ಧಾರವಾಡ: ಸಮಾಜ ವಿರೋಧಿ ಅನೂಪ ಮಂಡಲ ಸಂಘಟನೆಯನ್ನು ನಿಷೇಧಿಸಬೇಕು ಎಂದು ಆಗ್ರಹಿಸಿ ಇಲ್ಲಿನ ಅಂಜುಮನ್-ಇ-ಇಸ್ಲಾಂ ಸಂಸ್ಥೆಯವತಿಯಿಂದ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ವಿಶ್ವ ಕಲ್ಯಾಣ, ವಿಶ್ವ ಶಾಂತಿಯ ಸಂದೇಶವನ್ನು ಪ್ರತಿಬಿಂಬಿಸುವಂತಹ ಹಾಗೂ ಐರಿಹಾಸಿ ಧಾರ್ಮಿಕ ಸಂಸ್ಕೃತಿಯನ್ನು ಹೊಂದಿದ ಜೈನ್ ಸಮಾಜ ಹಾಗೂ ಜೈನ ಸಮಾಜದ ಋಷಿಗಳ ವಿರುದ್ಧ ಅನೂಪ ಮಂಡಲ ಸಂಘಟನೆ ಅಪಪ್ರಚಾರ ಮಾಡುತ್ತಿದೆ.
ಈ ಮೂಲಕ ದೇಶ ಮತ್ತು ಸಮಾಜದಲ್ಲಿ ಹಿಂಸಾತ್ಮಕ ವಾತಾವರಣವನ್ನು ಸಥಷ್ಠಿಸುತ್ತಿರುವ ಅನೂಪ ಮಂಡಲ ಸಂಘಟನೆಯ ಕಾರ್ಯವೈಖರಿಯನ್ನು ಸಮಸ್ತ ಮುಸ್ಲಿಂ ಸಮುದಾಯ ಖಂಡಿಸುತ್ತದೆ.
ಯಾವುದೇ ಧರ್ಮ ಗುರುಗಳಿಗೆ ಗೌರವ ನೀಡುವುದು ಸಜ್ಜನರ ಕರ್ತವ್ಯ. ಆದರೆ, ಅರಾಜಕತೆ ಮತ್ತು ಹಿಂಸಾತ್ಮಕ ವಾತಾವರಣವನ್ನು ಸೃಷ್ಠಿಸುವ ಉದ್ದೇಶ ಹೊಂದಿರುವ ಅನೂಪ ಮಂಡಲ ಸಂಘಟನೆಯು, ಜೈನ್ ಧರ್ಮದ ಗುರುಗಳ ಭಾವಚಿತ್ರ ದಹಿಸಿ ಜೈನ್ ಧರ್ಮೀಯರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದೆ.
ಆದ್ದರಿಂದ ದೇಶದಲ್ಲಿ ಶಾಂತಿ-ಸೌಹಾರ್ದಯುತ ವಾತಾವರಣ ನಿರ್ಮಿಸುವ ಮತ್ತು ಸದಾ ಶಾಂತಿಪ್ರಿಯ ನಾಗರಿಕರ ಹಿತದೃಷ್ಠಿಯಿಂದ ಸಮಾಜ ವಿರೋಧಿ ಅನೂಪ ಮಂಡಲ ಸಂಘಟನೆಯನ್ನು ಬೇರು ಸಮೇತ ಕಿತ್ತೊಗೆಯಲು ಅಗತ್ಯ ಕ್ರಮ ಕೈಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳ ಮೂಲಕ ಸಲ್ಲಿಸಿದ ಮನವಿಯಲ್ಲಿ ಆಗ್ರಹಿಸಲಾಯಿತು.
ಸಮಾಜದ ಮುಖಂಡ ಇಸ್ಮಾಯಿಲ್ ತಮಟಗಾರ ನೇತೃತ್ವದಲ್ಲಿ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಅಂಜುಮನ್-ಇ-ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಇಕ್ಬಾಲ್ ಜಮಾದಾರ, ಪ್ರಧಾನ ಕಾರ್ಯದರ್ಶಿ ನಜೀರ ಮನಿಯಾರ, ಪದಾಧಿಕಾರಿಗಳಾದ ಶಕೀಲ ತಮಟಗಾರ, ಗೌಸ ಜಮಾದಾರ, ರಫೀಕ ಬಿಸ್ತಿ, ಶೋಯಬ್ ಜಮಾದಾರ, ರಿಯಾಜ್ ನನ್ನೆಸಾಬನವರ, ಬಿ.ಎ.ಜಹಗೀರದಾರ, ಎಂ.ಎಂ. ಮುನ್ಶಿ, ನಜೀರಅಹ್ಮದ ಬಳಬಟ್ಟಿ, ಜಿ.ಎ.ಕವಲಗೇರಿ, ನಜಂ ಜಗೀರದಾರ ಇನ್ನಿತರರು ಉಪಸ್ಥಿತರಿದ್ದರು.