ಹುಬ್ಬಳ್ಳಿ: ವಿಕಲಚೇತನರು ಆತ್ಮವಿಶ್ವಾಸದಿಂದ ಸಾವಲಂಭಿಗಳಾಗಿ ಮಾಡುವಲ್ಲಿ ಬಹು ಮುಖ್ಯ ಪಾತ್ರ ವಹಿಸಿರುವ ಹುಬ್ಬಳ್ಳಿಯ ಆಲ್ ಇಂಡಿಯಾ ಜೈನ ಯುಥ್ ಫೆಡರೇಷನ್ನಿನ ಮಹಾವೀರ ಲಿಂಬ್ ಸೆಂಟರ್ನ ಚೇರಮನ್ರಾಗಿದ್ದ ವೀರೇಂದ್ರ ಜೈನ ( 57) ಇಂದು ಬೆಳಿಗ್ಗೆ ರಾಜಸ್ತಾನದಲ್ಲಿ ನಿಧನರಾದರು.
ಮೃತರು ಪತ್ನಿ, ಇಬ್ಬರು ಮಕ್ಕಳು ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಕಳೆದ 2-3 ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಜೈನ ಅವರು ಜೋದಪುರದಲ್ಲಿ ಮೃತರಾಗಿದ್ದು, ನಾಳೆ ಅವರ ಸ್ವಗ್ರಾಮ ಬರಲೂಟ್ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಕಳೆದ 25 ವರ್ಷಗಳಿಂದ ಮಹಾವೀರ ಲಿಂಬ್ ಸೆಂಟರ್ನ ಚೇರಮನ್ರಾಗಿ ಕಾರ್ಯ ನಿರ್ವಹಿಸುತ್ತಿದ್ದ ವಿರೇಂದ್ರ ಜೈನ ಅವರು ಸದ್ದಿಲ್ಲದೇ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದರಲ್ಲದೆ ರಾಜ್ಯ ಮತ್ತು ನೆರೆಯ ರಾಜ್ಯದ ವಿವಿಧೆಡೆ ಕೃತಕ ಕೈ, ಕಾಲು ಜೋಡಣಾ ಶಿಬಿರವನ್ನು ಆಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಮಾನವೀಯ ಸೇವೆಯಲ್ಲಿ ಮುನ್ನಡೆಯುತ್ತಿರುವ ಮಹಾವೀರ ಲಿಂಬ್ ಸೆಂಟರ್ಗೆ ಕರ್ನಾಟಕ ಸರ್ಕಾರ ನೀಡುವ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿಯನ್ನು ಕಳೆದ ನ.1ರಂದು ನೀಡಿ ಗೌರವಿಸಿತ್ತು.
ಸಂತಾಪ : ವೀರೇಂದ್ರ ಜೈನ ನಿಧನಕ್ಕೆ ಮಹಾರಾಷ್ಟ್ರ ಕಾಂಗ್ರೆಸ್ ಉಸ್ತುವಾರಿ ಎಚ್.ಕೆ.ಪಾಟೀಲ, ಮಾಜಿ ಸಚಿವ ಎ.ಎಂ.ಹಿಂಡಸಗೇರಿ ಸಂತಾಪ ವ್ಯಕ್ತಪಡಿಸಿದ್ದಾರಲ್ಲದೇ ಅವರ ನಿಸ್ಪ್ರಹ ಸೇವೆಯನ್ನು ಸ್ಮರಿಸಿದ್ದಾರೆ.
ಆಲ್ ಇಂಡಿಯಾ ಜೈನ ಯುಥ್ ಫೆಡರೇಷನ್ ಸಂಸ್ಥಾಪಕರು ಹಾಗೂ ಶ್ರೀ ಸಿದ್ಧಾರೂಢಮಠ ಟ್ರಸ್ಟ ಮಾಜಿ ಚೇರಮನ್ ಮಹೇಂದ್ರ ಸಿಂಘಿ ಮಿತ್ರ ವೀರೇಂದ್ರ ಜೈನ ಮಹಾವೀರ ಲಿಂಬ್ ಸೆಂಟರ್ನ ಯಶಸ್ಸಿನಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದರು ಎಂದು ಕಂಬನಿ ಮಿಡಿದಿದ್ದಾರೆ. ಗೌತಮಚಂದ ಗುಲೇಚಾ, ಸುಭಾಸ ಡಂಕ ಮತ್ತಿತರರು ಸಂತಾಪ ಸೂಚಿಸಿದ್ದಾರೆ.