ಹುಬ್ಬಳ್ಳಿ : ಆಡಳಿತಾರೂಢ ಬಿಜೆಪಿ, ವಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ತೀವ್ರ ಪೈಪೋಟಿ ಸೃಷ್ಟಿಸಿರುವ ವಿಧಾನ ಪರಿಷತ್ತಿನ 2 ಪದವೀಧರರ ಮತ್ತು 2 ಶಿಕ್ಷಕರ ಕ್ಷೇತ್ರಗಳ ಚುನಾವಣೆಗೆ ಮತದಾನ ಪ್ರಕ್ರಿಯೆ ನಡೆಯುತ್ತಿದ್ದು,ನಾಡಿದ್ದು ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ.
ಇತ್ತೀಚೆಗಷ್ಟೇ ಜೆಡಿಎಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿ ಅದೃಷ್ಟ ಪರೀಕ್ಷೆಗೆ ಇಳಿದಿರುವ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ, ಕಾಂಗ್ರೆಸ್‌ನ ಪ್ರಕಾಶ್ ಹುಕ್ಕೇರಿ ಸೇರಿದಂತೆ ಇನ್ನಿತರರ ಭವಿಷ್ಯವನ್ನು ಮತದಾರರು ಬರೆಯಲಿದ್ದಾರೆ.
ಧಾರವಾಡ ಜಿಲ್ಲೆಯಲ್ಲಿ 3450 ಪುರುಷ, 2995 ಮಹಿಳೆಯರು ಸೇರಿ ಒಟ್ಟು 6445 ಮತದಾರರಿದ್ದಾರೆ.ಜಿಲ್ಲೆಯಲ್ಲಿ 21ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು.ಮಧ್ಯಾಹ್ನ 12ರ ವೇಳೆಗೆ ಶೇ.38.86 ಮತದಾನವಾಗಿದೆ.
ತೀವ್ರ ಜಿದ್ದಾಜಿದ್ದಿನ ಹಿನ್ನೆಲೆಯಲ್ಲಿ ಬೆಳಿಗ್ಗೆ ಮಂದಗತಿಯಿಂದ ಆರಂಭಗೊಂಡ ಮತದಾನ ಮಧ್ಯಾಹ್ನದ ವೇಳೆಗೆ ಬಿರುಸು ಪಡೆದಿದೆ. ಕೆಲವೆಡೆ ಸಣ್ಣಪುಟ್ಟ ಮಾತಿನ ಚಕಮಕಿ,ಆರೋಪ ಪ್ರತ್ಯಾರೋಪ ಬಿಟ್ಟರೆ ಎಲ್ಲೆಡೆ ಮತದಾನ ಸುಗಮವಾಗಿ ನಡೆದಿದೆ. ಬಹುತೇಕ ಎಲ್ಲಾ ಮತಗಟ್ಟೆಗಳಲ್ಲಿ ಮತದಾನದ ಅರ್ಹತೆ ಹೊಂದಿದ ಶಿಕ್ಷಕರು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡು ತಮ್ಮ ಹಕ್ಕು ಚಲಾಯಿ ಸುತ್ತಿರುವ ದೃಶ್ಯ ಕಂಡು ಬಂದಿತು.
