ಹುಬ್ಬಳ್ಳಿ-ಧಾರವಾಡ ಸುದ್ದಿ

ವೀರಶೈವ-ಲಿಂಗಾಯತ ಮಹಾಸಭಾ ಚುನಾವಣೆ: ಯಾರು ಹಿತವರು ಈ ಮೂವರೊಳಗೆ !

ಧಾರವಾಡ: ಇದೀಗ ಧಾರವಾಡ ಜಿಲ್ಲೆಯಾದ್ಯಂತ ವೀರಶೈವ ಲಿಂಗಾಯತ ಮಹಾಸಭೆಯ ಚುನಾವಣೆಯದ್ದೇ ಚರ್ಚೆ. ಶತಮಾನೋತ್ಸವ ಕಂಡ ರಾಜ್ಯದ ವೀರಶೈವ ಲಿಂಗಾಯತ ಮಹಾಸಭೆಗೆ ತನ್ನದೇ ಆದ ಪರಂಪರೆಯಿದೆ. ಸಾಂಸ್ಕೃತಿಕ ಚರಿತ್ರೆ ಇದೆ. ಜನ ಸಮುದಾಯವೇ ಹಾದಿ ತಪ್ಪುವ ಸಂದರ್ಭದಲ್ಲಿ ಧರ್ಮೋದ್ಧಾರಕರಾಗಿ ಬಂದ ಹಾನಗಲ್ಲ ಗುರು ಶ್ರೀ ಕುಮಾರೇಶ್ವರ ಮಹಾಸ್ವಾಮಿಗಳಿಂದ ಸ್ಥಾಪನೆಯಾದ ವೀರಶೈವ ಲಿಂಗಾಯತ ಮಹಾಸಭೆಯು ಧರ್ಮದ ಉಳಿವಿಗಾಗಿ ಜನಾಂಗದ ಅಭಿವೃದ್ಧಿಗಾಗಿ ನಿರಂತರ ಶ್ರಮಿಸುತ್ತ ಬಂದಿರುವುದು ಈಗ ಚರಿತ್ರಾರ್ಹ ಸಂಗತಿ.

ಕಾಲಕಾಲಕ್ಕೆ ಈ ಮಹಾಸಭೆಯ ಧ್ಯೇಯ ಧೋರಣೆಗಳನ್ನು ಅನುಷ್ಠಾನ ಗೊಳಿಸಲು ಸಮಾಜದ ಹಿತ ಕಾಪಾಡಲು ಅಂದಂದಿನ ಪೂಜ್ಯರು ಹಾಗೂ ಹಿರಿಯರು ಪಟ್ಟ ಪರಿಶ್ರಮ ,ಸಲ್ಲಿಸಿದ ಸೇವೆ, ಮಾಡಿದ ತ್ಯಾಗ ಮತ್ತು ಸಾಮಾಜಿಕ ಕಳಕಳಿಗಳು ಇಂದಿಗೂ ಸಮಾಜದ ಅಭಿವೃದ್ಧಿಗೆ ದಾರಿ ದೀಪ ಗಳಾಗಿವೆ. ಅದಕ್ಕಾಗಿ ಈ ಎಲ್ಲ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ,ಶ್ರಮ ಸಂಸ್ಕೃತಿಯ ನಾಯಕನೊಬ್ಬನ ಅವಶ್ಯಕತೆ ಈಗಂತೂ ಬಹಳವಿದೆ. ಈ ನಿಟ್ಟಿನಲ್ಲಿ ಆ ಮನೋಭಾವದ ವ್ಯೆಕ್ತಿಯ ಹುಡುಕಾಟದಲ್ಲಿ ವೀರಶೈವ ಲಿಂಗಾಯತ ಮಹಾಸಭೆಯ ಮತದಾರರು ಬಹಳಷ್ಟು ಆಲೋಚಿಸಬೇಕಾಗಿದೆ.

