ವಿದ್ಯಾಕಾಶಿಯಲ್ಲಿ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯ
ಧಾರವಾಡ: ವಿದ್ಯಾಕಾಶಿ ಎಂದೇ ಹೆಸರಾಗಿರುವ ಧಾರವಾಡಕ್ಕೆ ಇದೀಗ ಮತ್ತೊಂದು ವಿಶೇಷ ಸೌಲಭ್ಯ ದೊರೆಯುತ್ತಿದೆ. ಅತ್ಯಾಧುನಿಕ ಯಂತ್ರೋಪಕರಣಗಳು, ತಜ್ಞ ವೈದ್ಯರನ್ನು ಒಳಗೊಂಡ ಮಲ್ಟಿ ಸೂಪರ್ಸ್ಪೆಶಾಲಿಟಿ ಆಸ್ಪತ್ರೆಯೊಂದು ನಗರದಲ್ಲಿ ಆರಂಭವಾಗುತ್ತಿದ್ದು, ದಿನದ 24 ಗಂಟೆ ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸೆ ಒದಗಿಸಲಿದೆ ಎಂದು ಡಾ. ಜ್ಯೋತಿಪ್ರಕಾಶ್ ಸುಲ್ತಾನಪುರಿ ಹಾಗೂ ಡಾ.ಶ್ರೀಕಂಠ ರಾಮನಗೌಡರ ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
21 ರಂದು ಬೆಳಿಗ್ಗೆ 11 ಗಂಟೆಗೆ ನಗರದ ರಪಾಟಿ ಕಲ್ಯಾಣ ಮಂಟಪದಲ್ಲಿ ಯುನಿಟಿ ಆಸ್ಪತ್ರೆಯ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಕೊಪ್ಪಳ ಗವಿಸಿದ್ಧೇಶ್ವರ ಸಂಸ್ಥಾನ ಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಉದ್ಘಾಟಿಸಲಿದ್ದಾರೆ.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಸಚಿವ ಶಂಕರ್ಪಾಟೀಲ ಮುನೇನಕೊಪ್ಪ, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಪ್ರಸಾದ್ ಅಬ್ಬಯ್ಯ, ಸಿ.ಎಂ. ನಿಂಬಣ್ಣವರ, ಮೇಯರ್ ಈರೇಶ್ ಅಂಚಟಗೇರಿ, ಮಾಜಿ ಶಾಸಕರಾದ ಸೀಮಾ ಮಸೂತಿ, ಎನ್.ಎಚ್. ಕೋನರೆಡ್ಡಿ, ವೈಶುದೀಪ ಫೌಂಡೇಶನ್ ಅಧ್ಯಕ್ಷೆ ಶಿವಲೀಲಾ ಕುಲಕರ್ಣಿ, ಅಂಜುಮನ್ ಸಂಸ್ಥೆ ಮಾಜಿ ಅಧ್ಯಕ್ಷ ಇಸ್ಮಾಯಿಲ್ ತಮಾಟಗಾರ ಭಾಗವಹಿಸಲಿದ್ದಾರೆಂದರು.
ಯುನಿಟಿ ಆಸ್ಪತ್ರೆಯಿಂದಾಗಿ ಪೇಡೆನಗರಿ ಹಾಗೂ ಬಹುದೊಡ್ಡ ಕೊರತೆಯೊಂದು ಇದೀಗ ನೀಗಿದಂತಾಗಿದೆ. ಜನರಿಗೆ ಎಲ್ಲ ಬಗೆಯ ಚಿಕಿತ್ಸೆಯು ಸುಲಭದಲ್ಲಿ ದೊರೆಯಲು ಸಾಧ್ಯವಾಗಲಿದೆ ಎಂದರು.