ವಾಯುವ್ಯ ಪದವೀಧರರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಹಣಮಂತ ನಿರಾಣಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಸಂಕಾ, ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಬಿಜೆಪಿಯ ಎಂ.ವಿ ರವಿಶಂಕರ್, ಕಾಂಗ್ರೆಸ್‌ನ ಜಿ.ಎಂ.ಮಧು, ಜೆಡಿಎಸ್‌ನ ಎಚ್.ಕೆ.ರಾಮು, ಕನ್ನಡ ಚಳವಳಿ ಪಕ್ಷದಿಂದ ವಾಟಾಳ್ ನಾಗರಾಜ್ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿಯ ಬಸವರಾಜ ಹೊರಟ್ಟಿ, ಜೆಡಿಎಸ್‌ನಿಂದ ಶ್ರೀಶೈಲ ಘಡದಿನ್ನಿ ಹಾಗೂ ಕಾಂಗ್ರೆಸ್ ಬಸವರಾಜ ಗುರಿಕಾರ ಅಖಾಡದ ಲ್ಲಿದ್ದರೆ, ವಾಯುವ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿಯಿಂದ ಅರುಣ್ ಶಹಾಪುರ, ಕಾಂಗ್ರೆಸ್‌ನಿಂದ ಪ್ರಕಾಶ್ ಹುಕ್ಕೇರಿ, ಜೆಡಿಎಸ್‌ನಿಂದ ಚಂದ್ರಶೇಖರ್ ಲೋಣಿ ಸ್ಪರ್ಧಿಸಿದ್ದು, ಗೆಲುವಿನ ವಿಜಯಮಾಲೆ ಯಾರಿಗೆ ದಕ್ಕಲಿದೆ ಎಂಬುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಮತಗಟ್ಟೆ ಅಧಿಕಾರಿ ವಿರುದ್ಧ ದೂರು
ನಗರದ ಬಾಸೆಲ್ ಮಿಶನ್ ಶಾಲೆಯ ಮತಗಟ್ಟೆ 26ರಲ್ಲಿ ನಿರ್ದಿಷ್ಟ ಅಭ್ಯರ್ಥಿಗೆ ಮತ ಚಲಾವಣೆಗೆ ಸೂಚಿಸಿದ್ದಾರೆಂದು ಜಿಲ್ಲಾಧಿಕಾರಿಗಳಿಗೆ ಮಾಧ್ಯಮಿಕ ಶಾಲಾ ನೌಕರರ ಸಂಘದ ಶ್ಯಾಮ ಮಲ್ಲನಗೌಡರ ದೂರು ದಾಖಲಿಸಿದ್ದಾರೆ.
ಮತಗಟ್ಟೆ ಅಧಿಕಾರಿ ಬಂದ ಶಿಕ್ಷಕರಲ್ಲಿ ಗೊಂದಲ ಮೂಡಿಸುವ ಯತ್ನ ಮಾಡಿದ್ದಾರೆಂದು ಕೆಲವರು ಆರೋಪಿಸಿದ ಹಿನ್ನೆಲೆಯಲ್ಲಿ ದೂರು ದಾಖಲಾಗಿದೆ.
ದಾಖಲೆ ಗೆಲುವು: ಹೊರಟ್ಟಿ ವಿಶ್ವಾಸ
ಹುಬ್ಬಳ್ಳಿ: ಈ ಬಾರಿಯ ಒಟ್ಟು ಮತದಾನದಲ್ಲಿ ಶೇ.70 ಮತಗಳು ತಮೆ ಲಭಿಸಲಿವೆ ಎಂಬ ವಿಶ್ವಾಸವನ್ನು ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ವ್ಯಕ್ತಪಡಿಸಿದರು.
ಸೋಮವಾರ ಬೆಳಿಗ್ಗೆ ಇಲ್ಲಿನ ದೇಶಪಾಂಡೆ ನಗರದ ರೋಟರಿ ಶಾಲೆಯಲ್ಲಿ ಮತ ಕೇಂದ್ರಕ್ಕೆ ಭೇಟಿ ನೀಡಿದ ನಂತರ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷೇತ್ರದಾದ್ಯಂತ
ಉತ್ತಮ ವಾತಾವರಣ ಇದೆ. ಶಿಕ್ಷಕರ ಉತ್ಸಾಹ, ನಮ್ಮ ಲೆಕ್ಕಾಚಾರದಡಿ ಹೇಳುವುದಾದರೆ, ಚಲಾವಣೆಯಾಗುವ ಒಟ್ಟು ಮತಗಳಲ್ಲಿ ಶೇ.೭೦ ನನಗೆ ಬರುವದು ನಿಶ್ಚಿತ ಎಂದರು.
