ಹುಬ್ಬಳ್ಳಿ-ಧಾರವಾಡ ಸುದ್ದಿ
ಹೊರಟ್ಟಿ ಹೊಸ ಇತಿಹಾಸ; 8ನೇ ಬಾರಿ ಗೆದ್ದು ಬೀಗಿದ ಶಿಕ್ಷಕರ ಕಣ್ಮಣಿ

ಹೊರಟ್ಟಿ ಹೊಸ ಇತಿಹಾಸ; 8ನೇ ಬಾರಿ ಗೆದ್ದು ಬೀಗಿದ ಶಿಕ್ಷಕರ ಕಣ್ಮಣಿ

ಪೈಪೋಟಿ ನೀಡಿದರೂ ಗುರಿ ತಲುಪದ ಗುರಿಕಾರ

ಬೆಳಗಾವಿ: ವಿಧಾನಪರಿಷತ್ತಿನ ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ’ಸೋಲಿಲ್ಲದ ಸರದಾರ’ ಎಂದೇ ಕರೆಸಿಕೊಳ್ಳುತ್ತಿರುವ ಬಸವರಾಜ ಹೊರಟ್ಟಿ ಅಕ್ಷರಶಃ ಅದಕ್ಕೆ ಅನ್ವರ್ಥಕರಾಗಿ ಹೊಸ ದಾಖಲೆ ಬರೆದಿದ್ದು 9266 ಮತಗಳನ್ನು ಪಡೆಯುವ ಮೂಲಕ ಎಂಟನೇ ಬಾರಿಗೆ ಗೆಲುವು ದಾಖಲಿಸಿದ್ದಾರೆ.


ಇದೇ ಮೊದಲ ಬಾರಿಗೆ ಬಿಜೆಪಿ ಪಾಳೆಯದಿಂದ ಕಣಕ್ಕಿಳಿದ ಹೊರಟ್ಟಿ ನಿರೀಕ್ಷೆಯಂತೆಯೇ ಕೇಸರಿ ಪಡೆ ಬಲ ಹಾಗೂ ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಬಲದೊಂದಿಗೆ ಕಾಂಗ್ರೆಸ್ , ಜೆಡಿಎಸ್ ಅಭ್ಯರ್ಥಿಗಳು ಲೆಕ್ಕಕ್ಕೆ ಇಲ್ಲವೆಂಬಂತೆ ತಮ್ಮ ಜಯ ಸಾಧಿಸಿದ್ದಾರೆ.


ತೀವ್ರ ಪೈಪೋಟಿ ನೀಡಿದ್ದ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಗುರಿಕಾರ 4597 ಮತಗಳನ್ನು ಪಡೆದು ಎರಡನೆ ಸ್ಥಾನಕ್ಕೆ ತೃಪ್ತಿಪಡುವಂತಾಗಿದ್ದು ಜೆಡಿಎಸ್‌ನ ಶ್ರೀಶೈಲ ಗಡದಿನ್ನಿ ಕೇವಲ ಮೂರಂಕಿ ತಲುಪಲಷ್ಟೆ ( 273) ಯಶಸ್ವಿಯಾದರು.


ಚುನಾವಣೆಯುದ್ದಕ್ಕೂ ಬದಲಾವಣೆಯ ಗಾಳಿ ಬೀಸುತ್ತಿದೆ ಎಂಬುದು ವಿರೋಧಿಗಳ ಮಂತ್ರವಾಗಿದ್ದರೆ ದಾಖಲೆ ಗೆಲುವಿಗೆ ಮುನ್ನುಡಿ ಬರೆಯಿರಿ ಎಂಬ ಬಿಜೆಪಿ ಮುಖಂಡರ ಮತ್ತು ಸ್ವತಃ ಹೊರಟ್ಟಿಯವರ ಮನವಿಗೆ ಪಶ್ಚಿಮ ಕ್ಷೇತ್ರದ ಮತದಾರರ ಮುದ್ರೆ ಒತ್ತಿದ್ದು 4669 ಮತಗಳ ಅಂತರದ ಜಯ ನೀಡುವ ಮೂಲಕ ಉತ್ತರ ಕರ್ನಾಟಕದ ಗಟ್ಟಿ ಧ್ವನಿಗೆ ಅವಿಸ್ಮರಣೀಯ ಕೊಡುಗೆ ನೀಡಿದ್ದಾರೆ.


