ಹುಬ್ಬಳ್ಳಿ-ಧಾರವಾಡ ಸುದ್ದಿ

ಕಾರ್ಯಕರ್ತರ ಅಭಿಮಾನದ ಹೊಳೆ; ತವರಲ್ಲಿ ಮುನೇನಕೊಪ್ಪಗೆ ಅದ್ದೂರಿ ಸ್ವಾಗತ

ಹುಬ್ಬಳ್ಳಿ : ’ನಾನೆಂದೂ ನಿಮ್ಮ ನಾಯಕನಲ್ಲ, ನಾನೊಬ್ಬ ನಿಮ್ಮ ಸೇವಕನೆಂದು ತಿಳಿದುಕೊಂಡು ನನ್ನ ಬಳಿ ಕೆಲಸ ತೆಗೆದುಕೊಳ್ಳಿ’ ಎಂದು ಹೇಳುತ್ತ ನವಲಗುಂದ ಕ್ಷೇತ್ರದ ಜನತೆಯ ಮನೆ ಮನಗಳಿಗೆ ಹತ್ತಿರವಾದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಇಂದು ರಾಜ್ಯದ ಸಚಿವರಾಗಿದ್ದಾರಲ್ಲದೇ ಧಾರವಾಡ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ಅವರ ಹೆಗಲೇರಿದೆ.


ರೈತ ಬಂಡಾಯದ ನೆಲದ ಜನತೆಯ ಧನಿಯಾಗಬೇಕೆಂಬ ಉದ್ದೇಶದೊಂದಿಗೆ ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡು ರಾಜಕೀಯಕ್ಕೆ ಬಂದ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಅಲ್ಲದೇ ಹುಬ್ಬಳ್ಳಿಯ ಗಿರಣಿ ಚಾಳದಲ್ಲೇ ಆಡಿ ಬೆಳೆದ ಹುಡುಗ ಇಂದು ಪ್ರಸಕ್ತ ಬೊಮ್ಮಾಯಿ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಹೊಸ ಇತಿಹಾಸ ಬರೆದಿದ್ದಾರಲ್ಲದೇ ಜವಳಿ ಮತ್ತು ಸಕ್ಕರೆಯಂತಹ ಪ್ರಮುಖ ಖಾತೆಗಳು ಇವರ ಹೆಗಲಿಗೇರಿವೆ.


ರೈತರ ಕಷ್ಟಗಳು, ಈ ಭಾಗದ ವಾಸ್ತವ ಅರಿತಿರುವ ಅವರ ಮುಂದೆ ಸವಾಲಿಗಿಂತ ಹೆಚ್ಚಾಗಿ ನಿರೀಕ್ಷೆಗಳ ಭಾರವೇ ಹೆಚ್ಚಾಗಿದ್ದು ಕಳಸಾ ಬಂಡೂರಿ, ತುಪರಿ ಹಳ್ಳ ಯೋಜನೆಗಳನ್ನು ಅನುಷ್ಟಾನಗೊಳಿಸುವ ದೊಡ್ಡ ಹೊಣೆಗಾರಿಕೆ ಇದೆ.


೨೦೧೨ರಲ್ಲಿ ಶೆಟ್ಟರ್‌ರವರ ಸಂಪುಟದಲ್ಲಿ ಸಂಸದೀಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿರುವ ಅನುಭವವಿರುವ ಅವರಿಗೆ ಈ ಬಾರಿ ಯಡಿಯೂರಪ್ಪ ನಗರ ಮೂಲ ಸೌಕರ್ಯ ಅಭಿವೃದ್ದಿಯಂತಹ ಮಹತ್ವದ ನಿಗಮ ನೀಡಿದ್ದರು.

