ಶ್ರೀಗಳ ಆಶೀರ್ವಾದ, ಮುಖಂಡರ,ಅಭಿಮಾನಿಗಳ ಅಭಯ;
ಹರಿದು ಬಂದ ಜನಸಾಗರ
ಚನ್ನಮ್ಮನ ಕಿತ್ತೂರ : ಸೋಮವಾರ ಈ ಐತಿಹಾಸಿಕ ನೆಲದಲ್ಲಿ ನಡೆದ ಮಾಜಿ ಸಚಿವ ವಿನಯ ಕುಲಕರ್ಣಿಯವರ ಜನ್ಮದಿನ ಸಮಾರಂಭ ಮಿನಿ ಸಿದ್ದರಾಮೋತ್ಸವ ಎಂಬಂತೆ ಭಾಸವಾಯಿತಲ್ಲದೆ ಉತ್ತರ ಕರ್ನಾಟಕದ ಪ್ರಮುಖ ಮಠಾಧೀಶರ ಅವರ ಗೆಲುವಿಗಾಗಿ ಹಾರೈಸಿದರಲ್ಲದೇ, ಕಾಂಗ್ರೆಸ್ ಪಕ್ಷದ ಘಟಾನುಘಟಿ ನಾಯಕರುಗಳು ಬಿಜೆಪಿ ಅವರನ್ನು ಅಪರಾಧಿ ಎಂದು ಬಿಂಬಿಸಲು ಹೊರಟಿದೆ.
ಆದರೆ ಜನರ ಹೃದಯದಿಂದ ದೂರಮಾಡಲು ಸಾಧ್ಯವಿಲ್ಲ ಎಂಬುದು ಇಂದು ಸಾಭೀತಾಗಿದೆ ಎಂದು ಒಕ್ಕೊರಲಿನಿಂದ ಹೇಳಿದರು.
ವಿನಯ ಕುಲಕರ್ಣಿಯವರ 54ನೇ ಜನ್ಮದಿನದಂಗವಾಗಿ ಆಯೋಜಿಸಿದ್ದ ಜನ ನಮನದಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಭ್ರಷ್ಟ, ಕೋಮುವಾದಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಬೇಡಿ, ಒಂದು ವೇಳೆ ಬಿಜೆಪಿ ಅಧಿಕಾರಕ್ಕೆ ಬಂದರೆ ಕರ್ನಾಟಕ ಉಳಿಯಲ್ಲ ನೀವೂ ಉಳಿಯಲ್ಲ. ಪ್ರಭಾಪ್ರಭುತ್ವ, ಸಂವಿಧಾನ ಉಳಿಯಲ್ಲ, ಅದಕ್ಕಾಗಿ ಕಾಂಗ್ರೆಸ್‌ನ್ನು ಅಧಿಕಾರಕ್ಕೆ ತರಬೇಕು ಎಂದು ಮನವಿ ಮಾಡಿದರು.
2023ಕ್ಕೆ ನಾವು ಮತ್ತೆ ಅಧಿಕಾರಕ್ಕೆ ಬರಬೇಕಾದರೆ ನೀವು ತೀರ್ಮಾನ ಮಾಡಬೇಕು. 40 ಪರ್ಸೆಂಟೆಜ್ ಸರ್ಕಾರ ಬೇಕಾ ಇಲ್ಲವೇ ಕಿತ್ತು ಹಾಕಬೇಕಾ ಎಂಬುದನ್ನು ನೀವು ತೀರ್ಮಾನ ಮಾಡಬೇಕು. ಜನರ ತೀರ್ಪೇ ಅಂತಿಮ. ನಿಮ್ಮ ತೀರ್ಪಿನ ಮೇಲೆ ನಂಬಿಕೆ ಇಟ್ಟವರು ಕಾಂಗ್ರೆಸ್‌ನವರು ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮಾತನಾಡಿ ನಮ್ಮ ಪಕ್ಷದ ಜಾಲತಾಣಗಳನ್ನು ಬಂದ್ ಮಾಡಿಸಿದರು. ನಮ್ಮೆಲ್ಲರನ್ನು ಜೈಲಿಗಟ್ಟಿದರೂ ಜನರ ಮನದಲ್ಲಿ ನಾವಿದ್ದೇವೆ. ರಾಹುಲ್ ಗಾಂಧಿ ಎಲ್ಲದಕ್ಕೂ ಸಿದ್ಧರಾಗಿದ್ದಾರೆ.ತಾಕತ್ತಿದ್ದರೆ ಜನರ ಹೃದಯದಿಂದ ನಮ್ಮನ್ನು ತೆಗೆಯಿರಿ ಎಂದು ಸವಾಲು ಹಾಕಿದರಲ್ಲದೇ ಭೃಷ್ಟಾಚಾರದಲ್ಲಿ ಮುಳುಗಿರುವ ಬಿಜೆಪಿ ಸರ್ಕಾರದಿಂದ ಮುಕ್ತಿ ಕೊಡುವುದೇ ನಮ್ಮ ಗುರಿ ಎಂದರು.
