ಕಾಂಗ್ರೆಸ್ ಮುಖಂಡರಿಂದ ಬೆಂಬಲ
ಧಾರವಾಡ: ಜಲಮಂಡಳಿ ಗುತ್ತಿಗೆ ನೌಕರರನ್ನು ವಜಾಗೊಳಿಸಿರುವುದನ್ನು ಖಂಡಿಸಿ ಕಾಂಗ್ರೆಸ್ ಬೆಂಬಲದೊಂದಿಗೆ ದಿನಗೂಲಿ ನೌಕರರು ಧರಣಿ ಕೈಗೊಂಡರೂ ಬೇಡಿಕೆಗಳಿಗೆ ಸ್ಪಂದನೆ ಸಿಗದ ಕಾರಣ ಇಂದು ಬೆಳಿಗ್ಗೆ ಧಾರವಾಡ ಜಲಮಂಡಳಿ ಕಚೇರಿಯಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಹುಬ್ಬಳ್ಳಿ ನಿವಾಸದವರೆಗೆ ಪಾದಯಾತ್ರೆ ನಡೆಸಿದರು.
ಪಾದಯಾತ್ರೆಯ ಪೂರ್ವದಲ್ಲಿ ಪ್ರತಿಭಟನೆಕಾರರನ್ನುದ್ದಶಿಸಿ ಮಾತನಾಡಿದ ಎಐಸಿಸಿ ಸದಸ್ಯ ದೀಪಕ ಚಿಂಚೋರೆ ಮಾತನಾಡಿ, ಸರಕಾರ ಹಾಗೂ ಜಲ ಮಂಡಳಿ ನೌಕರರ ಗುದ್ದಾಟದಲ್ಲಿ ಜನರು ಪರದಾಡುವಂತಾಗಿದೆ. ನೀರು ಸರಬರಾಜು ನೌಕರರ ಧರಣಿಯಿಂದ ನಗರದಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುತ್ತಿದ್ದು , ಸಾರ್ವಜನಿಕರಿಗೆ ಸಾಕಷ್ಟು ತೊಂದರೆ ಉಂಟಾಗಿದೆ. ಈ ಅಂಶಗಳನ್ನು ಗಮನಿಸಿ ಸರಕಾರ ಕೂಡಲೇ ನೌಕರರ ಸಮಸ್ಯೆ ಪರಿಹರಿಸಲು ಮುಂದಾಗಬೇಕು ಎಂದರು.
ಸುಮಾರು ೬೦೦ ನೌಕರರು ಅನೇಕ ವರ್ಷಗಳಿಂದ ಕಾರ್ಯ ನಿರ್ವಹಿಸು ತ್ತಿದ್ದಾರೆ. ಗುತ್ತಿಗೆ ಆಧಾರದಲ್ಲಿ ಎಲ್ ಆಂಡ್ ಟಿ ಸೇರ್ಪಡೆ ಆಗದಿದ್ದರೆ ಹೊಸಬರ ನೇಮಕ ಕುರಿತು ಬೆದರಿಕೆ ಒಡ್ಡುತ್ತಿರುವದು ಸರಿಯಲ್ಲ. ಆದರೆ, ನೌಕರರು ಯಾವ ಬೆದರಿಕೆಗೂ ಬಗ್ಗುವುದಿಲ್ಲ. ಬೇಡಿಕೆಗೆ ಒಪ್ಪಿದರೆ ಮಾತ್ರ. ಕರ್ತವ್ಯಕ್ಕೆ ಹಾಜರಾಗುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಲಮಂಡಳಿ ದಿನಗೂಲಿ, ಗುತ್ತಿಗೆ ಹಾಗೂ ಹಂಗಾಮಿ ನೌಕರರ ಸಂಘದ ಅಧ್ಯಕ್ಷ ವಿ.ಎನ್.ಹಳಕಟ್ಟೆ, ಉಭಯ ಅಧ್ಯಕ್ಷರುಗಳಾದ ಅನಿಲಕುಮಾರ ಪಾಟೀಲ,ಅಲ್ತಾಫ್ ಹಳ್ಳೂರ,ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ, ಕಾಂಗ್ರೆಸ್ ವಕ್ತಾರ ಪಿ.ಎಚ್.ನೀರಲಕೇರಿ, ನವನಗರ ಬ್ಲಾಕ್ ಅಧ್ಯಕ್ಷ ಬಸವರಾಜ ಕಿತ್ತೂರ, ಪ್ರಕಾಶ ಕ್ಯಾರಕಟ್ಟಿ, ದೇವಕಿ ಯೋಗಾನಂದ, ವಸಂತ ಅರ್ಕಾಚಾರಿ, ಮೋಹನ ಹಿರೇಮನಿ, ಸ್ವಾತಿ ಮಾಳಗಿ, ಸಂಘದ ಮುಖಂಡರಾದ ಸಂತೋಷ ಹಿರೇಮಠ, ಮಂಜುನಾಥ ಪಾಟೀಲ, ಬಸವರಾಜ ದೇಸಾಯಿ, ಬಸವರಾಜ, ಮುಕ್ಕಲ, ಮಹಾಂತೇಶ ಗೌಡರ, ಮಿಥುನ, ಸಿ.ಎಂ.ದೇಶಪಾಂಡೆ ಇನ್ನಿತರರು ಸೇರಿದಂತೆ ಗುತ್ತಿಗೆ ನೌಕರರು ಇದ್ದರು.