ಅಭಿವೃದ್ಧಿ ಯೋಜನೆಗಳನ್ನು ಕ್ಷೇತ್ರಕ್ಕೆ ಹೊತ್ತು ತರುವ, ಜನರ ಸಂಕಷ್ಟ-ಸಮಸ್ಯೆಗಳಿಗೆ ಸ್ಪಂದಿಸಿರುವ ಮುನೇನಕೊಪ್ಪ ತಮ್ಮದೇ ನೇತ್ರತ್ವದ ಸರಕಾರದಿಂದ ಸಾಕಷ್ಟು ಅನುದಾನ ತಂದು ಕ್ಷೇತ್ರದ ಇತಿಹಾಸದಲ್ಲಿಯೇ ದಾಖಲೆ ನಿರ್ಮಿಸಿ ಜನರ ಮನದಲ್ಲಿ ಭರವಸೆಯ ಬೆಳಕು ಎನಿಸಿಕೊಂಡಿದ್ದು ಈಗ ಅದು ಜಿಲ್ಲೆಗೆ ವಿಸ್ತರಣೆಯಾದಂತಾಗಿದೆ ಅಲ್ಲದೇ ಇಡೀ ಉತ್ತರ ಕರ್ನಾಟಕದ ನವ ಆಶಾಕಿರಣವಾಗಿ ಗೋಚರಿಸುತ್ತಿದ್ದಾರೆ.


೨೦೦೮ರಲ್ಲಿ ಮೊದಲ ಬಾರಿ ’ಶಕ್ತಿ ಸೌಧ’ದ ಮೆಟ್ಟಿಲು ಹತ್ತಿದ್ದು ಅವರ ಜನಪರ ನಿಲುವಿನಿಂದಾಗಿಯೇ. ದಶಕಗಳಿಂದಲೂ ಬೆಣ್ಣೆಹಳ್ಳದ ಪ್ರವಾಹಕ್ಕೆ ತುತ್ತಾಗಿ ಮುಳುಗಡೆಯಾಗುತ್ತಿದ್ದ ಅರಹಟ್ಟಿ, ಕೊಂಗವಾಡ ಗ್ರಾಮಗಳನ್ನು ಸಂಪೂರ್ಣವಾಗಿ ಸ್ಥಳಾಂತರಿಸಿ ಅಂದಿನ ಮುಖ್ಯಮಂತ್ರಿಗಳ ಮನವೊಲಿಸಿ ಆಸರೆ ಯೋಜನೆಯಡಿ ಪುನರ್ವಸತಿ ಕಲ್ಪಿಸಿದ್ದು ಹಾಗೂ ಗುಡಿಸಾಗರ, ಬಸಾಪೂರ, ಆಹೆಟ್ಟಿ, ಅಮರಗೋಳ ಗ್ರಾಮಗಳನ್ನು ಭಾಗಶ ಸ್ಥಳಾಂತರಿಸುವ ಮೂಲಕ ಗ್ರಾಮಸ್ಥರಲ್ಲಿದ್ದ ಭಯವನ್ನು ದೂರು ಮಾಡಿ ೧೪೭೭ ಮನೆಗಳನ್ನು ನಿರ್ಮಿಸಿ ನೆರಳಾಗಿದ್ದರಿಂದ ಕಷ್ಟ ಕಾಲದಲ್ಲಿ ನಮ್ಮನ್ನು ಕೈಬಿಡಲಾರರು ಎಂಬ ಜನತೆಯ ಅಚಲ ನಂಬಿಕೆ ಗಳಿಸಿಕೊಂಡ ಕೀರ್ತಿ ಇವರದು.
ಗುಂಡಗೇನಹಳ್ಳ ಹಾಗೂ ಹಂದಿಗನಹಳ್ಳಗಳ ಪ್ರವಾಹದಿಂದಾಗಿ ಸಂಕಷ್ಟಕ್ಕೀಡಾ ಗುತ್ತಿದ್ದ ಈ ಭಾಗದ ಜನರ ಸುಗಮ ಸಂಚಾರಕ್ಕಾಗಿ ರೂ.೭ ಕೋಟಿ ಬಿಡುಗಡೆಗೊಳಿಸಿ ಬೃಹತ್ ಸೇತುವೆ ನಿರ್ಮಿಸಿದ್ದಾರೆ. ಒಟ್ಟು ಲೋಕೊಪ ಯೋಗಿ ಇಲಾಖೆಯಿಂದ ರೂ.೨೬೧ ಕೋಟಿ ವೆಚ್ಚದಲ್ಲಿ ಕ್ಷೇತ್ರದಲ್ಲಿನ ಪ್ರಮುಖ ಸೇತುವೆಗಳನ್ನು ರಸ್ತೆಗಳನ್ನು ನಿರ್ಮಿಸಿ ರೈತರಿಗೆ ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸಿದ್ದಾರೆ.