ವಿನಯ ಕುಲಕರ್ಣಿಗೆ ಸನ್ಮಾನ ಮಾಡಿ ವಿವಿಧ ಮಠಾಧೀಶರು ತೆರಳಿದರು. ವೇದಿಕೆ ಮೇಲೆ ರಾಜಕೀಯ ನಾಯಕರು ಆಗಮಿಸು ತ್ತಿದ್ದಂತೆ ವಿನಯ ಕುಲಕರ್ಣಿಗೆ ಸನ್ಮಾನಿಸಿ ಮಠಾಧೀಶರು ತೆರಳಿದರು. ಗದಗ- ಡಂಬಳ ತೋಂಟದಾರ್ಯ ಮಠದ ಡಾ.ತೋಂಟದ ಸಿದ್ದರಾಮ ಸ್ವಾಮೀಜಿ, ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ, ಕೂಡಲಸಂಗಮ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಸೇರಿದಂತೆ ನೂರಾರು ಮಠಾಧೀಶರು ವಿನಯ ಕುಲಕರ್ಣಿಗೆ ಆಶೀರ್ವದಿಸಿದರು.
ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ, ವಿನಯ್ ಕುಲಕರ್ಣಿ ಪತ್ನಿ ಶಿವಲೀಲಾ ಕುಲಕರ್ಣಿ, ಶಾಸಕರಾದ ಲಕ್ಷ್ಮೀ ಹೆಬ್ಬಾಳಕರ, ಅಂಜಲಿ ನಿಂಬಾಳಕರ, ಸಲೀಂ ಅಹ್ಮದ, ಶ್ರೀನಿವಾಸ ಮಾನೆ, ಮಹಾಂತೇಶ ಕೌಜಲಗಿ, ಪ್ರಸಾದ ಅಬ್ಬಯ್ಯ,ಚನ್ನರಾಜ ಹಟ್ಟಿಹೊಳಿ,ಶಿವಾನಂದ ಪಾಟೀಲ, ಮಾಜಿ ಸಚಿವರಾದ ಎ.ಬಿ.ಪಾಟೀಲ, ಡಿ.ಬಿ.ಇನಾಂದಾರ, ಹಾಗೂ ಬಾಬಾಸಾಹೇಬ ಪಾಟೀಲ, ವಿಜಯಾನಂದ ಕಾಶಪ್ಪನವರ, ರೋಹಿಣಿ ಬಾಬಾಸಾಹೇಬ ಪಾಟೀಲ, ವೀಣಾ ಕಾಶಪ್ಪನವರ, ಚನ್ನರಾಜ ಹಟ್ಟಿಕೊಳಿ, ಸಂತೋಷ ಲಾಡ್ ಫೌಂಡೇಶನ್ ಅಧ್ಯಕ್ಷ ಆನಂದ ಕಲಾಲ, ಅನೀಲಕುಮಾರ ಪಾಟೀಲ, ಸದಾನಂದ ಡಂಗನವರ, ಅಲ್ತಾಫ ಕಿತ್ತೂರ, ಅಲ್ತಾಫ್ ಹಳ್ಳೂರ, ದೇವಕಿ, ಸೇರಿದಂತೆ ಇತರರು ಇದ್ದರು.
ನಿಮ್ಮ ಋಣ ಮರೆಯಲಾರೆ
ನಾನು ಜಿಲ್ಲೆಯಿಂದ ಕಾರಣಾಂತರಗಳಿಂದ ಹೊರಗಿದ್ದೇನೆ.ಆದರೆ ನಿಮ್ಮೆಲ್ಲರ ಹೃದಯದಿಂದ ನನ್ನನ್ನು ಯಾರೂ ಹೊರಗೆ ಹಾಕಲು ಸಾಧ್ಯವಿಲ್ಲ ಎಂದು ಸಮಾರಂಭದ ಕೇಂದ್ರ ಬಿಂದು ಮಾಜಿ ಸಚಿವ ವಿನಯ ಕುಲಕರ್ಣಿ ಭಾವುಕರಾಗಿ ಹೇಳಿದರಲ್ಲದೆ, ರಾಜಕೀಯದಲ್ಲಿ ಏಳು ಬೀಳು, ಸೋಲು ಗೆಲವು ಸಾಮನ್ಯ.ಯಾರು ಇಲ್ಲಿ ಕಾಯಂ ಆಗಿರಲು ಬಂದಿಲ್ಲ, ಆದರೆ ಅಧಿಕಾರದಲ್ಲಿದ್ದಾಗ ಉತ್ತಮ ಕೆಲಸಗಳು ಮಾಡಬೇಕು. ನನಗೆ ಧಾರವಾಡ ಜಿಲ್ಲೆ ಜನರು ಜಿ.ಪಂ ಸದಸ್ಯತ್ವದಿಂದ ಸಚಿವ ಸ್ಥಾನದವರೆಗೂ ಅವಕಾಶ ಕೊಟ್ಟು ಬೆನ್ನು ತಟ್ಟಿದ್ದಾರೆ.ಅವರಿಗಾಗಿ ಸಚಿವನಾಗಿದ್ದಾಗ ಅನೇಕ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಿದ್ದೇನೆ.ಅವರ ಋಣವನ್ನು ಎಂದಿಗೂ ಮರೆಯಲಾರೆ.ಈವರೆಗೂ ಮಾಡಿರುವ ಸೇವೆ ಸಾಲದು ಇನ್ನೂ ಜನಸೇವೆ ಮಾಡಲು ಮತ್ತೆ ನಿಮ್ಮ ಮನೆ ಬಾಗಿಲಿಗೆ ಬಂದೇ ಬರುತ್ತೇನೆ ಎಂದರು.॒