ಹುಬ್ಬಳ್ಳಿ-ಧಾರವಾಡ ಸುದ್ದಿ

ಧಾರವಾಡ ’ಪೇಡೆ’ : ತೀವ್ರ ಕುತೂಹಲ!

ಜೋಶಿ ದಾಖಲೆ ಗೆಲುವಿನ ಲೆಕ್ಕಾಚಾರದಲ್ಲಿ ಬಿಜೆಪಿ / ಗ್ಯಾರಂಟಿ ಭರವಸೆಯಲ್ಲಿ ಕಾಂಗ್ರೆಸ್

ಹುಬ್ಬಳ್ಳಿ : ತೀವ್ರ ಕುತೂಹಲ ಕೆರಳಿಸಿರುವ ಧಾರವಾಡ ಕ್ಷೇತ್ರದ ಮತ ಎಣಿಕೆ ನಾಳೆ ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯಲಿದ್ದು, ಅದಕ್ಕೆ ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಂಡಿದ್ದು ಮತ ಎಣಿಕೆ ಹಿನ್ನೆಲೆಯಲ್ಲಿ ನಿಷೇದಾಜ್ಞೆ ಸಹ ಜಾರಿಗೊಳಿಸಿದ್ದು, ವ್ಯಾಪಕ ಪೊಲೀಸ್ ಭದ್ರತೆಯನ್ನೂ ಏರ್ಪಡಿಸಲಾಗಿದೆ.
ಪ್ರಧಾನಿ ಮೋದಿ ಸಂಪುಟದ ಪ್ರಭಾವಿ ಸಚಿವ ಪ್ರಹ್ಲಾದ ಜೋಶಿ ಹಾಗೂ ಕಾಂಗ್ರೆಸ್ ಹುರಿಯಾಳು ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷ ವಿನೋದ ಅಸೂಟಿ ಮಧ್ಯೆ ನಡೆದ ತೀವ್ರ ಸೆಣಸಾಟದಲ್ಲಿ ಯಾರು ಗೆಲ್ಲುತ್ತಾರೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.


ಮೇಲ್ನೋಟಕ್ಕೆ ಸಚಿವ ಜೋಶಿಯವರ ದಾಖಲೆಯ ಐದನೆಯ ಗೆಲುವು ನಿಕ್ಕಿ ಎಂಬಂತಹ ವಾತಾವರಣವಿದ್ದು ಕಳೆದ ಬಾರಿಗಿಂತ ಹೆಚ್ಚಿನ ಅಂತರದಿಂದ ಜಯಭೇರಿ ಎಂಬ ವಾತಾವರಣ ಮೊದಲು ಇತ್ತಾದರೂ ಮತದಾನದ ನಂತರ ಅಂತರ ಸ್ವಲ್ಪ ಕಡಿಮೆಯಾಗಬಹುದೆಂಬ ಗುಸು ಗುಸು ಮಾತ್ರ ಇದೆ. ಕಾಂಗ್ರೆಸ್ಸಿಗರು ಸಹ ಈ ಬಾರಿ ಎಲ್ಲರೂ ಒಗ್ಗಟ್ಟಾಗಿ ಚುನಾವಣೆ ಮಾಡಿದ್ದು ಗ್ಯಾರಂಟಿ ಯೋಜನೆಗಳು ಅಲ್ಪ ಅಂತರದ ಗೆಲುವು ತಂದುಕೊಡಲಿದೆ. ಸುಮಾರು ಮೂರು ದಶಕಗಳ ನಂತರ ತಮ್ಮ ಪಕ್ಷಕ್ಕೆ ಜಯ ದಕ್ಕಲಿದೆ ಎಂಬ ಬಲವಾದ ವಿಶ್ವಾಸ ಕೈ ಮುಖಂಡರು ಹೊಂದಿದ್ದಾರೆ.