ಮಹದಾಯಿಗೆ ಮಿಡಿದ ನಾಯಕ

ಮಹದಾಯಿ ಹಾಗೂ ಕಳಸಾ ಬಂಡೂರಿ ಯೋಜನೆ ಉತ್ತರ ಕರ್ನಾಟಕದ ರೈತರ ಪಾಲಿನ ಜೀವದಾಯಿನಿಯಾಗಿದೆ ಎಂದು ಅರಿತು ಅದರ ಅನುಷ್ಠಾನಕ್ಕಾಗಿ ಒಂದುವರೆ ದಶಕದ ಹಿಂದೆಯೇ ಇಂದಿನ ಗೃಹ ಸಚಿವ ಬಸವರಾಜ ಬೊಮ್ಮಾಯಿಯವರೊಂದಿಗೆ ನರಗುಂದವರೆಗೆ ನಡೆದ ಪಾದಯಾತ್ರೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರಲ್ಲದೇ ತದನಂತರ ಅನುಷ್ಠಾನಗೊಳಿಸಲು ವಿವಿಧ ರೈತ ಸಂಘಟಕರನ್ನು ಗೋವಾ ರಾಜ್ಯದವರೆಗೆ ಕರೆದೊಯ್ದದ್ದಲ್ಲದೇ ಅಲ್ಲಿನ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿಸಿ ಮಾತುಕತೆ ಮೂಲಕ ಯೋಜನೆ ಅನುಷ್ಠಾನಕ್ಕೆ ಸಹಕಾರ ನೀಡುವಂತೆ ಮನವೊಲಿಸುವ ಪ್ರಯತ್ನ ಮಾಡಿದ್ದಲ್ಲದೇ ದಿಲ್ಲಿಗೂ ನಿಯೋಗ ಒಯ್ದು ಬಿಜೆಪಿ ವರಿಷ್ಠರ ಮನವೊಲಿಸುವಲ್ಲಿ ಇವರ ಪಾತ್ರ ಮಹತ್ವದ್ದಾಗಿದೆ. ಸದಾ ರೈತರೊಂದಿಗೆ ಸಹಕಾರ ಕೋಡುತ್ತಾ ಹೋರಾಟದಲ್ಲಿಯು ಪಾಲ್ಗೊಂಡಿದ್ದಾರೆ. ರಾಜ್ಯದಲ್ಲಿಯೇ ವಿಧಾನಸಭಾ ಕ್ಷೇತ್ರಕ್ಕೆ ಹೆಚ್ಚು ಅನುದಾನ ಪಡೆದ ಶಾಸಕರೆಂಬ ಹೆಗ್ಗಳಿಕೆ ಪಡೆದು ಮುಖ್ಯಮಂತ್ರಿಗಳಿಂದ ಪ್ರಶಂಸೆ ಪಡೆದ ದಾಖಲೆ ಇವರದಾಗಿದೆ.