ವಿರೋಧಿಗಳು ಹತಾಶರಾಗಿ ನನ್ನ ವಿರುದ್ಧ ಇಲ್ಲಸಲ್ಲದ ಕ್ಷುಲ್ಲಕ ಹೇಳಿಕೆ ಗಳನ್ನು ನೀಡುತ್ತಿದ್ದಾರೆ. ಕಳೆದ ನಾಲ್ಕು ದಶಕಗಳಲ್ಲಿ ಒಬ್ಬರೇ ಒಬ್ಬ ಶಿಕ್ಷಕನಿಂದ ಒಂದು ರೂಪಾಯಿ ಪಡೆದಿದ್ದೇನೆ ಎಂದು ಸಾಬೀತು ಪಡಿಸಿದರೆ ಅವರು ಹೇಳಿದಂತೆ ಕೇಳುತ್ತೇನೆ ಎಂದು ಸವಾಲು ಹಾಕಿದರಲ್ಲದೆ, ಭ್ರಷ್ಟಾಚಾರದ ವಿಷಯದಲ್ಲಿ ಸಣ್ಣ ಕಪ್ಪು ಚುಕ್ಜೆಯೂ ನನಗೆ ಇಲ್ಲ. ಅವರ ಕ್ಷುಲ್ಲಕ ಟೀಕೆಗಳಿಗೆ ದಿ. 15ರಂದು ಫಲಿತಾಂಶ ಉತ್ತರ ನೀಡಲಿದೆ ಎಂದರು.
ಹೊರಟ್ಟಿ ಬ್ಯಾಡ್ಜ ಧರಿಸಿದ್ದಕ್ಕೆ ಆಕ್ಷೇಪ
ಹುಬ್ಬಳ್ಳಿ: ಶಿಕ್ಷಕರೊಬ್ಬರು ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಅವರ ಭಾವಚಿತ್ರದ ಬ್ಯಾಡ್ಜ್ ಧರಿಸಿ, ಇಲ್ಲಿನ ದೇಶಪಾಂಡೆ ನಗರದ ಎನ್.ಆರ್. ದೇಸಾಯಿ ರೋಟರಿ ಶಾಲೆಯ ಮತಗಟ್ಟೆಗೆ ಭೇಟಿ ನೀಡುವ ಮೂಲಕ, ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದರು.
ಮತಗಟ್ಟೆಗೆ ಬಂದ ಇಬ್ಬರು ಶಿಕ್ಷಕರು ವಿಜಯದ ಸಂಕೇತ ಪ್ರದರ್ಶಿಸಿದರು. ಈ ಪೈಕಿ ಓರ್ವರು ಅವರು ಬ್ಯಾಡ್ಜ್ ಧರಿಸಿದ್ದರು. ಈ ಕುರಿತು, ಕಾಂಗ್ರೆಸ್ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದರು.
ಬದಲಾವಣೆ ನಿಶ್ಚಿತ: ಗುರಿಕಾರ
ಹುಬ್ಬಳ್ಳಿ: ಪ್ರಸಕ್ತ ಚುನಾವಣೆಯಲ್ಲಿ ಶಿಕ್ಷಕರು ಬದಲಾವಣೆ ಬಯಸಿದ್ದು ತಮ್ಮನ್ನು ಕೈ ಹಿಡಿಯುವರೆಂಬ ವಿಶ್ವಾಸ ನನ್ನದಾಗಿದೆ ಎಂದು ಪಶ್ಚಿಮ ಕ್ಷೇತ್ರದ ಕಾಂಗ್ರೆಸ್ ಅಧ್ಯಕ್ಷ, ಹೋರಾಟದ ಗುರಿಕಾರ ಎಂದೇ ಖ್ಯಾತಿ ಪಡೆದಿರುವ ಬಸವರಾಜ ಗುರಿಕಾರ ಹೇಳಿದರು.
ಇಲ್ಲಿನ ದೇಶಪಾಂಡೆನಗರದ ಮತಗಟ್ಟೆಗೆ ಆಗಮಿಸಿದ ಸಂದರ್ಭದಲ್ಲಿ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಕಳೆದ ನಾಲ್ಕು ದಶಕಗಳಲ್ಲಿ ಶಿಕ್ಷಕರಿಗೆ ಕೇವಲ ಆಕಾಶ ತೋರಿಸಿದ ಹಾಲಿ ಸದಸ್ಯರ ವರ್ತನೆ ಅಲ್ಲದೇ ಅವರ ನಿಜವಾದ ಮುಖವಾಡ ಕಳಚಿ ಬಿದ್ದಿದ್ದು. ಇಡಿ ಕ್ಷೇತ್ರದಾದ್ಯಂತ ನನಗೆ ಬಂದಿರುವ ಮಾಹಿತಿಯಂತೆ ವಾತಾವರಣ ನನ್ನ ಪರವಾಗಿದ್ದು ಮೊದಲ ಸುತ್ತಿನಲ್ಲೇ ಗೆಲುವು ನಿಶ್ಚಿತ ಎಂದು ಹೇಳಿದರು.
