ಅಭ್ಯರ್ಥಿ ಆಯ್ಕೆಗೆ ನಾಳೆ ಸಿಎಂ, ಡಿಸಿಎಂ ದಿಲ್ಲಿಗೆ
ಕೈ ಪಡೆಯಲ್ಲಿ ಶತಕ ದಾಟಿದ ಆಕಾಂಕ್ಷಿಗಳು
ಹುಬ್ಬಳ್ಳಿ: ವಿಧಾನಪರಿಷತ್‌ನ ಅಭ್ಯರ್ಥಿಗಳ ಆಯ್ಕೆ ಸಂಬಂಧ ಕಾಂಗ್ರೆಸ್ ಪಾಳೆಯದಲ್ಲಿ ಪೈಪೋಟಿ ವ್ಯಾಪಕವಾಗಿದ್ದು ಜಾತಿ, ಪ್ರಾದೇಶಿಕ ಲೆಕ್ಕಾಚಾರ ತೀವ್ರಗೊಂಡಿದ್ದು ಏಳು ಸ್ಥಾನ ಕಾಂಗ್ರೆಸ್ ಗೆಲುವು ನಿಚ್ಚಳವಾಗಿದ್ದು, ಅಲ್ಪಸಂಖ್ಯಾತ ಸಮುದಾಯಕ್ಕೆ ಎರಡು ಸ್ಥಾನ ನಿಕ್ಕಿ ಎನ್ನಲಾಗುತ್ತಿದೆ.
ಅಲ್ಪಸಂಖ್ಯಾತರ ಕೋಟಾದಲ್ಲಿ ಉತ್ತರ ಕರ್ನಾಟಕ ಮತ್ತೂ ದಕ್ಷಿಣ ಕರ್ನಾಟಕ ತಲಾ ಒಂದು ದಕ್ಕುವ ಸಾಧ್ಯತೆಗಳಿದ್ದು ಎರಡೂ ಮುಸ್ಲಿಂ ಸಮುದಾಯಕ್ಕೆ ನೀಡಲಾಗುವುದೋ ಒಂದನ್ನು ಕ್ರಿಶ್ಚಿಯನ್ನರಿಗೆ ನೀಡುವರೋ ಎಂಬ ಚಿಂತನೆಯೂ ಪಕ್ಷದ ವಲಯದಲ್ಲಿದೆ.
ಉತ್ತರದ ಪ್ರಾತಿನಿಧ್ಯದಲ್ಲಿ ಎರಡನೇ ರಾಜಧಾನಿ ಹಿರಿಮೆಯ ಹುಬ್ಬಳ್ಳಿ ಧಾರವಾಡ ಮಹಾನಗರದ ಅನೇಕ ಪ್ರಮುಖ ಮುಸ್ಲಿಂ ನಾಯಕರ ಹೆಸರು ಪ್ರಸ್ತಾಪಕ್ಕೆ ಬಂದಿದೆ ಎನ್ನಲಾಗಿದೆ.
ಹುಬ್ಬಳ್ಳಿ ಅಂಜುಮನ್ ಸಂಸ್ಥೆ ಅಧ್ಯಕ್ಷರಾಗಿರುವ ಮಾಜಿ ಸಚಿವ ಎ.ಎಂ.ಹಿಂಡಸಗೇರಿ, ಧಾರವಾಡ ಅಂಜುಮನ್ ಸಂಸ್ಥೆ ಅಧ್ಯಕ್ಷರಾಗಿರುವ ಇಸ್ಮಾಯಿಲ್ ತಮಟಗಾರ ಮಹಾನಗರ ಕಾಂಗ್ರೆಸ ಅಧ್ಯಕ್ಷ ಅಲ್ತಾಫ್ ಹಳ್ಳೂರ ಮುಂತಾದವರ ಹೆಸರುಗಳು ಮುನ್ನೆಲೆಗೆ ಬಂದಿದೆ.
ಸಚಿವ ಜಮೀರ್ ಅಹ್ಮದಖಾನ ನೇತೃತ್ವದಲ್ಲಿ ಅಲ್ಪಸಂಖ್ಯಾತ ಮುಸ್ಲಿಮ್ ಸಮುದಾಯದ ಶಾಸಕರು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರರನ್ನು ಭೇಟಿ ಮಾಡಿದ್ದು, ಮುಸ್ಲಿಮ್ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ನೀಡುವಂತೆ ಮನವಿಯನ್ನು ಈಗಾಗಲೇ ಮಾಡಿದ್ದಾರೆ.
ಆಕಾಂಕ್ಷಿಗಳೆಲ್ಲರೂ ಪಕ್ಷದ ವರಿಷ್ಠರ ಮೇಲೆ ಒತ್ತಡ ಹಾಕಿಸಲಾರಂಭಿಸಿದ್ದು ಪಟ್ಟಿ ದಿಲ್ಲಿಯಲ್ಲೇ ಅಂತಿಮಗೊಳ್ಳಲಿದೆ.ಅಲ್ಪಸಂಖ್ಯಾತರ ಹೊರತು ಪಡಿಸಿ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನೀಲಕುಮಾರ ಪಾಟೀಲ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಬರ್ಟ ದದ್ದಾಪುರಿ ಅವರಿಗೆ ಪರಿಷತ್ ಸ್ಥಾನ ನೀಡಬೇಕೆಂಬ ಕೂಗೂ ಕೇಳಿ ಬಂದಿದೆ.