ಬಂಡಾಯದ ನಾಡಿನ ಭಗೀರಥ

ನೀರಿಗಾಗಿ ಸರ್ಕಾರವನ್ನೇ ಕೆಡಹಿದ ಇತಿಹಾಸವಿರುವ ನೆಲದಲ್ಲಿ ಜನ್ಮತಳೆದು ಹನಿ ಹನಿ ನೀರಿನ ಬೆಲೆ ಅರೆತಿರುವ,ಅನ್ನದಾತನ ಸಂಕಷ್ಟ ಎಳೆ ಎಳೆ ಅರಿತಿರುವ ಮುನೇನಕೊಪ್ಪ ಅವರು ಕಾಲುವೆ ಅಂಚಿನವರೆಗೂ ಕೊನೆ ಅಂಚಿನದವರಿಗೂ ಏತ ನೀರಾವರಿ ಮೂಲಕ ನೀರು ಹರಿಸಿದ ಆಧುನಿಕ ಭಗೀರಥ ಎಂದರೆ ತಪ್ಪಾಗಲಾರದು. ಮಲಪ್ರಭಾ ಜಲಾಶಯದಿಂದ ಹೊಲಕ್ಕೆ ನೀರು ಸಿಗದೇ ವಂಚಿತರಾದ ನವಲಗುಂದ ಮತಕ್ಷೇತ್ರದ ಅಮರಗೋಳ, ಬೆಳವಟಗಿ, ಅಳಗವಾಡಿ ಮತ್ತು ಹುಣಸಿಕಟ್ಟಿ ಗ್ರಾಮಗಳ ಕಟ್ಟ ಕಡೆಯ ರೈತರ ಕನಸಿಗೆ ರೆಕ್ಕೆ ಹಚ್ಚಿದ್ದಾರೆ.೨೦೦೮ರಲ್ಲಿ ಈ ಭಾಗದ ರೈತರ ಸಮಸ್ಯೆ ಮನಗಂಡು ಬೆಣ್ಣಿಹಳ್ಳ ಮತ್ತು ತುಪ್ಪರಿಹಳ್ಳದಲ್ಲಿ ಒಟ್ಟು ೧೩೭ ಕಿಮೀವರೆಗೆ ವ್ಯರ್ಥವಾಗಿ ಹರಿಯುತ್ತಿದ್ದ, ನೀರಿಗೆ ಏತ ನೀರಾವರಿ ಅಳವಡಿಸಿ ಕಡೆಯಂಚಿನ (ಕಟ್ಟಕಡೆಯ) ರೈತರ ಜಮೀನುಗಳಿಗೆ ನೀರು ಹರಿಸಬೇಕೆಂಬ ಮಹತ್ವದ ಯೋಜನೆ ಮತ್ತೆ ಅವರೇ ದ್ವಿತೀಯ ಬಾರಿಗೆ ಶಾಸಕರಾದಾಗಲೇ ಕಳೆದ ಇದೀಗ ಸಾಕಾರಗೊಂಡಿದ್ದು ರೈತರು ನೆಮ್ಮಯ ನಿಟ್ಟುಸಿರು ಬಿಟ್ಟಿದ್ದಾರೆ.

ಅಮರಗೋಳದಲ್ಲಿ ಬೆಣ್ಣಿಹಳ್ಳಕ್ಕೆ ಮತ್ತು ಗೊಬ್ಬರಗುಂಪಿಯಲ್ಲಿ ತುಪ್ಪರಿಹಳ್ಳಕ್ಕೆ ಎರಡು ಬಹುದೊಡ್ಡ ಏತ ನೀರಾವರಿ ಯೋಜನೆಗೆ ೨೦೧೨ರಲ್ಲಿ ಆಗಿನ ಶಾಸಕ ಮತ್ತು ಮುಖ್ಯಮಂತ್ರಿ ಸಂಸದೀಯ ಕಾರ್ಯದರ್ಶಿಯಾಗಿದ್ದ ಶಂಕರಪಾಟೀಲ ಅವರು ೪೮ ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿದ್ದರು. ಆಗಿನ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಕಾಮಗಾರಿ ಉದ್ಘಾಟಿಸಿದ್ದರು. ಅಂದಿನಿಂದ ಏತನೀರಾವರಿ ಯೋಜನೆ ಕಾರಣಾಂತರಗಳಿಂದ ವಿಳಂಭಗೊಂಡು ಮತ್ತೆ ಬಿಜೆಪಿ ಸರ್ಕಾರದಲ್ಲಿಯೇ ೬.೨೨ ಕೋಟಿ ರೂ., ಹೆಚ್ಚುವರಿ ಅನುದಾನ ಪಡೆಯುವ ಮೂಲಕ ಒಟ್ಟು ೫೪ ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಂಡಿದೆ. ಎರಡು ಏತ ನೀರಾವರಿಗಳನ್ನು ಕಳೆದ ಡಿಸೆಂಬರ್ ೧೮ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಚಾಲನೆ ನೀಡಿರುವುದು ಮುನೇನಕೊಪ್ಪ ಅವರ ಅನ್ನದಾತರ ಬಗೆಗಿನ ಕಾಳಜಿಗೆ ಹಿಡಿದ ಕೈಗನ್ನಡಿಯಾಗಿದೆ.