ಬರೀ ಕಟ್ಟಡ, ಸಮಾರಂಭಗಳ ಅದ್ದೂರಿಗಿಂತ ಸಮುದಾಯದ ಕ್ಷೇಮಾಭಿವೃದ್ಧಿ ಕೈಕೊಳ್ಳುವ, ಸ್ವಾರ್ಥಕ್ಕಿಂತ ಸಮಾಜಮುಖಿ ಸೇವಾ ಗುಣಗಳನ್ನು ಹೊಂದಿದ ವ್ಯಕ್ತಿಯನ್ನು ಆಯ್ಕೆ ಮಾಡುವ ಹೊಣೆಗಾರಿಕೆ ಜಿಲ್ಲೆಯ ವೀರಶೈವ -ಲಿಂಗಾಯತ ಮಹಾಸಭೆಯ ಮತದಾರರ ಮೇಲಿದೆ. ಸಾಮುದಾಯಿಕ ಕ್ಷೇಮವನ್ನು ಮೂಲೆಗೊತ್ತಿ, ವೈಯಕ್ತಿಕ ಪ್ರತಿಷ್ಠೆಗಳತ್ತ ಗಮನ ಹರಿಸಿ, ಮಹಾಸಭೆಯನ್ನು ದುರೂಪಯೋಗ ಮಾಡಿಕೊಳ್ಳುವ ಜನರಿಂದ ದೂರವಿಡುವತ್ತವೂ ಮತದಾರರು ಚಿಂತನೆ ಮಾಡಬೇಕಾದ ಅಗತ್ಯತೆ ಬಹಳವಿದೆ.

ಅದಕ್ಕಾಗಿ ನಾನು ಪ್ರಾಮಾಣಿಕವಾಗಿ ದುಡಿದಿದ್ದೇನೆ. ಸಾಕಷ್ಟು ಕೆಲಸ ಮಾಡಿದ್ದೇನೆ. ಇನ್ನೂ ಮುಂದೆಜ ಮಾಡುವುದು ಬಹಳವಿದೆ. ಅದಕ್ಕಾಗಿ ನನ್ನ ಬಳಿ ಸಮಯ, ಸಕಲವೂ ಇದೆ ಎಂದು ಹೇಳುವವ ಒಬ್ಬ. ನನಗೆ ದೊಡ್ಡ ದೊಡ್ಡವರ ಮತ್ತು ಸಮಾಜದವರ ಬೆಂಬಲವಿದೆ. ಈ ಬಾರಿ ನನಗೆ ಅವಕಾಶ ಕೊಟ್ಟರೆ ಎಲ್ಲವನ್ನೂ ನಿಭಾಯಿಸಬಲ್ಲೆ ಎನ್ನುವವನೊಬ್ಬ, ನಾನು ಬಡವ, ನನಗೆ ರಾಜಕೀಯ ಶಕ್ತಿಯೂ ಇಲ್ಲ. ವೀರಶೈವ ಲಿಂಗಾಯತ ಬಂಧುಗಳೇ ನನ್ನ ಆಸ್ತಿ, ನನ್ನನ್ನು ಮತ್ತು ನನ್ನ ತಂಡವನ್ನು ಆಯ್ಕೆ ಮಾಡಿದರೆ ಸಮಾಜಕ್ಕಾಗಿ ಅಹರ್ನಿಶಿ ದುಡಿಯುವೆನೆಂದು ಹಂಬಲಿಸುವ ಮಗದೊಬ್ಬ ಈಗ ಮತದಾರರ ಎದುರಿಗಿದ್ದಾರೆ.

ಹೀಗೆ ಮೂರು ದಾರಿಯ ಮಧ್ಯದಲ್ಲಿ ನಿಂತಿರುವ ಮಹಾಸಭೆಯ ತೇರನ್ನು ಸಮಾಜದ ಸದಸ್ಯ ಮತದಾರ ಪ್ರಭುಗಳು ಯಾರ ನೇತೃತ್ವದ ತಂಡಕ್ಕೆ ವಹಿಸಿ ಕೊಡುವರೋ ಎಂಬುದನ್ನು ಇದೇ ತಿಂಗಳು 21ರ ಸಂಜೆಯವರೆಗೂ ಕಾದು ನೋಡಬೇಕಷ್ಟೇ.

administrator

Related Articles

Leave a Reply

Your email address will not be published. Required fields are marked *