ಚುನಾವಣಾ ಅಧಿಕಾರಿಗಳು ಮತಗಟ್ಟೆಗಳ ಬಳಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು ಎಂದು ಗುರಿಕಾರ ಮನವಿ ಮಾಡಿದರು.
ಶಿಕ್ಷಕರೊಬ್ಬರಿಂದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಕುರಿತಂತೆ ಘಟನೆ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡುವ ಕುರಿತು ಚಿಂತನೆ ನಡೆಸಲಾಗುವುದು ಎಂದರು.
ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ ದೇಶಪಾಂಡೆನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗುರಿಕಾರ ಬೂತ್ ಏಜೆಂಟ್ ಆಗಿ ಕಾರ್ಯನಿರ್ವಹಿಸಿದರು.
ಶಿಕ್ಷಕರ ಆಕ್ರೋಶ ಮತದ ರೂಪದಲ್ಲಿ: ಗಡದಿನ್ನಿ
ಹುಬ್ಬಳ್ಳಿ : ಪಶ್ಚಿಮ ಕ್ಷೇತ್ರದ ಶಿಕ್ಷಕ ಮತದಾರರಲ್ಲಿ ನಲವತ್ತು ವರ್ಷ ಕಾಲ ಕ್ಷೇತ್ರ ಪ್ರತಿನಿಧಿಸಿದ ಪ್ರತಿನಿಧಿಗಳ ಬಗ್ಗೆ ಆಕ್ರೋಶ ಮಡುಗಟ್ಟಿದ್ದು ಚುನಾವಣೆಯಲ್ಲಿ ಅದು ಮತದ ರೂಪದಲ್ಲಿ ವ್ಯಕ್ತವಾಗಲಿದೆ.ಹಿಂದಿನಿಂದಲೂ ಅವರು ಅಧಿಕಾರ ದುರುಪಯೋಗಪಡಿಸಿಕೊಂಡೆ ಬಂದಿದ್ದಾರೆ ಎಂದು ಜೆಡಿಎಸ್ ಅಭ್ಯರ್ಥಿ ಶ್ರೀಶೈಲ ಗಡದಿನ್ನಿ ಹೇಳಿದರು.
ಹುಬ್ಬಳ್ಳಿ ಮತ್ತು ಧಾರವಾಡದ ವಿವಿಧ ಮತಕೇಂದ್ರಗಳಿಗೆ ಭೇಟಿ ನೀಡಿದ ನಂತರ ಮಾತನಾಡಿದ ಅವರು ಅವಕಾಶ ಮತ್ತು ಉನ್ನತಾಧಿಕಾರ ನೀಡಿದರೂ ಶಿಕ್ಷಕರಿಗೆ ಸೌಲಭ್ಯ ಕಲ್ಪಿಸುವಲ್ಲಿ ವಿಫಲರಾಗಿದ್ದು ನಾನೊಬ್ಬನೆ ಶಿಕ್ಷಕ ಮತದಾರನಾಗಿದ್ದು, ಉಳಿದವರೆಲ್ಲ ವಯಸ್ಸಾದವರು ಎಂದು ಹೇಳಿದರು.
ಹೊರಟ್ಟಿಯವರು ಕೇವಲ ದಾಖಲೆ ಮಾತನಾಡುತ್ತ ಹೊರಟಿದ್ದು ಬಹಿರಂಗವಾಗಿ ಶಿಕ್ಷಕರು ಯಾರು ಹೇಳುತ್ತಿಲ್ಲವಾದರೂ ಈ ಬಾರಿ ಪ್ರಾಜ್ಞ ಮತದಾರರು ಪಾಠ ಕಲಿಸುವುದು ನಿಶ್ಚಿತ.ಅಲ್ಲದೇ ತಮಗೆ ಆಶೀರ್ವದಿಸುವರೆಂಬ ಆಶಯ ವ್ಯಕ್ತಪಡಿಸಿದರು. ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಶಮ್ಸ್ ತಬರೇಜ ಸಮ್ಶಿ , ರಾಜ್ಯ ಮುಖಂಡ ಗಜಾನನ ಅಣವೇಕರ ,ಸಲೀಮ ಕುಡಚಿ ಮತ್ತಿತರರು ಇದ್ದರು.