ಸರ್ವಸಮುದಾಯದ ಹಿತಚಿಂತಕ

೨೦೧೩ರಲ್ಲಿ ಅಲ್ಪಮತದಿಂದ ಪರಾಭವಗೊಂಡರೂ ಕ್ಷೇತ್ರದಾದ್ಯಂತ ಸಂಚರಿಸುತ್ತಾ ಜನಪ್ರತಿನಿಧಿಗಳ ತಪ್ಪನ್ನು ಎತ್ತಿ ತೋರಿಸುತ್ತ ತಮ್ಮ ಆಡಳಿತಾವಧಿಯಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳು ಹಾಗೂ ಪ್ರಧಾನಿ ನರೇಂದ್ರ ಮೋದಿಯವರು ಜಾರಿಗೆ ತಂದಿರುವ ವಿವಿಧ ಯೋಜನೆಗಳ ಬಗ್ಗೆ ಮನಮುಟ್ಟುವಂತೆ ತಿಳಿಸುತ್ತಾ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಂಡಿದ್ದರಲ್ಲದೇ ಮತ್ತೆ ಜನತೆಯ ಆಶೀರ್ವಾದಕ್ಕೆ ಪಾತ್ರರಾಗಿದ್ದು ಅವರ ಜನಪರ ಕಾಳಜಿಗೆ ಹಿಡಿದ ಕೈಗನ್ನಡಿ

ಕೋವಿಡ್‌ನಲ್ಲೂ ಹಿತಕಾಯ್ದ ನೇತಾರ

ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಯಾವುದೇ ಕಾರಣಕ್ಕೆ ರಾಜಿ ಮಾಡಿಕೊಳ್ಳದ ಮುನೇನಕೊಪ್ಪ ಅವರು ಕೋವಿಡ್ ಮಹಾಮಾರಿಯಿಂದಾಗಿ ಸಂಕಷ್ಟಕ್ಕೊಳಗಾದವರಿಗೆ ನೆರವು ನೀಡಿದ್ದಾರೆ. ಮೊದಲ ಹಾಗೂ ಎರಡನೇ ಲಾಕ್‌ಡೌನ್‌ನಿಂದಾಗಿ ಸಮಸ್ಯೆಗೆ ಸಿಲುಕಿದ ಕುಟುಂಬಗಳಿಗೆ ಅಗತ್ಯ ನೆರವು ನೀಡುತ್ತಿರುವುದಲ್ಲದೆ, ಆಹಾರ ಕಿಟ್‌ಗಳ ವಿತರಣೆ, ಕೃಷಿ ಚಟುವಟಿಕೆಗಳಿಗೆ ತೊಂದರೆ ಆಗದಂತೆ ಕೈಗೊಳ್ಳಬೇಕಾದ ವಿವಿಧ ಕ್ರಮಗಳ ಬಗ್ಗೆಯೂ ಸ್ವತಃ ಮುತುವರ್ಜಿ ವಹಿಸಿದ್ದಾರೆ. ಅಧಿಕಾರಿಗಳ ಜತೆ ನಿರಂತರ ಸಂಪರ್ಕ, ಮಾಹಿತಿ ಸಂಗ್ರಹ, ಪರಿಹಾರ ಕ್ರಮಗಳ ಸೂಚನೆಯ ಮೂಲಕ ಕ್ಷೇತ್ರದ ಹಿತ ಕಾಯುವ ನಿಟ್ಟಿನಲ್ಲಿ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ. ನವಲಗುಂದ ಕ್ಷೇತ್ರ ನವಲಗುಂದ, ಅಣ್ಣಿಗೇರಿ ತಾಲೂಕು ಹಾಗೂ ಹುಬ್ಬಳ್ಳಿ ತಾಲೂಕಿನ ಕೆಲ ಭಾಗವನ್ನೊಳಗೊಂಡಿದ್ದು, ಎಲ್ಲ ಕಡೆಗೂ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿ ಅವರಿಗೆ ನೆರವಿನ ಹಸ್ತ ಚಾಚಿದ್ದಾರೆ.

