ಧಾರವಾಡ: ಇಲ್ಲಿನ ಕೆ.ಸಿ. ಪಾರ್ಕ ಎದುರಿನ ಅರಣ್ಯ ಇಲಾಖೆಯ ಕಚೇರಿಗಳನ್ನು ಹೊಂದಿರುವ ಅರಣ್ಯ ಸಂಕೀರ್ಣದ ಆವರಣದಲ್ಲಿರುವ ಗಂಧದ ಮರವೊಂದನ್ನು ಮಂಗಳವಾರ ಕಳ್ಳರು ಕಳುವು ಮಾಡಿದ್ದಾರೆ.
ಕ್ವಾರ್ಟರ್ಸ ಬಳಿಯ ಗಂಧದ ಮರವೊಂದನ್ನು ಕಳುವು ಮಾಡಿದ್ದು ಈ ಬಗ್ಗೆ ಪ್ರಕರಣ ದಾಖಲಿಸಲಾಗಿದ್ದು ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು ಎಂದು ವಲಯ ಅರಣ್ಯಾಧಿಕಾರಿ ಆರ್.ಎಸ್. ಉಪ್ಪಾರ ತಿಳಿಸಿದ್ದಾರೆ.
ಇತ್ತೀಚೆಗೆ ದಿ. ೧೨ರಂದು ನಸುಕಿನಲ್ಲಿ ಧಾರವಾಡದ ಮಹೇಂದ್ರಕರ ಚಾಳ ಮೊದಲನೆಯ ಕ್ರಾಸ್ನಲ್ಲಿ ಲೆಕ್ಕ ಪರಿಶೋಧಕ ಮಧುಸೂದನ ಪಿಸೆ ಎಂಬುವರ ಮನೆಯ ಆವರಣದಲ್ಲಿನ ಮರವನ್ನೂ ಸಹ ಕಳ್ಳತನ ಮಾಡಲಾಗಿತ್ತು.
ಕಳ್ಳರು ಈಗ ಸಿಸಿಎಫ್, ಡಿಸಿಎಫ್, ಎಸಿಎಫ್ ಸಹಿತ ಎಲ್ಲ ಹಿರಿಯ ಅಧಿಕಾರಿಗಳ ಕಚೇರಿಯ ಆವರಣದಲ್ಲೇ ಗಂಧದ ಮರಕ್ಕೆ ಕೊಡಲಿಯೇಟು ಹಾಕಿರುವುದು ನಿಜಕ್ಕೂ ಆತಂಕದ ವಿಷಯವಾಗಿದೆ. ಹಿಂದೆಯೂ ಇಂತಹ ಘಟನೆಗಳು ನಡೆದಿದ್ದವು.
ಹುಬ್ಬಳ್ಳಿಯ ಪರಿಸರವಾದಿ ಮಂಜುನಾಥ ಬದ್ದಿ ’ಸಂಜೆ ದರ್ಪಣ’ದೊಂದಿಗೆ ಮಾತನಾಡಿ ಇಲಾಖೆ ಆವರಣದಲ್ಲಿರುವ ಬೆಲೆ ಬಾಳುವ ಗಂಧದ ಮರ ರಕ್ಷಿಸಲು ಅರಣ್ಯ ಸಿಬ್ಬಂದಿಗಳಿಗೆ ಆಗದಿರುವುದು ಸೋಜಿಗವಾಗಿದ್ದು, ಇನ್ನು ಅರಣ್ಯ ರಕ್ಷಣೆ ಎಷ್ಟರ ಮಟ್ಟಿಗೆ ಆದೀತು. ಈ ಬಗ್ಗೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.