2004ರಲ್ಲಿ ಮೊದಲ ಬಾರಿ ಜಯ ಸಾಧಿಸಿ ದಿಲ್ಲಿಯ ಸಂಸತ್ತಿಗೆ ಬಲಗಾಲಿಟ್ಟ ಜೋಶಿಯವರು 2009ರಲ್ಲಿ 4,46,786 ಮತ ಪಡೆದು ವಿಜಯಿಯಾದರೆ, 2014ರಲ್ಲಿ 5,45,395 ಮತ ಪಡೆದು ಆಯ್ಕೆಯಾಗಿದ್ದರು. ಕಳೆದ ಬಾರಿ 2019ರಲ್ಲಿ 6,84,837 ಮತಗಳನ್ನು ಎರಡು ಲಕ್ಷಕ್ಕಿಂತ ಹೆಚ್ಚಿನ ಅಂತರದಲ್ಲಿ ನಾಲ್ಕನೇ ವಿಕ್ರಮ ಸಾಧಿಸಿದ್ದರು. ಧಾರವಾಡ ಕ್ಷೇತ್ರದ ಇತಿಹಾಸದಲ್ಲಿ ಈ ಬಾರಿ ಐದನೇ ಸಲ ಗೆಲುವು ಸಾಧಿಸಿದಲ್ಲಿ ದಾಖಲೆ ವೀರರಾಗಲಿದ್ದಾರೆ.


2009ರಲ್ಲಿ ಮಹಾನಗರ ಮತ್ತು ಗ್ರಾಮೀಣ ಅಧ್ಯಕ್ಷರಾಗಿ ಮಹೇಶ ಟೆಂಗಿನಕಾಯಿ ಮತ್ತು ಷಣ್ಮುಖ ಗುರಿಕಾರ ,2014ರಲ್ಲಿ ಲಿಂಗರಾಜ ಪಾಟೀಲ ಮತ್ತು ಹಾಲಿ ಕುಂದಗೋಳ ಶಾಸಕ ಎಂ.ಆರ್.ಪಾಟೀಲ , 2019ರಲ್ಲಿ ನಾಗೇಶ ಕಲಬುರ್ಗಿ ಮತ್ತು ಈರಣ್ಣ ಜಡಿ ಇದ್ದರು. ಈ ಬಾರಿ ತಿಪ್ಪಣ್ಣ ಮಜ್ಜಗಿ ಮತ್ತು ನಿಂಗಪ್ಪ ಸುತಗಟ್ಟಿ ಅಧ್ಯಕ್ಷರುಗಳಾಗಿದ್ದಾರೆ.
ಬಿಜೆಪಿ ಹು.ಧಾ.ಸೆಂಟ್ರಲ್, ಹು.ಧಾ.ಪಶ್ಚಿಮದಲ್ಲಿ ದೊಡ್ಡ ಲೀಡ್, ಧಾರವಾಡ ಗ್ರಾಮೀಣ ಮತ್ತು ಕಲಘಟಗಿಯದಲ್ಲಿ ಸಹ ಮುನ್ನಡೆ ದೊರೆಯುವ ವಿಶ್ವಾಸ ಹೊಂದಿದೆ. ಕಾಂಗ್ರೆಸ್ ನವಲಗುಂದ, ಹು.ಧಾ.ಪೂರ್ವದಲ್ಲಿ ಹೆಚ್ಚಿನ ಅಂತರದ ಲೀಡ್, ಅಲ್ಲದೇ ಕುಂದಗೋಳ, ಶಿಗ್ಗಾಂವಿ, ಕಲಘಟಗಿ, ಧಾರವಾಡ ಗ್ರಾಮೀಣಗಳಲ್ಲಿ 10 ಸಾವಿರದೊಳಗಿನ ಲೀಡ್ ದೊರೆಯುವ ಲೆಕ್ಕಚಾರದಲ್ಲಿದೆ.

administrator

Related Articles

Leave a Reply

Your email address will not be published. Required fields are marked *