ರಾಜ್ಯದ ದೊರೆ ಬೊಮ್ಮಾಯಿ ಸಹಿತ ಗಣ್ಯರು ಭಾಗಿ
ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ದಿ. ಎಸ್.ಆರ್. ಬೊಮ್ಮಾಯಿ ಅವರ ನಿಕಟವರ್ತಿಗಳು,ಎರಡು ಬಾರಿ ಮಹಾನಗರ ಪಾಲಿಕೆ ಸದಸ್ಯರಾಗಿದ್ದ ಅಲ್ಲದೇ ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಮೌಲ್ಯಾಧಾರಿತ ರಾಜಕಾರಣಕ್ಕೆ ಮಾದರಿಯಾಗಿದ್ದ ಲಿಂ.ವೇ.ಮೂ.ಕಾಡಯ್ಯ ಗು.ಹಿರೇಮಠರ 81ನೇ ಜನ್ಮ ಸಂಸ್ಮರಣ ದಿನಾಚರಣೆಯನ್ನು ಅತ್ಯಂತ ಅರ್ಥಪೂರ್ಣವಾಗಿ ದಿ.6ರಂದು ಆಚರಿಸಲು ನಿರ್ಧರಿಸಲಾಗಿದೆ.
ಸಂಗೀತ,ಸಾಹಿತ್ಯ,ನಾಟಕ ಹಾಗೂ ಜಾನಪದ ಕಾರ್ಯಕ್ರಮಗಳಿಗೆ ಬೆನ್ನೆಲುಬಾಗಿದ್ದ ಎಲ್ಲರಿಂದಲೂ ಕಾಡಯ್ಯಜ್ಜ ಎಂದೇ ಕರೆಸಿಕೊಳ್ಳುತ್ತಿದ್ದ ಇವರ ’ಕಂಚಿನ ಪುತ್ಥಳಿ ಅನಾವರಣ’ ಹಾಗೂ ’ಮಾನವೀಯ ಮೂರ್ತಿ’ ಸಂಸ್ಮರಣ ಗ್ರಂಥ ಬಿಡುಗಡೆ ಮತ್ತು ಧರ್ಮ ಸಮಾರಂಭ ದಿ. 6ರಂದು ಬೆಳಿಗ್ಗೆ 11 ಗಂಟೆಗೆ ನಗರದ ಕುಸುಗಲ್ಲ ರಸ್ತೆಯ ಕೆ.ಜಿ.ಗಾರ್ಡನ್‌ನಲ್ಲಿ ನಡೆಯಲಿದೆ.
ಕಾಡಯ್ಯನವರು ಹಿರೇಮಠ ಜನ್ಮ ಸಂಸ್ಮರಣ ಸಮಿತಿಯಯ ಆಶ್ರಯದಲ್ಲಿ ನಡೆಯಲಿರುವ ಕಾರ್ಯಕ್ರಮಗಳ ವಿವರಗಳನ್ನು ಪತ್ರಿಕಾಗೋಷ್ಟಿಯಲ್ಲಿಂದು ನೀಡಿದ ಅವರ ಪುತ್ರ ಬಸಯ್ಯ ಹಿರೇಮಠ ರಂಭಾಪುರಿ ಪೀಠದ ಜಗದ್ಗುರು ಡಾ.ವೀರಸೋಮೇಶ್ವ ಶಿವಾಚಾರ್ಯರ ಸಾನಿಧ್ಯ ಹಾಗೂ ಸುಳ್ಳದ ಶಿವಸಿದ್ಧರಾಮೇಶ್ವ ಶಿವಾಚಾರ್ಯರ ಸಮ್ಮುಖದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸೂಡಿಯ ಡಾ.ಕೊಟ್ಟೂರ ಬಸವೇಶ್ವರ ಶಿವಾಚಾರ್ಯರು ಉಪದೇಶಾಮೃತ ನೀಡಲಿದ್ದು, ಶಿರಕೋಳದ ಗುರುಸಿದ್ಧೇಶ್ವರ ಶಿವಾಚಾರ್ಯರು, ಅಮ್ಮಿನಭಾವಿಯ ಅಭಿನವ ಶಾಂತಲಿಂಗ ಶಿವಾಚಾರ್ಯರು, ಹಾವೇರಿಯ ಅಭಿನವ ರುದ್ರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ಉಪಸ್ಥಿತರಿರುವರು ಎಂದರು.
ರಾಜ್ಯದ ದೊರೆ ಬಸವರಾಜ ಬೊಮ್ಮಾಯಿ ಅವರು ಕಂಚಿನ ಪುತ್ಥಳಿ ಅನಾವರಣಗೊಳಿಸಲಿದ್ದು, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಮಾಜಿ ಸಿಎಂ ಜಗದೀಶ ಶೆಟ್ಟರ ’ಮಾನವೀಯ ಮೂರ್ತಿ’ ಸಂಸ್ಮರಣ ಗ್ರಂಥವನ್ನು ಬಿಡುಗಡೆಗೊಳಿಸುವರು. ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಸಚಿವರಾದ ಸಿ.ಸಿ.ಪಾಟೀಲ, ಶಂಕರಪಾಟೀಲ ಮುನೇನಕೊಪ್ಪ ಸೇರಿದಂತೆ ಗಣ್ಯರು ಆಗಮಿಸಲಿದ್ದಾರೆ.
ಸಮಾಜದಲ್ಲಿ ಯಾವುದೇ ಅನ್ಯಾಯವಾಗಲಿ ಸಿಡಿದು ನಿಲ್ಲುತ್ತಿದ್ದ ಮನೋಭಾವದವರಾದ ಕಾಡಯ್ಯ ಹಿರೇಮಠರು ಬದುಕಿನುದ್ದಕ್ಕೂ ಮಾದರಿ ಬದುಕು ಸವೆಸಿದ್ದು ಹೂಬಳ್ಳಿಯ ಜನ ಮನದಲ್ಲಿ ತಮ್ಮದೇ ಹೆಜ್ಜೆ ಗುರುತು ಬಿಟ್ಟು ಹೋಗಿದ್ದು ಕಾರ್ಯಕ್ರಮಕ್ಕೆ ವೀರಶೈವ ಸದ್ಬೋದನಾ ಸಮಿತಿ, ರಂಭಾಪುರೀಶ ಸಾಂಸ್ಕೃತಿಕ ಸೇವಾ ಸಂಘ, ಪಾರ್ವತಿ ಮಹಿಳಾ ಮಂಡಳ, ಬಸವಣ್ಣದೇವರ,ಹನಮಂತದೇವರ,ಗ್ರಾಮದೇವಿ ಸೇವಾ ಸಮಿತಿ,ಜೀವಿ ಕಲಾಬಳಗಗಳು ಕೈ ಜೋಡಿಸಿವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಗದಿಗೆಯ್ಯಾ ಹಿರೇಮಠ, ಆರ್.ಎಂ.ಹಿರೇಮಠ,ಇಂದುಮತಿ ಮಾನ್ವಿ ಸೇರಿದಂತೆ ಅನೇಕರಿದ್ದರು.