ಇಲ್ಲಿನ ಜ್ಯೋತಿ ಪಿಯು ಕಾಲೇಜಿನಲ್ಲಿ ನಡೆದ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಹೊರಟ್ಟಿ ಆರಂಭದಿಂದಲೂ ಮುನ್ನಡೆ ಸಾಧಿಸಿದ್ದರು.
ಮೊದಲ ಸುತ್ತಿನಲ್ಲಿ 11000 ಮತಗಳ ಎಣಿಕೆ ಮುಕ್ತಾಯವಾಗಿದ್ದು, ಹೊರಟ್ಟಿಗೆ 6479 ಮತಗಳು ಬಂದಿದ್ದವು. ಕಾಂಗ್ರೆಸ್‌ನ ಬಸವರಾಜ ಗುರಿಕಾರಗೆ 3314 ಮತ ಲಭಿಸಿದ್ದು, ಹೊರಟ್ಟಿ 3165 ಮತಗಳ ಮುನ್ನಡೆ ಗಳಿಸಿದ್ದರು.


ಎರಡು ಸುತ್ತುಗಳ ಎಣಿಕೆಯಲ್ಲಿ 7181 ಕೋಟಾ ರೀಚ್ ಆಗುವುದರೊಂದಿಗೆ ಹೊರಟ್ಟಿ ಗೆಲುವು ಅಧಿಕೃತಗೊಂಡಿತು.
1980ರಲ್ಲಿ 649, 1986ರಲ್ಲಿ 2398, 1992 ರಲ್ಲಿ 3016, 1998 ರಲ್ಲಿ 4496, 2004 ರಲ್ಲಿ 5102, 2010ರಲ್ಲಿ 2089, 2016ರಲ್ಲಿ 3109 ಮತಗಳ ಅಂತರದಲ್ಲಿ ಗೆದ್ದಿದ್ದ ಹೊರಟ್ಟಿ ಇಂದು ಅಂತರ ಒಂದೂವರೆ ಪಟ್ಟು ಹೆಚ್ಚಿಸಿಕೊಂಡಿದ್ದಲ್ಲದೇ ಯಾವುದೇ ಪಕ್ಷದಲ್ಲಿದ್ದರೂ ತಾವು ಪಕ್ಷಾತೀತರು ಎಂಬುದನ್ನು ಮತ್ತೊಮ್ಮೆ ತೋರಿಸಿದ್ದಾರೆ.


ಸಾವಿರಕ್ಕೂ ಹೆಚ್ಚು ’ಗುರು’ಗಳ ಮತ ತಿರಸ್ಕೃತ

ಹುಬ್ಬಳ್ಳಿ: ಕಳೆದ ಬಾರಿಯಂತೆಯೆ ಈ ಬಾರಿಯೂ ಭವ್ಯ ಭಾರತದ ಪ್ರಜೆಗಳ ನಿರ್ಮಾಪಕರಾದ ಸಾವಿರಕ್ಕೂ (1223) ಹೆಚ್ಚು ಶಿಕ್ಷಕರ ಮತಗಳು ತಿರಸ್ಕೃತಗೊಂಡಿದೆ.
ತಿರಸ್ಕಾರಗೊಂಡ ಬಹುತೇಕ ಮತಗಳು ಹೊರಟ್ಟಿಗೆ ಚಲಾವಣೆಗೊಂಡಿದ್ದವು ಎನ್ನಲಾಗಿದೆ.
ಪ್ರಜ್ಞಾವಂತರ ಮತಗಳೇ ಈ ಪ್ರಮಾಣದಲ್ಲಿ ತಿರಸ್ಕೃತಗೊಂಡರೆ ಹೇಗೆ ಎಂಬ ಪ್ರಶ್ನೆ ಸಾರ್ವಜನಿಕರು ಕೇಳುವಂತಾಗಿದೆ.

 

administrator

Related Articles

Leave a Reply

Your email address will not be published. Required fields are marked *