ಆಸ್ಪತ್ರೆಯಲ್ಲಿ ಹೃದ್ರೋಗಕ್ಕೆ ಸಂಬಂಧಿಸಿದ ಚಿಕಿತ್ಸೆ ನೀಡಲು ಕಾರ್ಡಿಯಾಕ್ ಕ್ಯಾಥ್ ಲ್ಯಾಬ್ ಇರಲಿದ್ದು, ಆಯಂಜಿಯೋಗ್ರಾಫಿ, ಆಯಂಜಿಯೊಪ್ಲಾಸ್ಟಿಗಳನ್ನು ಮಾಡಲಾಗುತ್ತದೆ. ನರರೋಗಕ್ಕೆ ಸಂಬಂಧಿಸಿದಂತೆ ನ್ಯುರೋಸರ್ಜರಿ ವಿಭಾಗವೂ ಇರಲಿದ್ದು, ನರರೋಗಕ್ಕೆ ಸಂಬಂಧಿಸಿದ ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗುತ್ತಿದೆ. ಇದರ ಜೊತೆಗೆ ತೀವ್ರ ನಿಗಾ ಘಟಕ, ಶಿಶು ತೀವ್ರ ನಿಗಾ ಘಟಕ, ಕ್ಯಾನ್ಸರ್ ವಿಭಾಗ, ಮೂತ್ರಕೋಶಕ್ಕೆ ಸಂಬಂಧಿಸಿದ ನೆಫ್ರಾಲಜಿ ವಿಭಾಗ, ಹೊಟ್ಟೆಗೆ ಸಂಬಂಧಿಸಿದ ಗ್ಯಾಸ್ಟೋಎಂಟ್ರೋಲಜಿ ವಿಭಾಗ, ಮೂತ್ರನಾಳದ ಚಿಕಿತ್ಸೆಗಾಗಿ ಯುರೋಲಜಿ, ತುರ್ತು ಡಯಾಲಿಸಿಸ್ ಘಟಕ, ತುರ್ತು ಟ್ರಾಮಾ ಸೆಂಟರ್ ಹಾಗೂ ನೋವು ನಿವಾರಕ ಚಿಕಿತ್ಸಾಲಯಗಳು ಒಂದೇ ಸೂರಿನಡಿ ಲಭ್ಯವಾಗಲಿವೆ.
ಇಸಿಜಿ, ಗಣಕೀಕೃತ ಒತ್ತಡ ತಪಾಸಣೆ, 2 ಡಿ ಕಲರ್ ಡಾಪ್ಲರ್, ಇಕೋ, ಅಲ್ಟ್ರಾಸೌಂಡ್, 24 ಗಂಟೆ ರಕ್ತದೊತ್ತಡ ನಿರ್ವಹಣೆ, ಫೋಟೋ ಥೆರಪಿ, ವೆಂಟಿಲೇಟರ್, ಆಕ್ಸಿಜನ್ ಜನರೇಟರ್, ಕೇಂದ್ರಿಕೃತ ಆಮ್ಲಜನಕ ವ್ಯವಸ್ಥೆ, ಶಿಶುಗಳ ಶ್ರವಣ ಪರೀಕ್ಷೆ ಸೇರಿದಂತೆ ಅಗತ್ಯವಿರುವ ಎಲ್ಲ ಸೌಲಭ್ಯಗಳು ಇಲ್ಲಿ ದೊರೆಯಲಿವೆ.
ಒಳರೋಗಿ ವಿಭಾಗವು ಮಾರಾಠ ಕಾಲೋನಿಯ ಟಿವಿಎಸ್ ಶೋರೂಮ್ ಹಿಂಭಾಗದಲ್ಲಿದ್ದು, ಹೊರರೋಗಿ ವಿಭಾಗವು ಟ್ರೇನಿಂಗ್ ಕಾಲೇಜು ರಸ್ತೆಯ ಸಾಯಿ ಫರ್ನಿಚರ್ ಬಿಲ್ಡಿಂಗ್ ನಲ್ಲಿ ಕಾರ್ಯ ನಿರ್ವಹಿಸಲಿವೆ ಎಂದು ತಿಳಿಸಿದರು.