ಎಲ್ಲರೊಂದಿಗೆ ಉತ್ತಮ ಬಾಂಧವ್ಯ

ಪಕ್ಷದ ಎಲ್ಲ ನಾಯಕರೊಂದಿಗೂ ಉತ್ತಮ ಬಾಂಧವ್ಯ ಹೊಂದಿರುವ ಮುನೇನಕೊಪ್ಪ ಅವರು ಜಿಲ್ಲೆಯ ಅಭಿವೃದ್ದಿ ವಿಷಯ ಬಂದಾಗ ಮಾಜಿ ಸಿಎಂ ಜಗದೀಶ ಶೆಟ್ಟರ್, ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರ ಅಣತಿಯನ್ನೂ ಚಾಚು ತಪ್ಪದೆ ನಿರ್ವಹಿಸುವರಲ್ಲದೇ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಹಳೆಯ ಒಡನಾಡಿ, ಸಿ.ಸಿ.ಪಾಟೀಲ ಸೇರಿದಂತೆ ಡಜನ್‌ಗೂ ಹೆಚ್ಚು ಸಚಿವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ.

 

ಎರಡು ಬಾರಿ ಜನ ಆಶೀರ್ವದಿಸಿದ್ದಾರೆ.ಅಲ್ಲದೇ ಈಗ ಅವರ ಕಾರ್ಯವನ್ನು ಗುರುತಿಸಿ ಸರ್ಕಾರ ಸಚಿವ ಸ್ಥಾನವನ್ನು ನೀಡಿದೆ. ಅತ್ಯುತ್ತಮವಾಗಿ ಕೆಲಸ ನಿರ್ವಹಿಸಿ ಪಕ್ಷಕ್ಕೆ ಹಾಗೂ ಜಿಲ್ಲೆಗೆ ನಿಶ್ಚಿತವಾಗಿ ಹೆಸರು ತರಲಿದ್ದಾರೆ.

ಪ್ರಭಾವತಿ ಶಂಕರಪಾಟೀಲ ಮುನೇನಕೊಪ್ಪ ಪತ್ನಿ

ಸಿದ್ಧಾರೂಢರ ದರ್ಶನ ಪಡೆದ ಸಚಿವರು
೧೦೧ ಕಾಯಿ ಒಡೆದು ಹರಕೆ ತೀರಿಸಿದರು.

ಹುಬ್ಬಳ್ಳಿ : ಶಂಕರ ಪಾಟೀಲರು ಸಚಿವರಾದರೆ ನೂರಾ ಒಂದು ತೆಂಗಿನಕಾಯಿ ಸಿದ್ಧಾರೂಢಮಠದಲ್ಲಿ ಒಡೆಯುವ ಹರಕೆಯನ್ನು ಅವರ ಬಾಲ್ಯದ ಒಡನಾಡಿ ಗಿರಣಿ ಚಾಳದ ಚಂದ್ರು ಮುಶಪ್ಪನವರ ಹೊತ್ತಿದ್ದರು.


