯಲ್ಲಿ ಭಾಗವಹಿಸಿ ಓರ್ವ ಉದಯೋನ್ಮುಖ ಗಾಯಕರೆನಿಸಿಕೊಂಡರು. ಕರ್ನಾಟಕ ಸಂಗೀತ ನೃತ್ಯ ಅಕ್ಯಾಡೆಮಿ ಹಾಗೂ ಪುಣೆಯ ಗಾನವರ್ಧನ ಸಂಸ್ಥೆಯಿಂದ ೩ ವರ್ಷಗಳ ಶಿಷ್ಯವೇತನ ಪಡೆದ ಜಯತೀರ್ಥ, ಪಂ. ಜಸರಾಜ್ ಗೌರವ ಪುರಸ್ಕಾರ, ಮೇವಾಟಿ ಘರಾಣೆ ಸಂಗೀತ ಗೌರವ ಪುರಸ್ಕಾರ ಅಲ್ಲದೆ ಬಿಸ್ಮಿಲ್ಲಾ ಖಾನ್ ಪುರಸ್ಕಾರ ಹಾಗೂ ಸ್ವರ ಭಾಸ್ಕರ ಪ್ರಶಸ್ತಿ ಹೀಗೆ ವಿವಿಧ ಗೌರವ-ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ದೇಶದ ಪ್ರತಿಷ್ಠಿತ ಸಂಗೀತೋತ್ಸವಗಳಲ್ಲದೇ ವಿದೇಶಗಳಲ್ಲಿ ತಮ್ಮ ಸಂಗೀತ ಧಾರೆಯನ್ನು ಹರಿಸಿದ್ದಾರೆ. ಇವರ ಗಾಯನವೆಂದರೆ ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ ಅವರಿಗೆ ಬಹು ಇಷ್ಟ. ಭಾರತರತ್ನತ್ರಯರಾದ ಪಂ. ಭೀಮಸೇನ ಜೋಶಿ, ಪಂ. ರವಿಶಂಕರ ಹಾಗೂ ಲತಾ ಮಂಗೇಶ್ಕರ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದೇ ಅವರ ಮೈಲಿಗಲ್ಲುಗಳಲ್ಲಿ ಒಂದು.
ವಿದುಷಿ ಕಲಾ ರಾಮನಾಥ : ’ಸಿಂಗಿಂಗ್ ವಯೋಲಿನ್’ ಖ್ಯಾತಿಯ ವಿದುಷಿ ಕಲಾ ರಾಮನಾಥ್ ಅವರು ದೇಶದ ಸುಪ್ರಸಿದ್ಧ ವಯೋಲಿನ್ ವಾದಕಿಯರಲ್ಲಿ ಒಬ್ಬರು. ಮೇವಾಟಿ ಘರಾಣೆಯ ಶೈಲಿಯನ್ನು ತಮ್ಮ ವಾದನದಲ್ಲಿ ಅಳವಡಿಸಿಕೊಂಡಿರುವ ಕಲಾ ರಾಮನಾಥ ಅವರದು ಪಾರಂಪರಿಕ ಸಂಗೀತಗಾರರ ಮನೆತನ. ತಂದೆ ಪಂ. ಟಿ.ಎನ್. ಮಣಿ, ತಾಯಿ ಮಾಲತಿ. ಸುವಿಖ್ಯಾತ ಕಲಾವಿದರಾದ ಪಂ. ಟಿ.ಎನ್. ಕೃಷ್ಣನ್ ಹಾಗೂ ಡಾ. ಎನ್. ರಾಜಮ್ ಅವರು ಕಲಾ ರಾಮನಾಥ ಅವರ ಸಂಬಂಧಿಕರು. ಅಜ್ಜ ನಾರಾಯಣ ಅಯ್ಯರ ಅವರಿಂದ ಆರಂಭಿಕ ಹಂತದ ವಯೋಲಿನ್ ಅಧ್ಯಯನಗೈದರು. ವಯೋಲಿನ್ ಮನೆತನದ 7ನೇ ತಲೆಮಾರಿನ ಕಲಾ ರಾಮನಾಥ ತಮ್ಮ 14 ವಯಸ್ಸಿನಲ್ಲಿಯೇ ವೇದಿಕೆ ಏರಿದ ಕಲಾವಿದೆ. ಮೇವಾಟಿ ಘರಾಣೆಯ ಸಂಗೀತ ಮಾರ್ತಾಂಡ ಪಂ. ಜಸರಾಜ್ ಅವರಲ್ಲಿ 15ವರ್ಷಗಳ ಆಳವಾದ ಮಾರ್ಗದರ್ಶನ ಪಡೆದರು. ಅತ್ಯಂತ ಮನಮೋಹಕ ಗಾಯಕಿ ಅಂಗ್‌ದಲ್ಲಿ ನುಡಿಸುವ ಅವರ ವಯೋಲಿನ್ ನಿನಾದವು ಸಿಂಗಿಂಗ್ ವಯೋಲಿನ್ ಎಂದೇ ಪ್ರಸಿದ್ಧಿಯನ್ನು ತಂದುಕೊಟ್ಟಿದೆ. ದೇಶ-ವಿದೇಶಗಳಲ್ಲಿ ವಯೋಲಿನ್ ನಿನಾದವನ್ನು ಹರಿಸಿರುವ ಕಲಾ ರಾಮನಾಥ ಅವರಿಗೆ ಕುಮಾರ ಗಂಧರ್ವ ಸನ್ಮಾನ, ಪಂ. ಜಸರಾಜ ಗೌರವ ಪುರಸ್ಕಾರ, ಸಂಗೀತ ನಾಟಕ ಅಕ್ಯಾಡೆಮಿ ಪುರಸ್ಕಾರಗಳು ಸಂದಿವೆ.
ಸಹಕಲಾವಿದರು : ಓಜಸ್ ಆಧಿಯಾ (ತಬಲಾ), ಗುರುಪ್ರಸಾದ ಹೆಗಡೆ (ಹಾರ್ಮೋನಿಯಂ)

 

administrator

Related Articles

Leave a Reply

Your email address will not be published. Required fields are marked *