ಆಸ್ಪತ್ರೆಯ ಎಲ್ಲ ನಿರ್ದೇಶಕರು ಹಾಗೂ ಎಲ್ಲ ತಜ್ಞರ ಗೋಷ್ಠಿಯಲ್ಲಿದ್ದರು.
ತಜ್ಞ ವೈದ್ಯರುಗಳ ಪಡೆ
ಹೃದ್ರೋಗ ವಿಭಾಗದಲ್ಲಿ ಡಾ.ಚೌಡಪ್ಪ ಎಸ್ ಶಂಕಪುರ, ಕ್ಯಾನ್ಸರ್ ವಿಭಾಗದಲ್ಲಿ ಡಾ. ಸಂತೋಷ ಚಿಕ್ಕರೆಡ್ಡಿ, ಮೂತ್ರಕೋಶ ವಿಭಾಗದಲ್ಲಿ ಡಾ. ಚೇತನ ಮುದ್ರಬೆಟ್ಟು, ಶಿಶು ಚಿಕಿತ್ಸಾ ವಿಭಾಗದಲ್ಲಿ ಡಾ.ಅಂಬೇಶ್ ಪ್ರಸಾದ್ ಮೊಹಿತೆ, ದವಡೆಗೆ ಸಂಬಂಧಿಸಿದ ವಿಭಾಗದಲ್ಲಿ ಡಾ. ಶೀತಲ್ಕುಮಾರ್, ನ್ಯುರೋಸರ್ಜರಿ ವಿಭಾಗದಲ್ಲಿ ಡಾ.ಸುನೀಲ್ ಮಳಗಿ, ಅರವಳಿಕೆ ಹಾಗೂ ತೀವ್ರ ಚಿಕಿತ್ಸೆ ವಿಭಾಗದಲ್ಲಿ ಡಾ. ಸಂತೋಷ್ ಚಕ್ರಸಾಲಿ, ಡಾ. ಪ್ರವೀಣ್ಕುಮಾರ್ ಬಿ., ಡಾ. ಪರಮೇಶ್ವರ ಕೆಂಚಣ್ಣವರ, ಆಂತರಿಕ ಔಷಧ ವಿಭಾಗದಲ್ಲಿ ಡಾ.ಎಸ್.ಆರ್. ಜಂಬಗಿ, ಡಾ. ಮೊಹಮ್ಮದ್ ಇಕ್ಬಾಲ್ ಎ. ಶೇಖ್, ಡಾ. ಪ್ರಕಾಶ ರಾಮನಗೌಡರ, ಡಾ.ಅಮೃತ ಮಹಾಬಲಶೆಟ್ಟಿ, ಡಾ. ನೀಲಕಂಠ ಪಾಟೀಲ, ಡಾ. ಜಗದೀಶ್ ನಾಯಕ್, ಡಾ. ಅಮಿತ ಎಸ್. ಗಲಗಲಿ, ಡಾ. ಆದಿತ್ಯ ಪಾಂಡುರಂಗಿ, ಎಲುವು ಮತ್ತು ಕೀಲು ವಿಭಾಗದಲ್ಲಿ ಡಾ. ಜ್ಯೋತಿಪ್ರಕಾಶ್ ಎಂ. ಸುಲ್ತಾನಪುರಿ, ಡಾ. ಶ್ರೀಕಂಠ ರಾಮನಗೌಡರ ಡಾ. ನವೀನ ಮಂಕಣಿ, ಡಾ. ಸಪನ್ ಡಿ.ಎಸ್. ಡಾ. ರಾಮಚಂದ್ರ ಅನೆಹೊಸೂರು, ಕಿವಿ, ಗಂಟಲು, ಮೂಗು ವಿಭಾಗದಲ್ಲಿ ಡಾ. ಅನಿಕೇತ್ ಪಾಂಡುರಂಗಿ, ಡಾ. ಭಾವನಾ ಮಲ್ಹೋತ್ರಾ ಕಾರ್ಯ ನಿರ್ವಹಿಸಲಿದ್ದಾರೆ