ಇಂದು ಸಚಿವರಾಗಿ ಮೊದಲ ಬಾರಿಗೆ ಹುಬ್ಬಳ್ಳಿಗೆ ಬಂದು ಸಿದ್ಧಾರೂಢಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿಯೇ ಈ ಹರಕೆಯನ್ನು ಇಂದು ಮುಶಪ್ಪನವರ ಮುನೇನಕೊಪ್ಪ ಅವರಿಂದಲೇ ಪೂರೈಸಿದರು.
ಶಂಕರಪಾಟೀಲರು ಶ್ರೀ ಸಿದ್ಧಾರೂಢರ ಹಾಗೂ ಗುರುನಾಥಾರೂಢರ ದರ್ಶನಾಶೀರ್ವಾದ ಪಡೆದ ವೇಳೆ ಟ್ರಸ್ಟ ಕಮೀಟಿಯಿಂದ ಅವರನ್ನು ಸನ್ಮಾನಿಸಲಾಯಿತು.
ಟ್ರಸ್ಟ ಅಧ್ಯಕ್ಷ ಡಿ.ಡಿ.ಮಾಳಗಿ ಇತರ ಧರ್ಮದರ್ಶಿಗಳು, ಬಾಳು ಮಗಜಿಕೊಂಡಿ, ರಂಗಾಬದ್ದಿ ಸೇರಿದಂತೆ ಅನೇಕರಿದ್ದರು.

ಮೂರುಸಾವಿರಮಠದಲ್ಲಿ ಕರ್ತೃ ಗದ್ದುಗೆ ದರ್ಶನ

ಹುಬ್ಬಳ್ಳಿ: ಸಚಿವ ಶಂಕರ ಪಾಟೀಲ ಅವರು ಮೂರುಸಾವಿರಮಠಕ್ಕೆ ತೆರಳಿ ಗುರುಸಿದ್ಧೇಶ್ವರರ ಕರ್ತೃ ಗದ್ದುಗೆ ದರ್ಶನಾಶೀರ್ವಾದ ಪಡೆದರು.
ಈ ವೇಳೆ ಸಚಿವರನ್ನು ಮಠದ ಪೂಜಾ ಸಮಿತಿಯಿಂದ ಸನ್ಮಾನಿಸಲಾಯಿತು.


ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಪ್ರಭು ನವಲಗುಂದಮಠ, ಡಿ.ಕೆ.ಚವ್ಹಾಣ, ಮಹೇಶ ಟೆಂಗಿನಕಾಯಿ, ಬಸವರಾಜ ಕುಂದಗೋಳಮಠ, ಶಿವು ಮೆಣಸಿನಕಾಯಿ, ಎಚ್.ವಿ.ಬೆಳಗಲಿ, ರಾಜಶೇಖರ ಕಂಪ್ಲಿ, ಮಹಾದೇವ ಭಗವತಿ, ಸತೀಶ ಶೇಜವಾಡಕರ ಸೇರಿದಂತೆ ಅನೇಕರಿದ್ದರು.

ನೂತನ ಸಚಿವರಿಗೆ ಅಭೂತಪೂರ್ವ ಸ್ವಾಗತ
ಕೇಶವಕುಂಜ,ಪಕ್ಷದ ಕಚೇರಿಗೆ ಭೇಟಿ

ಹುಬ್ಬಳ್ಳಿ : ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾಗಿ ಮೊದಲ ಬಾರಿಗೆ ತವರಿಗೆ ಆಗಮಿಸಿದ ಶಂಕರಪಾಟೀಲ ಮುನೇನಕೊಪ್ಪ ಅವರನ್ನು ಸಾವಿರಾರು ಕಾರ್ಯಕರ್ತರು ಪಟಾಕ್ಷಿ ಸಿಡಿಸಿ ಅಭೂತಪೂರ್ವವಾಗಿ ಸ್ವಾಗತಿಸಿದರು.


ಮುನೇನಕೊಪ್ಪ ಪರ ಘೋಷಣೆಗಳು ಮುಗಿಲು ಮುಟ್ಟಿದವು.ನವಲಗುಂದ, ಹುಬ್ಬಳ್ಳಿ ತಾಲೂಕಿನ ವಿವಿಧೆಡೆಯಿಂದ ಬಂದ ಅಸಂಖ್ಯಾತ ಅಭಿಮಾನಿಗಳು ಪಾಲ್ಗೊಂಡಿದ್ದರು.
ವಿಮಾನ ನಿಲ್ದಾಣದಲ್ಲಿಂದ ಹೊರಬರುತ್ತಿದ್ದಂತೆಯೇ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಸೆಂಟ್ರಲ್ ಅಧ್ಯಕ್ಷ ಸಂತೋಷ ಚವ್ಹಾಣ, ಲಿಂಗರಾಜ ಪಾಟೀಲ, ದತ್ತಮೂರ್ತಿ ಕುಲಕರ್ಣಿ, ತಿಪ್ಪಣ್ಣ ಮಜ್ಜಗಿ, ವಿಜಯಾನಂದ ಶೆಟ್ಟಿ, ಬಾಳು ಮಗಜಿಕೊಂಡಿ ಸೇರಿದಂತೆ ಅನೇಕರು ಆತ್ಮೀಯವಾಗಿ ಸ್ವಾಗತಿಸಿದರು.


ವಿಮಾನನಿಲ್ದಾಣದಿಂದ ನೇರವಾಗಿ ಸಂಘದ ಶಕ್ತಿ ಕೇಂದ್ರ ’ಕೇಶವಕುಂಜ’ಕ್ಕೆ ಭೇಟಿ ನೀಡಿ ಆರ್‌ಎಸ್‌ಎಸ್ ಸಂಸ್ಥಾಪಕ ಹೆಡಗವಾರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಂಘದ ಅಖಿಲ ಭಾರತ ವ್ಯವಸ್ಥಾ ಪ್ರಮುಖ ಮಂಗೇಶ ಬೆಂಡೆ ಸಹಿತ ಹಿರಿಯರ ಆಶೀರ್ವಾದ ಪಡೆದರು.
ಮತ್ತಿತರರನ್ನು ಭೇಟಿಯಾಗಿ ಕೆಲ ಕಾಲ ಅಲ್ಲಿದ್ದು ಸಿದ್ಧಾರೂಢಮಠ, ಮೂರುಸಾವಿರಮಠಕ್ಕೆ ಭೇಟಿ ನೀಡಿದರಲ್ಲದೇ ಕಿತ್ತೂರ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಬಸವೇಶ್ವರರ ಪುತ್ಥಳಿಗೆ ಮಾಲಾರ್ಪಣೆ ದೇಶಪಾಂಡೆ ನಗರದ ಪಕ್ಷದ ಕಾರ್ಯಾಲಯಕ್ಕೆ ಭೇಟಿ ನೀಡಿದರು.
ತದನಂತರ ಮಾರ್ಗದರ್ಶಕರು, ಮಾಜಿ ಸಿಎಂ ಜಗದೀಶ ಶೆಟ್ಟರ್ ನಿವಾಸಕ್ಕೆ ತೆರಳಿ ಅವರನ್ನು ಭೇಟಿಯಾದ ನಂತರ ಶ್ರೀನಿವಾಸ ಗಾರ್ಡನ್‌ನಲ್ಲಿ ಕ್ಷೇತ್ರದ ಜನತೆ ಏರ್ಪಡಿಸಿದ್ದ ಸಮಾರಂಭದಲ್ಲಿ ಪಾಲ್ಗೊಂಡು ನವಲಗುಂದದತ್ತ ತೆರಳಿದರು.

administrator

Related Articles

Leave a Reply

Your email address will not be published. Required fields are marked *